ರಾಯಚೂರು : ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ನಗರದಲ್ಲಿ ಕಲುಷಿತ ನೀರು ಕುಡಿದಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಶಮೀಮ್ ಬೇಗಂ (48) ಮೃತಪಟ್ಟ ದುರ್ದೈವಿ. ವಾರ್ಡ್ ನಂಬರ್ 14ರ ಮಚ್ಚಿ ಬಜಾರ್ ನಿವಾಸಿಯಾಗಿರುವ ಶಮೀಮ್ ಬೇಗಂ ಕಲುಷಿತ ನೀರು ಸೇವಿಸಿದ ಬಳಿಕ ವಾಂತಿ ಭೇಧಿಯಾಗಿ ಕಿಡ್ನಿ ಸಮಸ್ಯೆಯಿಂದ ಮೇ 29 ರಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಹಲವು ದಿನಗಳಿಂದ ರಾಯಚೂರು ಭಾಗದಲ್ಲಿ ಕಲುಷಿತ ನೀರು ಪೂರೈಕೆಯಿಂದ ಸಾಕಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿದ್ದು, ಈವರೆಗೂ 6 ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಮಹಿಳೆ ಕೂಡ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಇದನ್ನು ಓದಿ| ಕಲುಷಿತ ನೀರು ಪೂರೈಕೆ: ರಾಯಚೂರು ನಗರಸಭೆ AEE ವೆಂಕಟೇಶ ಸಸ್ಪೆಂಡ್
ಇಷ್ಟು ದೊಡ್ಡ ದುರಂತವಾದ ವಾರದ ಬಳಿಕ ಜಿಲ್ಲೆಯತ್ತ ಬಂದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಅಧಿಕಾರಿಗಳ ಜೊತೆ ನೇರವಾಗಿ ರಾಂಪುರದ ಶುದ್ದೀಕರಣ ಘಟಕದ ಪಂಪ್ಹೌಸ್ ವಾಟರ್ ಟ್ಯಾಂಕ್, ನೀರಿನ ಘಟಕದ ಬಳಿಯಲ್ಲಿರುವ ಲ್ಯಾಬ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿನ ಘಟಕದ ಶುದ್ಧೀಕರಣ ಸಂಬಂಧ ಅನನುಭವಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂಬ ಆರೋಪವೂ ಇದೆ. ಕಲುಷಿತ ನೀರು ಕುಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಶುದ್ಧ ನೀರು ಒದಗಿಸಲು ನಗರಸಭೆ ವಿಫಲವಾಗಿದೆ ಎಂದು ಸಚಿವರು, ಅಧಿಕಾರಿಗಳ ವಿರುದ್ಧ ಅಲ್ಲಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.