ಕಲಬುರಗಿ: ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ನಡೆದಿದೆ. ಬಸಮ್ಮ (40) ಮೃತ ಮಹಿಳೆ. ಮಳೆಯಿಂದ ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದಿದ್ದರಿಂದ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ (Rain News) ಸುರಿಯುತ್ತಿದೆ. ಇದರಿಂದ ವಿವಿಧೆಡೆ ಮನೆಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣ ಬೆಳೆ ನಷ್ಟವಾಗಿದೆ.
ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಕಾರವಾರ: ಕಲ್ಯಾಣಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟಿರುವುದು ಹೊನ್ನಾವರದ ರಾಮತೀರ್ಥದಲ್ಲಿ ನಡೆದಿದೆ. ಹೊನ್ನಾವರದ ರಾಯಲಕೇರಿ ನಿವಾಸಿ, ಪ್ರಥಮ ಪಿಯುಸಿ ವಿದ್ಯಾರ್ಥಿ ಮಣಿಕಂಠ ಮಂಜುನಾಥ ನಾಯ್ಕ (17) ಮೃತ ದುರ್ದೈವಿ. ಮಳೆ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇದ್ದಿದ್ದರಿಂದ ಈಜಲು ವಿದ್ಯಾರ್ಥಿ ತೆರಳಿದ್ದಾಗ ನೀರಿನಲ್ಲಿ ಮುಳುಗಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತವಾಗಿ ಅಡ್ಡಲಾಗಿ ಬಿದ್ದ ಮರ
ಕೊಡಗು: ಮರ ಬಿದ್ದ ಪರಿಣಾಮ ಮಡಿಕೇರಿ-ಮಂಗಳೂರು ರಾಷ್ಠ್ರೀಯ ಹೆದ್ದಾರಿ 275 ಸಂಚಾರ ಬಂದ್ ಆಗಿದೆ. ಮದೆನಾಡು ಸಮೀಪ ಕರ್ತೋಜೆಯಲ್ಲಿ ಭೂ ಕುಸಿತವಾಗಿ ಮರ ಬಿದ್ದಿದ್ದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಯಿತು. ಇದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆಯ ಒಂದು ಬದಿ ಮಣ್ಣು ಕುಸಿದು ಮರ ಬಿದ್ದಿದ್ದರಿಂದ ತೆರವಿಗೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹರಸಾಹಸ ಪಟ್ಟರು. ಭಾರಿ ಮಳೆಯ ನಡುವೆ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹಾಸನ ಜಿಲ್ಲೆಯ ಐದು ತಾಲೂಕುಗಳಲ್ಲಿ ರಜೆ
ಹಾಸನ: ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲೂಕಿನಲ್ಲಿ ಜುಲೈ 25ರಂದು ಅಂಗನವಾಡಿ ಸೇರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯಿಂದ ಸೋಮವಾರವೂ ರಜೆ ನೀಡಲಾಗಿತ್ತು.
ಇದನ್ನೂ ಓದಿ | Rain News : ಮುಂಗಾರಿಗೆ ರಾಜ್ಯದಲ್ಲಿ 27 ಬಲಿ; ಹೈ ಅಲರ್ಟ್ ಇರಲು ಡಿಸಿಗಳಿಗೆ ಸೂಚಿಸಿದ ಕೃಷ್ಣ ಭೈರೇಗೌಡ
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆ ಶಾಲಾ ಕಾಲೇಜುಗಳಿಗೆ ರಜೆ
ಕಾರವಾರ/ಮಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 25 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡದಲ್ಲಿ ಎಲ್ಲ ಅಂಗನವಾಡಿ, ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರದಿಂದ ಧಾರಾಕಾರ ಮಳೆಗೆ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದೆ.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಪದವಿ ಕಾಲೇಜುಗಳವರೆಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಉಡುಪಿ, ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ನಗರ ಹೋಬಳಿ, ನಿಟ್ಟೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲಾಗಿದೆ.