ಕಾರವಾರ: ಏಳು ತಿಂಗಳ ಹಿಂದಷ್ಟೇ ಮದುವೆಯಾದ ಗೃಹಿಣಿಯೊಬ್ಬರು ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಘಟನೆ (woman suicide) ಅಂಕೋಲಾ ತಾಲೂಕಿನ ಬೆಳಸೆ ಹಂದಿಗದ್ದೆಯಲ್ಲಿ ನಡೆದಿದೆ. ಯಮುನಾ ವಿಘ್ನೇಶ್ವರ ಗೌಡ (30) ಅವರೇ ನೇಣಿಗೆ ಶರಣಾದ ನತದೃಷ್ಟೆ. ಈ ಕುರಿತು ಮೃತಳ ಅಣ್ಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಮುನಾ ಅವರ ಮದುವೆ ಬೆಳಸೆ ಹಂದಿಗದ್ದೆಯ ವಿಘ್ನೇಶ್ವರ ಬುದವಂತ ಗೌಡ ಅವರ ಜೊತೆ ಮಾದನಗೇರಿಯ ಮಹಾಲಸಾ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ಮದುವೆಯಾದ ಮೂರು ತಿಂಗಳ ನಂತರ ಯಮುನಾಳ ಗಂಡ ವಿಘ್ನೇಶ್ವರ ಮತ್ತು ಅವನ ತಮ್ಮನ ಹೆಂಡತಿಗೆ ಅಕ್ರಮ ಸಂಬಂಧ ಇರುವುದಾಗಿ ಯಮುನಾಳಿಗೆ ತಿಳಿದುಬಂದಿದೆ.
ಈ ಕುರಿತು ಮನೆಯಲ್ಲಿ ಕೇಳಿದ್ದಕ್ಕೆ ಯಮುನಾಳ ಗಂಡ ವಿಘ್ನೇಶ್ವರ, ಮೈದುನನ ಹೆಂಡತಿ ಶಾಮಲಾ ರವಿ ಗೌಡ, ಮೈದುನ ರವಿ ಗೌಡ, ಮತ್ತು ಅತ್ತೆ ಸಾವಿತ್ರಿ ಎಲ್ಲರೂ ಸೇರಿ ಯಮುನಾಳಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾರಂಭಿಸಿದ್ದಾರೆ. ಮತ್ತು ಮನೆಯಲ್ಲಿ ಇರಬೇಡ ಎಲ್ಲಾದರೂ ಹೋಗಿ ಸಾಯಿ ಎಂದಿದ್ದಾರೆ.
ಇದರಿಂದ ಮನನೊಂದ ಯಮುನಾ ತನ್ನ ಮನೆಯಲ್ಲಿ ಪಕಾಸಿಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಂಕೋಲಾ ಪೊಲೀಸರು ಮಹಜರು ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ ಉದಯ ಕುಂಬಾರ, ಪಿ.ಎಸ್.ಐ ಪ್ರವೀಣಕುಮಾರ, ಪ್ರೊಬೇಶನರಿ ಪಿ.ಎಸ್.ಐ ಸುನೀಲ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಇದನ್ನೂ ಓದಿ | Suicide Case | ಚಿತ್ರದುರ್ಗದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ?