ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ನಡೆದು, ಭರ್ಜರಿ ಬಹುಮತ ಪಡೆದ ಕಾಂಗ್ರೆಸ್ ಹೊಸ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ತೊಡಗಿರುವ ನಡುವೆಯೇ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ʻʻಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಮುಂದಿನ ಎರಡು ಮೂರು ತಿಂಗಳಲ್ಲಿ, ಅಂದರೆ ಅಕ್ಟೋಬರ್, ನವೆಂಬರ್ ತಿಂಗಳ ಒಳಗೆ ಹೊಸ ರಾಜಕೀಯ ಬೆಳವಣಿಗೆ ಆಗಲಿದೆʼʼ ಎಂದು ಎಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಪಾರ್ಲಿಮೆಂಟ್ ಚುನಾವಣೆ ಬಳಿಕಾ ಏನೇನು ಬೆಳವಣಿಗೆ ಆಗುತ್ತದೋ ನೋಡೋಣ. ಮುಂದೆ ತಾ.ಪಂ, ಜಿಪಂ ಚುನಾವಣೆ ಬರುತ್ತದೆ. ಆಗ ಹೋರಾಟ ಮಾಡೋಣ ಎಂದು ವಿವರಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದ್ದರೆ, ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನಗಳಲ್ಲಿ ಜಯ ಗಳಿಸಿದೆ. ನಾಲ್ವರು ಪಕ್ಷೇತರರು ಗೆದ್ದಿದ್ದಾರೆ. ಜೆಡಿಎಸ್ ಸ್ಥಾನ ಬಲ 37ರಿಂದ 19ಕ್ಕೆ ಇಳಿದದ್ದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ವತಃ ಕುಮಾರಸ್ವಾಮಿ ಅವರು ಕೂಡಾ ಚನ್ನಪಟ್ಟಣದಲ್ಲಿ ಭಾರಿ ಕಷ್ಟಪಟ್ಟು ಗೆಲುವು ಸಾಧಿಸಿದ್ದರು. ಅಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಾ ನೂತನ ಕಾಂಗ್ರೆಸ್ ಸರ್ಕಾರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮಂಡಿಸಿದರು, ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ʻʻಚನ್ನಪಟ್ಟಣದ ನನ್ನ ಕಾರ್ಯಕರ್ತರು ಯಾರ ಆಮಿಷಕ್ಕೂ ಒಳಗಾಗದೆ ನನ್ನ ಕೈ ಹಿಡಿದಿದ್ದಾರೆ. ಹಲವಾರು ಕಡೆ ನಮ್ಮ ಪಕ್ಷಕ್ಕೆ ಹಿನ್ನಡೆ ಆಗಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಈ ಪಕ್ಷಕ್ಕೆ ಈ ರೀತಿಯ ಸೋಲು ಹೊಸದೇನಲ್ಲ. ಈ ಪಕ್ಷಕ್ಕೆ ಪ್ರಾಮಾಣಿಕ ಕಾರ್ಯಕರ್ತರ ಜೊತೆಗೆ ದೇವರ ಅನುಗ್ರಹ ಇದೆʼʼ ಎಂದು ಕುಮಾರಸ್ವಾಮಿ ಹೇಳಿದರು.
ʻʻಫಲಿತಾಂಶದಿಂದ ಹಲವರಿಗೆ ಗೊಂದಲ, ಆತಂಕ ಇದೆ. ಹಲವಾರು ಜನ ದೂರವಾಣಿ ಮೂಲ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೀವು ಧೈರ್ಯವಾಗಿ ಇರಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ಪಕ್ಷ ಕಟ್ಟೋಣ ಎನ್ನುವ ಆತ್ಮ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆʼʼ ಎಂದು ಹೇಳಿದ ಅವರು, ʻʻಚನ್ನಪಟ್ಟಣದಲ್ಲಿ ಪಕ್ಷ ಉಳಿಸಿದ್ದು ನೀವು. ಇಲ್ಲಿ ನಾನು ನೆಪಮಾತ್ರʼʼ ಎಂದರು.
ಹೊಸ ಸರ್ಕಾರಕ್ಕೆ ಯೋಜನೆ ಜಾರಿ ಮಾಡುವುದು ಕಷ್ಟ
ʻʻಹೊಸ ಸರ್ಕಾರ ಹೇಳಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭ ಅಲ್ಲ. ಈಗ ಘೋಷಣೆ ಮಾಡಿರುವ ಯೋಜನೆಗೆ ವರ್ಷಕ್ಕೆ 62ರಿಂದ 70 ಸಾವಿರ ಕೋಟಿ ರೂ. ಬೇಕು. ಇದನ್ನ ಎಲ್ಲಿಂದ ತರುತ್ತಾರೆ. ಇನ್ನುಳಿದ ಅಭಿವೃದ್ಧಿಗೆ ಹಣ ಎಲ್ಲಿಂದ ತರ್ತಾರೆ ನೋಡಬೇಕುʼʼ ಎಂದು ಅವರು ಹೇಳಿದರು.
ʻʻಈಗಿನ ಸರ್ಕಾರದ ನಾಟಕವನ್ನು ನೀವು ನೋಡುತ್ತಿದ್ದೀರಿ. ಈ ಸರ್ಕಾರದಿಂದ ಒಳ್ಳೆ ಆಡಳಿತ ನಿರೀಕ್ಷೆ ಇಟ್ಟುಕೊಂಡಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಮುಂದಿನ ಕೆಲವೇ ತಿಂಗಳಲ್ಲಿ ಅಂದರೆ ಅಕ್ಟೋಬರ್-ನವೆಂಬರ್ ವೇಳೆಗೆ ರಾಜಕೀಯದಲ್ಲಿ ಹೊಸ ಬದಲಾವಣೆಗಳು ನಡೆಯಲಿವೆʼʼ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ʻʻನಾನು ಸ್ವಾಭಿಮಾನ ಕಳೆದುಕೊಂಡು ಮಂತ್ರಿಗಳ ಮುಂದೆ ನಿಲ್ಲಲು ಆಗಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗೋ ರೀತಿ ನಡೆದುಕೊಳ್ಳಲು ತಯಾರಿಲ್ಲʼʼ ಎಂದು ಹೇಳಿದ ಅವರು, ಇನ್ನು 15 ದಿನಗಳಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.
ಎಲ್ಲರಿಗೂ ಕಾದಿದೆ ಕುಮಾರಸ್ವಾಮಿ ಟಾಸ್ಕ್
ಒಂದೊಂದು ಸಮಾಜಕ್ಕೆ ಸೇರಿದ ಮಾಜಿ, ಹಾಲಿ ಶಾಸಕರಿಗೆ ಜವಾಬ್ದಾರಿ ನೀಡಬೇಕು ಅಂದುಕೊಂಡಿದ್ದೇನೆ. ಶಾಸಕರಿಗೆ ಕಠಿಣ ಟಾಸ್ಕ್ ನೀಡುತ್ತಿದ್ದೇನೆ. ಎಲ್ಲವನ್ನೂ ನನ್ನ ಮೇಲೆ ಹಾಕಬೇಡಿ. ನೀವು ಜವಾಬ್ದಾರಿ ತೆಗದುಕೊಂಡು ಕ್ಷೇತ್ರದ ಜನರ ಸಮಸ್ಯೆ ಸ್ಪಂದಿಸುವ ಜವಾಬ್ದಾರಿ ಅವರಿಗೆ ನೀಡುತ್ತೇನೆ. ವಿಭಾಗೀಯವಾರು ನಾಯಕರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡುತ್ತೇನೆ. ನಾನು ಅವರ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೇಳಿದ ಅವರು, ರಾಮನಗರ ಚನ್ನಪಟ್ಟಣದ ಮಾಗಡಿ, ಕನಕಪುರ ಭಾಗದಲ್ಲಿ ಪಕ್ಷ ಸಂಘಟನೆ ಇನ್ನೂ ಜೋರಾಗಿ ನಡೆಯಬೇಕು ಎಂದರು.
ಇದನ್ನೂ ಓದಿ : DK Shivakumar Profile : ರಾಜ್ಯ ಕಾಂಗ್ರೆಸ್‌ಗೆ ಬಲ ತುಂಬಿದ ಬಲಿಷ್ಠ ನಾಯಕ ಡಿ ಕೆ ಶಿವಕುಮಾರ್; ಇಲ್ಲಿದೆ ಅವರ ಜೀವನಚಿತ್ರ