ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಯುವತಿಯೊಬ್ಬಳನ್ನು ಅತ್ಯಂತ ಬರ್ಬರವಾಗಿ ಕೊಲೆ(Woman murdered) ಮಾಡಲಾಗಿದೆ. ದುಷ್ಕರ್ಮಿಯೊಬ್ಬ ಮನೆಗೆ ಬಂದು ಯುವತಿಯನ್ನು ಮನೆಯಂಗಳಕ್ಕೆ ಕರೆದು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಗಿರಿಜಾ ಎಂಬವರ ಪುತ್ರಿ ಜಯಶ್ರೀ(23ವರ್ಷ) ಮೃತಪಟ್ಟವರು. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಈ ಘಟನೆಯಿಂದ ಇಡೀ ಊರೇ ತಲ್ಲಣಗೊಂಡಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಜಯಶ್ರೀ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಳ್ಳುತ್ತಿದ್ದಳು. ತಾಯಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಬಂದ ದುಷ್ಕರ್ಮಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಜಯಶ್ರೀ ಬೊಬ್ಬೆ ಹೊಡೆಯುತ್ತಿದ್ದಾಗ ತಾಯಿ ಓಡಿ ಬಂದರು. ಅಷ್ಟು ಹೊತ್ತಿಗೆ ಜಯಶ್ರೀ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ದುಷ್ಕರ್ಮಿ ಹೊಟ್ಟೆಗೆ ಹಾಕಿದ ಚೂರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಕೂಡಲೇ ಅಕ್ಕಪಕ್ಕದವರು ಸೇರಿ ಆಕೆಯನ್ನು ಆಸ್ಪತ್ರೆಗೆ ತರುವಾಗ ಅರ್ಧ ದಾರಿಯಲ್ಲಿ ಮೃತಪಟ್ಟಳು ಎಂದು ತಿಳಿದು ಬಂದಿದೆ.
ಯಾರು ಪರಿಚಿತ ವ್ಯಕ್ತಿಯೇ ಚೂರಿಯಿಂದ ಇರಿದಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ, ವ್ಯಕ್ತಿ ಯಾರು ಎನ್ನುವುದು ತನಿಖೆಯಲ್ಲಿ ಗೊತ್ತಾಗಬೇಕಾಗಿದೆ. ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮೃತ ದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ | Murder Case | ಪತ್ನಿ ಶೀಲ ಶಂಕಿಸಿದ ಪತಿ; ಉಸಿರುಗಟ್ಟಿಸಿ ಕೊಂದು ಪರಾರಿಯಾದ ಪಾಪಿ