ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bangalore Mysore Expressway) ಸಂಚಾರ ಪ್ರಾರಂಭವಾಗಿ ಕೆಲವೇ ತಿಂಗಳು ಗತಿಸಿವೆ. ಆದರೆ, ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾರಣ ತಿಳಿಯಲು ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಮಂಗಳವಾರ ಹೆದ್ದಾರಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅಲ್ಲದೆ, ಕೆಲವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದು, ಪಾಲಿಸದೇ ಇದ್ದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಸೂಚನೆ ಅನುಸಾರ ಇನ್ನು ಮುಂದೆ ಹೆದ್ದಾರಿಯಲ್ಲಿ ಎಲ್ ಬೋರ್ಡ್ ವಾಹನ ಸವಾರರಿಗೆ ಅವಕಾಶ ಇಲ್ಲವೇ ಎಂಬ ಪ್ರಶ್ನೆ ತಲೆದೋರಿದೆ.
ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ (ಜೂನ್ 27) ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಪರಿಶೀಲನೆ ನಡೆಸಲಾಯಿತು. ಬಳಿಕ ಮಾತನಾಡಿದ ಅವರು, ನಾನು ಈ ರಸ್ತೆಯಲ್ಲಿ ಬಹಳ ಭಾರಿ ಸಂಚರಿಸಿದ್ದೇನೆ. ಕಳೆದ ಐದಾರು ತಿಂಗಳಿನಿಂದ 58ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಪಘಾತಗಳೂ ಹೆಚ್ಚಾಗಿವೆ. ಮಂಡ್ಯ ಸೇರಿದಂತೆ ಎಲ್ಲೆಲ್ಲಿ ಅಪಘಾತಗಳು ನಡೆದಿವೆಯೋ? ಆ ಎಲ್ಲ ಕಡೆಗಳಲ್ಲಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಹೆಂಡತಿಯರೇ ನಿಮಗೆ ಬೇರೆ ಸಂಬಂಧ ಇದ್ರೆ ಓಡಿ ಹೋಗಿ, ಕಟ್ಟಿಕೊಂಡ ಗಂಡನ ಕೊಲೆ ಮಾಡಬೇಡಿ!
ಈ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಮನ – ನಿರ್ಗಮನ ಪ್ರವೇಶದ್ವಾರ ಸಮಸ್ಯೆ ಇದೆ. ರಸ್ತೆ ಸಹ ಸಮರ್ಪಕವಾಗಿಲ್ಲ. ಇದು ಅಂಕುಡೊಂಕಾಗಿದೆ. ಇದರಿಂದ ವೇಗವಾಗಿ ವಾಹನಗಳು ಡಿವೈಡರ್‌ಗೆ ಡಿಕ್ಕಿ ಹೊಡೆಯುತ್ತಿವೆ. ಇದಕ್ಕಾಗಿ ನಾವು ಲೇನ್ ಡಿಸಿಪ್ಲಿನ್ ಅನ್ನು ಬಳಸಬೇಕು ಎಂದು ಅಲೋಕ್ ಕುಮಾರ್ ಹೇಳಿದರು.
ಸ್ಪೀಡ್ ರಾಡಾರ್ ಅಳವಡಿಸುತ್ತೇವೆ
ಈಗ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಾವು ನಾಲ್ಕು ಹೈವೇ ಪೆಟ್ರೊಲಿಂಗ್ ವ್ಯವಸ್ಥೆ ಮಾಡಿದ್ದೇವೆ. ಇನ್ನು ವೇಗದ ಮಿತಿಯನ್ನು ಕಡಿಮೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಹೈ ಸ್ಪೀಡ್ ಲಿಮಿಟ್ ತರಲು ಚಿಂತನೆ ನಡೆಸಿದ್ದು, ಸ್ಪೀಡ್ ರಾಡಾರ್ ಅನ್ನು ಅಳವಡಿಕೆ ಮಾಡುತ್ತೇವೆ. ಮೊಬೈಲ್ ಬಳಕೆ, ಡ್ರಂಕ್ ಆ್ಯಂಡ್ ಡ್ರೈವ್ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಲೈಸೆನ್ಸ್ ರದ್ದುಗೊಳಿಸುವ ಕೆಲಸ ಮಾಡುತ್ತೇವೆ ಎಂದು ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
ಒಟ್ಟಾರೆಯಾಗಿ ಕನಿಷ್ಠ ಶೇ.25 ರಷ್ಟು ಅಪಘಾತ ಕಡಿಮೆ ಮಾಡುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ, ಸೂಚನೆ ನೀಡಿದ್ದೇವೆ. ಇಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಅಮೂಲ್ಯವಾದ ಜೀವಕ್ಕಾಗಿ ನಿಧಾನವಾಗಿ ಚಲಿಸಬೇಕಿದೆ. ನಮ್ಮ ಕುಟುಂಬಕ್ಕೆ ನಾವುಗಳೇ ಮುಖ್ಯವಾಗುತ್ತೇವೆ. ಸುಗಮ ಸಂಚಾರಕ್ಕೆ ಸೀಟ್ ಬೆಲ್ಟ್, ಇಂಡಿಕೇಟರ್ ಬಳಕೆ, ಸ್ಪೀಡ್ ಲಿಮಿಟ್‌ನಲ್ಲಿಯೇ ವಾಹನ ಚಲಾಯಿಸಬೇಕಿದೆ. ಗರಿಷ್ಠ ಮಿತಿ 100 ಕಿ.ಮೀ ಇದೆ. ತಿರುವುಗಳಲ್ಲಿ 60- 80 ವೇಗಕ್ಕೆ ಮಿತಿಗೊಳಿಸಿಕೊಳ್ಳಬೇಕು. ನಮ್ಮ ಸೂಚನೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಾಲಿಸದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಅಲ್ಲದೆ, ಈ ಎಲ್ಲ ಸೂಚನೆಗಳನ್ನು ಪಾಲಿಸಲು ನಾವು ಗಡುವು ನೀಡಿದ್ದೇವೆ. ನಾವು ನೀಡಿರುವ ಕಾಲಾವಕಾಶವನ್ನು ಮೀರಿದರೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಾಧಿಕಾರವು ಆಂಬ್ಯುಲೆನ್ಸ್, ಹೈವೇ ಪೆಟ್ರೋಲಿಂಗ್ ವ್ಯವಸ್ಥೆ ಮಾಡಬೇಕು. ತುರ್ತು ಗೇಟ್‌ಗಳು, ಸ್ಕೈವಾಕ್‌ಗಳ ನಿರ್ಮಾಣಕ್ಕೆ ಹೇಳಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು.
ಇದನ್ನೂ ಓದಿ: Rain News: ಕರಾವಳಿಯಲ್ಲಿ ಶುರುವಾಗಿದೆ ಗುಡ್ಡ ಕುಸಿತ ಭೀತಿ; ಹೆದ್ದಾರಿ ಸಂಚಾರವೀಗ ಬಹಳ ಫಜೀತಿ!
ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ- ರಾಹುಲ್
ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೈವೆ ಪರಿಶೀಲನೆ ಮಾಡಿದ್ದಾರೆ. ಹಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಎಡಿಜಿಪಿ ಅವರು ನೀಡಿದ ಸಲಹೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಹಂತ ಹಂತವಾಗಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಅಲೋಕ್ ಕುಮಾರ್ ತಿಳಿಸಿದರು.