ಬೆಂಗಳೂರು: ಕುಮಾರಸ್ವಾಮಿ ಅವರು ಏನೇನೋ ಮಾತಾಡಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಜನ ಅವರನ್ನೇ ನೋಡಿ ನಗುತ್ತಾರೆ. ನಾನು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೆ ಎಂದು ನಮ್ಮ ಕ್ಷೇತ್ರದ ಜನರು ಹಾಗೂ ನಿಮ್ಮ ಕಾರ್ಯಕರ್ತರು ಹೇಳಿದರೆ, ಈ ಕೂಡಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ, ಆಗ ನೀವೇನು ಮಾಡುತ್ತೀರಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಡಿ.ಕೆ.ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ.
ಕುಮಾರಸ್ವಾಮಿಯವರ ಬ್ಲೂ ಫಿಲಂ ಆರೋಪದ ಬಗ್ಗೆ ಸದಾಶಿವನಗರದ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಮಾಜಿ ಮುಖ್ಯಮಂತ್ರಿಯ ಮಾತಿಗೆ ತೂಕ, ಗೌರವ ಇರಬೇಕು. ನಾನು ಕ್ಷೇತ್ರಕ್ಕೆ ಹೋಗದಿದ್ದರೂ ನನ್ನನ್ನು 1,23,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನನ್ನ ಕನಕಪುರ ಕ್ಷೇತ್ರದ ಜನತೆ ನನ್ನ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದಾರೆ” “ಕುಮಾರಸ್ವಾಮಿಯವರು ಹತಾಶರಾಗಿದ್ದಾರೆ. ಅವರ ಹತಾಶೆ ಅವರನ್ನು ಈ ರೀತಿಯಾಗಿ ಮಾತನಾಡಿಸುತ್ತಿದೆ ಎಂದು ಕಿಡಿ ಕಾರಿದರು.
ಅವರೇ ಹೋಗಿ ಕನಕಪುರದ ಜನರನ್ನು ಮಾತನಾಡಿಸಲಿ. ʼಡಿ.ಕೆ.ಶಿವಕುಮಾರ್ ಹೀಗೆ ಮಾಡಿದ್ದರೇʼ? ಎಂದು ನಿಮ್ಮ ಕಾರ್ಯಕರ್ತರನ್ನೇ ಕೇಳಿ. ನಾನು ಈ ರೀತಿಯ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೆ ಎಂದು ನಮ್ಮ ಕ್ಷೇತ್ರದ ಜನರು ಹಾಗೂ ನಿಮ್ಮ ಕಾರ್ಯಕರ್ತರು ಹೇಳಿಸಿ ಆರೋಪ ಸಾಬೀತು ಮಾಡಿದರೆ ಈ ಕೂಡಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಕುಮಾರಸ್ವಾಮಿ ಅವರು, ಅವರ ತಂದೆ ನನ್ನ ವಿರುದ್ಧ ಚುನಾವಣೆಗೆ ನಿಂತಿದ್ದಾಗ ಯಾಕೆ ಈ ವಿಚಾರ ಎತ್ತಲಿಲ್ಲ? ಮಾತನಾಡಲಿಲ್ಲ. ಈಗ ಏಕೆ ಈ ರೀತಿ ಮಾತನಾಡುತ್ತಿದ್ದಾರೆ. ನಾನು ಇಂದಿರಾ ಗಾಂಧಿ ಅವರ ನೆನಪಿನಲ್ಲಿ ಟೆಂಟ್‌ಗಳನ್ನು ತೆರೆದಿದ್ದವನು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ | Karnataka Politics : ಕೆಲವೇ ದಿನದಲ್ಲಿ 30-40 ಶಾಸಕರು ಕಾಂಗ್ರೆಸ್‌ನಿಂದ ಔಟ್ ಎಂದ ಕಟೀಲ್
ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲಿ
ಬಿಜೆಪಿ ಬರ ಪ್ರವಾಸ ಮಾಡಲು ಸಜ್ಜಾಗುತ್ತಿದೆ ಎಂದು ಕೇಳಿದಾಗ “ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಲಿ. ರಾಜ್ಯದ ಎಲ್ಲಾ ಸಂಸದರನ್ನು ಕರೆದುಕೊಂಡು ಹೋಗಿ ಬರ ಪರಿಹಾರಕ್ಕೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ ಎಂದು ಹೇಳಿದರು.
“ಕೇಂದ್ರ ಸರ್ಕಾರವೇ ಈಗಾಗಲೇ ಬರ ಪರಿಸ್ಥಿತಿಯ ಕುರಿತು ವರದಿ ನೀಡಿದೆ. ಪ್ರವಾಸ ಮಾಡುವವರನ್ನು ನಾವು ಬೇಡ ಎಂದು ಹೇಳುವುದಿಲ್ಲ” ಪಕ್ಷ ಕಟ್ಟಿಕೊಳ್ಳಲಿ, ಪ್ರವಾಸ ಮಾಡಲಿ, ನಮಗೇನು ತೊಂದರೆ ಇಲ್ಲ. ನೂರು ದಿನ ಇರುವ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು 150 ದಿನಕ್ಕೆ ಹೆಚ್ಚಳ ಮಾಡಲಿ. ಆಗ ಈ ದೇಶಕ್ಕೆ ಬಿಜೆಪಿ ಒಳ್ಳೆಯದನ್ನು ಮಾಡುತ್ತಿದೆ ಎಂದು ಈ ದೇಶದ ಜನ ಮತ್ತು ನಾವು ನಂಬುತ್ತೇವೆ ಎಂದು ಕುಹಕವಾಡಿದರು.
ಸೈಯದ್ ನಗರದಲ್ಲಿ ತಾಲಿಬಾನ್ ಮಾದರಿಯ ಶಿಕ್ಷಣ ಕೊಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಆಯೋಗ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ ಎಂದು ಕೇಳಿದಾಗ “ಇವೆಲ್ಲಾ ಎಲೆಕ್ಷನ್ ಸಮಯದಲ್ಲಿ ಏಳುವ ವದಂತಿಗಳು. ನೀವು ಹೇಳುತ್ತಿರುವ ವಿಚಾರವಾಗಿ ನಾನು ಒಮ್ಮೆ ವಿಚಾರಿಸಿ ಹೇಳುತ್ತೇನೆ” ಎಂದರು.
ವಿದ್ಯುತ್ ಸ್ಪರ್ಶದಿಂದ ತಾಯಿ- ಮಗು ಮರಣದ ಬಗ್ಗೆ ಪ್ರತಿಕ್ರಿಯಿಸಿ “ಇದು ಗಂಭೀರವಾದ ವಿಚಾರ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ತಂತಿಯ ಬದಲಿಗೆ ಕೇಬಲ್ ಅಳವಡಿಕೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನೀವು ಸಹಕರಿಸಬೇಕು ನಾನು ಅದನ್ನು ಸರಿಪಡಿಸುತ್ತೇನೆ ಎಂದರು.
ಜಾರಕಿಹೊಳಿ ಸಿಎಂ ಆಗಲಿ ಎಂದು ಸವದತ್ತಿ ಎಂಎಲ್ಎ ವಿಶ್ವಾಸ್ ವೈದ್ಯ ಹೇಳುತ್ತಿದ್ದಾರೆ ಎಂದಾಗ “ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ” ಎಂದರು.
ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಬಗ್ಗೆ ಸ್ಪಂದಿಸಿ, ಯಾರು ಹಾಕಿದ್ದರೂ ತಪ್ಪೇ. ನಾನು ಇಂತಹ ಕೀಳು ಮಟ್ಟದ ರಾಜಕಾರಣಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Caste Census : ಜಾತಿ ಗಣತಿ ವರದಿ ತಿರಸ್ಕಾರ ಮನವಿಗೆ ಸಹಿ ಹಾಕಿದ ಡಿ.ಕೆ. ಶಿವಕುಮಾರ್!
ರಂದೀಪ್ ಸುರ್ಜೇವಾಲ ಅವರ ರಾಜ್ಯ ಭೇಟಿಯ ಬಗ್ಗೆ ಕೇಳಿದಾಗ “ಸುರ್ಜೇವಾಲ ಅವರು ಪಕ್ಷದ ಕಾರ್ಯವೈಖರಿ ಬಗ್ಗೆ ಚರ್ಚೆ ಮಾಡಲು ಬರುತ್ತಿದ್ದಾರೆ” ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ