ಕಾರವಾರ: ಮನೆಯಿಂದ ಹೊರಗೆ ಹೋದ ಗೃಹಿಣಿಯೊಬ್ಬರು ಮನೆಗೆ ವಾಪಸ್ ಬರದೆ ಕಾಣೆಯಾದ (Woman missing) ಘಟನೆ ಅಂಕೋಲಾ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ. ಉಮಾ ನಾಯಕ (48) ಕಾಣೆಯಾಗಿರುವ ಗೃಹಿಣಿ. ಈ ಕುರಿತು ಮಹಿಳೆಯ ಪತಿ ರತೀಶ ನಾಯಕ ದೂರು ನೀಡಿದ್ದಾರೆ.
ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಉಮಾ ನಾಯಕ. ಆಗಾಗ ಮನೆ ಬಿಟ್ಟು ಹೋಗುತ್ತೇನೆಂದು ಹೊರ ಹೋದವಳು ಸಂಜೆ ಮತ್ತೆ ಮನೆಗೆ ವಾಪಸಾಗುತ್ತಿದ್ದರು. ಆದರೆ ಫೆ.16ರಂದು ಬೆಳಿಗ್ಗೆ ಮನೆಯಿಂದ ಹೊರಟವರು ಇದುವರೆಗೂ ಬಾರದೇ ಎಲ್ಲಿಯೋ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಣೆಯಾಗಿರುವ ಉಮಾ 5.4″ ಎತ್ತರದ ನಸುಗಪ್ಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೊರಟಾಗ ಕೇಸರಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ರವಿಕೆ ತೊಟ್ಟಿದ್ದು, ಬೆನ್ನಿನ ಮೇಲೆ ಗಾಯದ ಕಲೆಯೊಂದಿದೆ. ಮಹಿಳೆಯ ಕುರಿತು ಮಾಹಿತಿ ಸಿಕ್ಕಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08388- 220333, ಮೊ.ಸಂ: 94808 05250, 94807 05268ಗೆ ಸಂಪರ್ಕಿಸಲು ಕೋರಲಾಗಿದೆ.
ಗದಗದಲ್ಲಿ ಬೈಕ್‌ಗಳ ಮುಖಾಮುಖಿ: ಒಬ್ಬ ಸಾವು
ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಇಟಗಿ ಸಮೀಪ ತಡರಾತ್ರಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ ಸವಾರ ಅಂದಪ್ಪ ಕೊನಣ್ಣವರ (೪೦) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಸವಾರನಿಗೆ ಗಂಭೀರ ಗಾಯವಾಗಿದ್ದು ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಜೇಂದ್ರಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.