ವಿಜಯನಗರ: ಕೌಟುಂಬಿಕ ಕಲಹ ಮತ್ತು ವರದಕ್ಷಿಣೆಗಾಗಿ ಹಿಂಸೆ ನೀಡಿದ್ದರಿಂದ ನೊಂದು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ತಳಕಲ್ಲು ಗ್ರಾಮದ ಪೂಜಾ ಬಿ.ವಿ. ಎಂಬವರೇ ಪ್ರಾಣ ಕಳೆದುಕೊಂಡವರು.
ಪೂಜಾ ಅವರಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಆವತ್ತಿನಿಂದಲೇ ಪೂಜಾಗೆ ಗಂಡ ಮತ್ತು ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಹೆತ್ತವರು ಮತ್ತು ಸಹೋದರ ಆರೋಪ ಮಾಡಿದ್ದಾರೆ. ಹೀಗಾಗಿ ಗಂಡನ ಮನೆಯವರೇ ಕೊಲೆ ಮಾಡಿ ನೇಣಿಗೆ ಹಾಕಿದ್ದಾರೆ ಎನ್ನುವುದು ಅವರ ಗಂಭೀರ ಆರೋಪ. ಹೀಗಾಗಿ ಸಮಗ್ರ ತನಿಖೆಗೆ ಒತ್ತಾಯಿಸಿ ಇಟ್ಟಗಿ ಹೋಬಳಿ ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆಗೆ ಮುಂದಾದರು.
ಮದುವೆ ಸಂದರ್ಭದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ ಒಡವೆ ಮತ್ತು ಮೂರು ಲಕ್ಷ ರೂ. ನಗದು ನೀಡಲಾಗಿತ್ತು. ಬಳಿಕ ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದ. ಒಂದು ದಿನದ ಹಿಂದಷ್ಟೇ ಮೂರು ಲಕ್ಷ ಕೊಡಬೇಕು ಎಂದು ನನಗೇ ಕರೆ ಮಾಡಿ ಕೇಳಿದ್ದ. ಕೊಡಲಾಗುವುದಿಲ್ಲ ಎಂದು ಹೇಳಿದ್ದಕ್ಕೆ ಅಕ್ಕನಿಗೆ ಹಿಂಸೆ ನೀಡಿದ್ದಾನೆ. ಆಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾನೆ ಎಂದು ಪೂಜಾ ಅವರ ಸಹೋದರ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಇಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂಜಾ ಅವರಿಗೆ ಮೂರು ವರ್ಷದ ಒಂದು ಪುಟ್ಟ ಮಗುವಿದೆ.
ಇದನ್ನೂ ಓದಿ | Student suicide | ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಆಗಿದ್ದಕ್ಕೆ ನಿಂದಿಸಿದ ಪ್ರಿನ್ಸಿಪಾಲ್: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ