ಶಿವಮೊಗ್ಗ: ಚಿರತೆ ದಾಳಿಯಿಂದ ಮಹಿಳೆ ಮೃತಪಟ್ಟಿರುವ ಘಟನೆ (Leopard Attack) ತಾಲೂಕಿನ ಬಿಕ್ಕೋನಹಳ್ಳಿಯಲ್ಲಿ ನಡೆದಿದೆ. ಯಶೋಧಮ್ಮ (42) ಮೃತ ದುರ್ದೈವಿ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯಶೋದಮ್ಮ ಬಹಳ ಹೊತ್ತಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆ ಅವರಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅವರ ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ.
ಯಶೋದಮ್ಮ ಅವರ ಮೇಲೆ ಚಿರತೆ ದಾಳಿ ನಡೆಸಿರುವ ಕುರುಹು ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಘಟನೆಯ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ಕೊಟ್ಟಿದ್ದು, ಸ್ಥಳದಲ್ಲಿನ ಹೆಜ್ಜೆ ಗುರುತುಗಳನ್ನು ಗಮನಿಸಿ ಚಿರತೆ ದಾಳಿ ನಡೆಸಿರಬಹುದು ಎಂದು ಶಂಕಿಸಿದ್ದಾರೆ.
ಉರುಳಿಗೆ ಸಿಲುಕಿ ಚಿರತೆ ಸಾವು
ಶಿವಮೊಗ್ಗ: ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕು ಅಗರದಹಳ್ಳಿಯಲ್ಲಿ ನಡೆದಿದೆ. ಕಾಲುವೆಯ ಬಳಿಯಿಂದ ಅಡಿಕೆ ತೋಟಕ್ಕೆ ಪ್ರವೇಶಿಸುವಾಗ ಚಿರತೆ ಉರುಳಿಗೆ ಸಿಲುಕಿದೆ. ನಂತರ ಪರದಾಡಿ ಕೊನೆಯುಸಿರೆಳೆದಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಬರುವ ಅಗರದಹಳ್ಳಿ ಬಳಿ ಕಳೆದೊಂದು ತಿಂಗಳಿಂದ ಬೋನು ಇಟ್ಟಿದ್ದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಆದರೆ, ಮಂಗಳವಾರ ಉರುಳಿಗೆ ಬಿದ್ದು ಚಿರತೆ ಮೃತಪಟ್ಟಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತಿಗೆ ಹಾವು ಕಡಿತದ ಸುದ್ದಿ ಕೇಳಿ ಪತ್ನಿಗೆ ಹೃದಯಾಘಾತ
ಮಂಗಳೂರು: ಪತಿಗೆ ಹಾವು ಕಡಿತದ ಸುದ್ದಿ ಕೇಳಿ ಪತ್ನಿ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ. ಸೇಸಮ್ಮ (60) ಹೃದಾಯಾಘಾತದಿಂದ ಮೃತಪಟ್ಟ ಮಹಿಳೆ. ನೆಲ್ಯಾಡಿಯ ಪದ್ಮಯ್ಯ ಎಂಬುವವರಿಗೆ ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಡಿದಿತ್ತು. ತಕ್ಷಣ ಪದ್ಮಯ್ಯರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಚಾರ ತಿಳಿದ ಪತ್ನಿ ಸೇಸಮ್ಮಗೆ ಹೃದಯಾಘಾತವಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.