Site icon Vistara News

Rain News : ತುಂಡಾಗಿ ಬಿದ್ದಿದ್ದ ತಂತಿ ತಗುಲಿ ವೃದ್ಧೆ ಸಾವು; ನ್ಯಾಯಕ್ಕಾಗಿ ಶವ ಎತ್ತಲು ಬಿಡದ ರೈತರು

woman dies after stepping on wire in hasana and farmer protest

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಭಾರಿ ಮಳೆಗೆ (Rain News) ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದ ವೃದ್ಧೆಯೊಬ್ಬರು ಅದನ್ನು ತುಳಿದು ಮೃತಪಟ್ಟಿರುವ ಪ್ರಕರಣ ಗಂಭೀರತೆಯನ್ನು ಪಡೆದುಕೊಂಡಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಶನಿವಾರ ಮಧ್ಯಾಹ್ನವಾದರೂ ಶವವನ್ನು ಮೇಲಕ್ಕೆತ್ತಲು ಬಿಡದೆ ಹೋರಾಟ ನಡೆಸಲಾಗುತ್ತಿದೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.

ರಂಗಮ್ಮ (60) ಮೃತ ದುರ್ದೈವಿ. ಭಾರಿ ಗಾಳಿ, ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿತ್ತು. ಆದರೆ, ಇದನ್ನು ಯಾರೂ ಗಮನಿಸಿರಲಿಲ್ಲ. ಈ ವೇಳೆ ಹೊಲಕ್ಕೆ ಹೋಗಿ ಹಸುವಿನ ಜತೆ ವಾಪಸಾಗುತ್ತಿದ್ದ ಮಹಿಳೆ ರಂಗಮ್ಮ ಮನೆಯತ್ತ ಹೊರಟಿದ್ದರು. ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಯಾವುದೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದು ಅವರು ಮೃತಪಟ್ಟಿದ್ದರು. ಇವರ ಜತೆಗಿದ್ದ ಹಸುವೂ ಮೃತಪಟ್ಟಿತ್ತು.

ಒಂದು ವರ್ಷದ ಹಿಂದೆ ಇದೇ ಜಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರಂಗಮ್ಮ ಬಾವಮೈದುನ ಯಜಮಾನ್‌ಗೌಡ ಎಂಬುವವರು ಮೃತಪಟ್ಟಿದ್ದರು. ತಂತಿ ಬೀಳುವಂತಿದೆ ದುರಸ್ತಿ ಮಾಡುವಂತೆ ಒಂದು ತಿಂಗಳಿನಿಂದ ಚೆಸ್ಕಾಂ ಸಿಬ್ಬಂದಿಗೆ ಬಳ್ಳೂರು ಗ್ರಾಮಸ್ಥರು ಮನವಿ ಮಾಡಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನಾಸ್ಥಳದಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಲು ಬಿಡದ ಗ್ರಾಮಸ್ಥರು

ಚೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಈಗ ಮೃತ ರಂಗಮ್ಮ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ‌ ಒದಗಿಸಬೇಕು. ಇನ್ನು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಕ್ರಮ ಜರುಗಿಸುವವರೆಗೂ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ‌ ಎಂದು ಪಟ್ಟು ಹಿಡಿದಿದ್ದಾರೆ. ಗ್ರಾಮದ ನೂರರು ಜನ, ರೈತ ಸಂಘದ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: MB Patil : ವಿಪಕ್ಷ ನಾಯಕನ ಹುದ್ದೆ ನೂರಾರು ಕೋಟಿಗೆ ಸೇಲ್: ಎಂ.ಬಿ. ಪಾಟೀಲ್

ಶಾಸಕ, ತಹಸೀಲ್ದಾರ್‌ ಭೇಟಿ

ಬೇಲೂರು ‌ಶಾಸಕ ಎಚ್.ಕೆ ಸುರೇಶ್, ತಹಸೀಲ್ದಾರ್‌ ಮಮತಾ ಅವರು ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ್ದು, ಸಮಸ್ಯೆಗಳನ್ನು ಆಲಿಸಿದ್ದಾರೆ. ಪರಿಸ್ಥಿತಿ ‌ನಿಭಾಯಿಸಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆಗಳು ಆಗುತ್ತವೆ. ಭಾರಿ ಗಾಳಿ, ಮಳೆಗೆ ಮರಗಳು ಬಿದ್ದೋ, ಇಲ್ಲವೇ ಕಂಬಗಳೇ ಬಿದ್ದೋ ಅವಘಡಗಳು ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಹೀಗೆ ತಂತಿಗಳೇ ತುಂಡಾಗಿ ಬಿಡುತ್ತವೆ. ಹೀಗಾಗಿ ಇಂತಹ ಅಪಾಯಕಾರಿ ತಂತಿಗಳನ್ನು ಮುಂಚಿತವಾಗಿಯೇ ಬದಲಾಯಿಸುವ, ಇಲ್ಲವೇ ದುರಸ್ತಿ ಮಾಡುವ ಕೆಲಸವು ವಿದ್ಯುತ್‌ ನಿಗಮಗಳ ಮೂಲಕ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version