ಬೆಂಗಳೂರು: ಕರ್ನಾಟಕದ ಮಾಜಿ ನೀರಾವರಿ ಸಚಿವ ಹಾಗೂ ಬಿಜೆಪಿಯ ಪ್ರಮುಖ ನಾಯಕರಾಗಿರುವ ರಮೇಶ್ ಜಾರಕಿಹೊಳಿ(Ramesh Jarkiholi) ಅವರು, ”ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯು ಪ್ರತಿ ಮತಕ್ಕೆ 6000 ರೂ. ನೀಡಲಿದೆ,” ಎಂದು ಹೇಳಿದ್ದಾರೆ. ಈ ಹೇಳಿಕೆ ವಿವಾದ ಪಡೆದುಕೊಳ್ಳುತ್ತಿದ್ದಂತೆ ಬಿಜೆಪಿಯ ರಮೇಶ್ ಜಾರಕಿಹೊಳಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಯುಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಅವರು ನೀರಾವರಿ ಸಚಿವರಾಗಿದ್ದರು. ಆದರೆ, ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಅವರು 2021ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಅವರು ಸಚಿವ ಸಂಪುಟ ಸೇರುವ ಪ್ರಯತ್ನ ನಡೆಸಿದ್ದಾರೆ. ಆದರೆ, ಇದುವರೆಗೂ ಅವರು ಮತ್ತೆ ಸಚಿವರಾಗಲು ಸಾಧ್ಯವಾಗಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಸುಳೆಭಾವಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿರುದ್ಧ ತೀವ್ರ ಟೀಕೆ ಮಾಡಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ರೂರಲ್ ಕ್ಷೇತ್ರದ ಶಾಸಕಿಯಾಗಿದ್ದರೆ, ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಅವರು (ಲಕ್ಷ್ಮೀ ಹೆಬ್ಬಾಳ್ಕರ್) ಗಿಫ್ಟ್ಸ್ ಹಂಚುತ್ತಿದ್ದಾರೆ. ಈತನಕ ಅವರು ಸಾವಿರು ರೂಪಾಯಿಯ ಕುಕ್ಕರ್ ಮತ್ತು ಮಿಕ್ಸರ್ ಗಿಫ್ಟ್ ಆಗಿ ಕೊಡುತ್ತಿದ್ದಾರೆ. ಬಹುಶಃ ಮತ್ತೊಂದು ಸೆಟ್ ಗಿಫ್ಟ್ ಕೊಡಬಹುದು. ಎಲ್ಲವೂ ಸೇರಿ ಅಬ್ಬಬ್ಬಾ ಎಂದರೆ 3000 ರೂ. ಆಗಬಹುದು. ನಾನು ನಿಮಗೆ ಹೇಳುತ್ತೇನೆ, ನಾವು ಒಂದು ವೇಳೆ ನಿಮಗೆ 6000 ರೂ. ಕೊಡದಿದ್ದರೆ ನಮ್ಮ ಅಭ್ಯರ್ಥಿಗೆ ಮತವನ್ನೇ ಹಾಕಬೇಡಿ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಗೋವಿಂದ ಕಾರಜೋಳ ಅವರು, ನಮ್ಮ ಪಕ್ಷದಲ್ಲಿ ಇಂಥದ್ದಕ್ಕೆಲ್ಲ ಅವಕಾಶವಿಲ್ಲ. ನಮ್ಮ ಪಕ್ಷದವು ಸಿದ್ಧಾಂತದ ಮೇಲೆ ನಿಂತಿದೆ. ಅದರಿಂದಾಗಿಯೇ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷವು ಎರಡನೇ ಬಾರಿಗೆ ಭಾರೀ ಬಹಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಕರ್ನಾಟಕದ 2023ರ ಚುನಾವಣೆಯಲ್ಲೂ ನಾವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದ್ದಾರೆ.