ವೀರೇಶ್ ಹಿರೇಮಠ, ಬೆಂಗಳೂರು
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಕೇಂದ್ರ ಸರ್ಕಾರವೇನೋ ನೂತನ ಶಿಕ್ಷಣ ನೀತಿ (NEP) ಜಾರಿಗೆ ತರುತ್ತಿದೆ. ಆದರೆ, ಇದೇ ಶಿಕ್ಷಣ ನೀತಿಯಿಂದ ರಾಜ್ಯದ ೪೦ ಸಾವಿರ ಅಂಗನವಾಡಿ ಶಿಕ್ಷಕಿಯರ ಉದ್ಯೋಗದ ಮೇಲೆ ಕತ್ತಿ ನೇತಾಡುತ್ತಿದೆ. ಮುಂದಿನ ವರ್ಷದಿಂದ ನೂತನ ಶಿಕ್ಷಣ ನೀತಿ ಜಾರಿಗೆ ಬರುವುದರ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆಯು ೪೦ ಸಾವಿರ ಶಿಕ್ಷಕಿಯರನ್ನು ಕೆಲಸದಿಂದ ಕೈಬಿಡಲು ಯೋಜನೆ ರೂಪಿಸಿದೆ. ಹಾಗಾಗಿ, ಸರ್ಕಾರದ ವಿರುದ್ಧ ಶಿಕ್ಷಕಿಯರು ಆಕ್ರೋಶ (NEP Crisis) ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ 66,361 ಅಂಗನವಾಡಿಗಳಿವೆ. ಇವುಗಳಲ್ಲಿ 6,017 ಪದವಿ ಪಡೆದವರು, 16,303 ಪಿಯುಸಿ ಹಾಗೂ 40,786 ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕಿಯರು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಆದರೆ, ನೂತನ ಶಿಕ್ಷಣ ನೀತಿ ಜಾರಿಯಾದರೆ, ನೀತಿ ಅನ್ವಯ ತರಬೇತಿ ಪಡೆದು ಬೋಧನೆ ಮಾಡಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಇರುವ 40,786 ಶಿಕ್ಷಕರಿಯರಿಗೆ ಇದು ಕಷ್ಟವಾಗುತ್ತದೆ. ಇವರೆಲ್ಲ 40-48 ವರ್ಷ ದಾಟಿದ ಶಿಕ್ಷಕಿಯರಾಗಿದ್ದಾರೆ. ಇವರು ಹೊಸ ನೀತಿಗೆ ಹೊಂದಿಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಇವರನ್ನು ಕೈಬಿಟ್ಟು ಪರ್ಯಾಯ ವ್ಯವಸ್ಥೆ ಮಾಡುವ ಚಿಂತನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ.
ಶಿಕ್ಷಕಿಯರ ಆಕ್ರೋಶ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನೆಪದಲ್ಲಿ ಸರ್ಕಾರ ಸಾವಿರಾರು ಅಂಗನವಾಡಿ ಶಿಕ್ಷಕಿಯರ ಹುದ್ದೆಗೆ ಕತ್ತರಿ ಪ್ರಯೋಗಕ್ಕೆ ಚಿಂತೆನೆ ನಡೆಸುತ್ತಿರುವುದಕ್ಕೆ ಅಂಗನವಾಡಿ ಶಿಕ್ಷಕಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲಾಖೆಯು ಏಕಾಏಕಿ ಈ ನಿರ್ಧಾರ ಕೈಗೊಳ್ಳುತ್ತಿರುವುದು ತಪ್ಪು. ನಾವು ಈಗಾಗಲೇ 5 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಅವುಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಇದೀಗ ಎನ್‌ಇಪಿಯನ್ನು ಮುಂದಿಟ್ಕೊಂಡು ಶಿಕ್ಷಕಿಯರ ಕೆಲಸ ಕಿತ್ತುಕೊಳ್ಳುವ ಹುನ್ನಾರ ಮಾಡಲಾಗುತ್ತಿದೆ. ಈ ನಿರ್ಧಾರವನ್ನು ಇಲಾಖೆ ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಶಿಕ್ಷಕಿಯರು ಎಚ್ಚರಿಸಿದ್ದಾರೆ.
“5 ವರ್ಷದೊಳಗಿನ ಮಕ್ಕಳ ಶಿಕ್ಷಣ ಮತ್ತು ಆರೈಕೆಗೆ ಸರ್ಕಾರ ಎನ್‌ಇಪಿಯನ್ನು ಜಾರಿಗೊಳಿಸುತ್ತಿರುವುದು ಒಳ್ಳೆಯ ವಿಚಾರ. ಆದರೆ, ನೀತಿಯಿಂದಾಗಿ 40 ಸಾವಿರ ಶಿಕ್ಷಕರ ಉದ್ಯೋಗಕ್ಕೆ ಕತ್ತರಿ ಬೀಳಲಿದ್ದು, ಅವರ ಜೀವನ ಬೀದಿಗೆ ಬರುತ್ತದೆ. ಈ ಬಗ್ಗೆ ಸರ್ಕಾರ ತಜ್ಞರ ಜತೆ ಚರ್ಚಿಸಿ ಶಿಕ್ಷಕಿಯರ ಪರ ನಿರ್ಧಾರ ಕೈಗೊಳ್ಳಬೇಕು.”
-ಎಂ.ಜಯಮ್ಮ, ರಾಜ್ಯ ಅಂಗನವಾಡಿ ಕಾರ್ಯರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್
ಯೋಜನೆ ಜಾರಿಯ ಉದ್ದೇಶ
ದೇಶದ ಶಿಕ್ಷಣ ತಜ್ಞರ ಸಲಹೆಯಂತೆ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು 2014ರಲ್ಲಿ ನೂತನ ಶಿಕ್ಷಣ ನೀತಿಗೆ ಸಮಿತಿ ರಚಿಸಲಾಯಿತು. ನಮ್ಮ ರಾಜ್ಯದಲ್ಲಿ ಮದನ್ ಗೋಪಾಲ್ ಅವರ ಸಮಿತಿ ರಚಿಸಿ, 2020ರಲ್ಲಿ NEPಯನ್ನು ಜಾರಿಗೆ ತರಲಾಯಿತು. ಬಾಲ್ಯಪೂರ್ವ ಶಿಕ್ಷಣ ಮತ್ತು ಆರೈಕೆಗಾಗಿ ಅಂಗನವಾಡಿಗಳಲ್ಲೂ ಮುಂದಿನ ವರ್ಷದಿಂದ NEP ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. 3 ವರ್ಷದಲ್ಲೇ ಮಕ್ಕಳ ಪ್ರಾರಂಭಿಕ ಹಂತದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ | ಕ್ರಾಂತಿಕಾರಕ ಬದಲಾವಣೆಗಾಗಿಯೇ ನೂತನ ಶಿಕ್ಷಣ ನೀತಿ: ನೃಪತುಂಗ ವಿವಿ ಉದ್ಘಾಟಿಸಿದ ಅಮಿತ್ ಷಾ