ಹಾಸನ: ಮಹಿಳೆಯೊಬ್ಬರು ತಮ್ಮ ಎಂಟು ತಿಂಗಳ ಮಗುವಿನೊಂದಿಗೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೀರಿಗೆ ಬಿದ್ದ ಮಗು ಪ್ರಾಣ ಕಳೆದುಕೊಂಡಿದ್ದರೆ, ತಾಯಿಯನ್ನು ಸ್ಥಳೀಯರ ಸೇರಿ ರಕ್ಷಿಸಿದ್ದಾರೆ.
ಹೊಳೆನರಸೀಪುರ ಪಟ್ಟಣದ ಮಲ್ಲಪ್ಪನಹಳ್ಳಿ ರಸ್ತೆಯಲ್ಲಿ ಘಟನೆ ನಡೆದಿದೆ. ನಾಲೆ ಬಳಿ ಬಂದ ನಯನ ಎಂಬಾಕೆ ತನ್ನ ಮಗು ವಿಹಾನ್‌ನನ್ನು ಹಿಡಿದುಕೊಂಡು ನೀರಿಗೆ ಹಾರಿದ್ದಾರೆ. ವಿಹಾನ್ ನೀರಿಗೆ ಬಿದ್ದ ಕೂಡಲೇ ಮೃತಪಟ್ಟರೆ, ನಯನ ಅವರ ಮುಳುಗೇಳುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.
ಆಸ್ಪತ್ರೆಗೆ ಹೋಗಿದ್ದ ನಯನ ನಾಲೆಗೆ ಹಾರಿದ್ದರು
ನಯನ ಮತ್ತು ವೆಂಕಟೇಶ್ ದಂಪತಿಯ ನಾಲ್ಕು ವರ್ಷದ ಹೆಣ್ಣು ಮಗು ಮತ್ತು ಎಂಟು ತಿಂಗಳ ವಿಹಾನ್ ಇಬ್ಬರಿಗೂ ಹುಷಾರಿರಲಿಲ್ಲ. ಹೀಗಾಗಿ ದಂಪತಿ ಇಬ್ಬರೂ ಮನೆಯಿಂದ ಆಸ್ಪತ್ರೆಗೆ ಹೊರಟಿದ್ದರು. ಎಲ್ಲರೂ ಚನ್ನರಾಯಪಟ್ಟಣದ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಹೆಣ್ಣುಮಗುವನ್ನು ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಬೇಕಾಗಿತ್ತು. ವೆಂಕಟೇಶ್ ಅವರು ಹೆಣ್ಣು ಮಗುವಿನ ಜತೆ ನಿಂತರು.
ನಯನ ಅವರು ಮಗು ವಿಹಾನ್‌ನನ್ನು ಹಾಸನದ ರಾಜೀವ್ ಆಸ್ಪತ್ರೆಗೆಯಲ್ಲಿ ತೋರಿಸಲೆಂದು ಕರೆದುಕೊಂಡು ಹೊರಟಿದ್ದರು. ಆದರೆ, ಅವರು ಹಾಸನಕ್ಕೆ ಹೋಗದೆ ಹೊಳೆನರಸೀಪುರಕ್ಕೆ ಹೋಗಿದ್ದರು. ಅಲ್ಲಿ ನಾಲೆಗೆ ಹಾರಿ ಪ್ರಾಣ ತ್ಯಾಗ ಮಾಡಲು ಮುಂದಾಗಿದ್ದರು.
ನಯನ ಅವರು ನೀರಿನಲ್ಲಿ ಮುಳುಗೇಳುತ್ತಿರುವುದನ್ನು ಕಂಡು ಸ್ಥಳೀಯರು ರಕ್ಷಿಸಿದರು. ಆಷ್ಟು ಹೊತ್ತಿಗೆ ಮಗು ಪ್ರಾಣ ಕಳೆದುಕೊಂಡಿತ್ತು. ನಯನ ಅವರಿಗೆ ಹೊಳೆ ನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಳೆ ನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನುವುದು ನಯನ ಅವರ ವಿಚಾರಣೆಯ ವೇಳೆ ತಿಳಿದುಬರಲಿದೆ.
ಇದನ್ನೂ ಓದಿ| ಪತಿಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮಹಿಳೆ ಮನನೊಂದು ಆತ್ಮಹತ್ಯೆ