ಗದಗ: ಏಳು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ದಂಪತಿಯಲ್ಲಿ ಹುಟ್ಟಿದ ಕೌಟುಂಬಿಕ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡಿದೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ಗಂಡನೊಬ್ಬ ತನ್ನ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ (Woman murdered) ಕೊಂದಿದ್ದಾನೆ.
ವಿದ್ಯಾಶ್ರೀ ಮನ್ನೇಶ್ ಆಡಿನ್ (೨೮) ಮೃತ ದುರ್ದೈವಿ. ಆಕೆಯ ಪತಿ ಪತಿ ಮನ್ನೇಶ್ ಆಡಿನ್ (೩೦) ಕೊಲೆ ಮಾಡಿದ ಆರೋಪಿ. ಕುಡಿದ ಮತ್ತಿನಲ್ಲಿದ್ದ ಆತ ಕೊಡಲಿಯಿಂದ ಪತ್ನಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಏಳು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವಿದ್ಯಾಶ್ರೀ ಹಾಗೂ ಮನ್ನೇಶ್ ಕಳೆದ ಕೆಲವು ವರ್ಷಗಳಿಂದ ಸಣ್ಣಪುಟ್ಟ ವಿಷಯಕ್ಕೂ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಇದು ಕೊಲೆಯ ಮಟ್ಟಕ್ಕೆ ಹೋಗಬಹುದು ಎಂದು ಯಾರೂ ಭಾವಿಸಿರಲಿಲ್ಲ. ಕೊಡಲಿಯಿಂದ ತಲೆಗೆ ಬಡಿದು ಮಾಡಿದ ಕೊಲೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಿನ್ಸಿಪಾಲ್ ಅರೆಸ್ಟ್
ರಾಯಚೂರು: ಹಾಸ್ಟೆಲ್‌ನಲ್ಲಿದ್ದ ೧೭ ವರ್ಷದ ವಿದ್ಯಾರ್ಥಿನಿಗೆ ನಿರಂತರವಾಗಿ ಲೈಂಗಿಕ ಕಿರುಕುಳ (Pocso Case) ನೀಡುತ್ತಾ ಅಂತಿಮವಾಗಿ ಆಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗುವುದಕ್ಕೆ ಕಾರಣವಾದ ಕಾಲೇಜಿನ ಪ್ರಿನ್ಸಿಪಾಲ್‌ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ೧೭ ವರ್ಷದ ಬಾಲಕಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಕೇರ್ ಟೇಕರ್ ಕೂಡಾ ಆಗಿ ಕೆಲಸ ಮಾಡುತ್ತಿದ್ದ ಉಪನ್ಯಾಸಕ ಮತ್ತು ಪ್ರಿನ್ಸಿಪಾಲ್ ಆಗಿರುವ ರಮೇಶ್ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಮಾತ್ರವಲ್ಲ, ಅತ್ಯಾಚಾರ ಮಾಡಿ ಆತನೇ ಕೊಲೆ ಮಾಡಿದ್ದಾನೆ ಎಂದೂ ಮನೆಯವರು ದೂರಿದ್ದರು. ಆತನ ಬಂಧನಕ್ಕಾಗಿ ಒತ್ತಾಯಿಸಿ ಲಿಂಗಸೂಗೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆದಿತ್ತು. ಇದೀಗ ಪೊಲೀಸರು ಆತನನ್ನು ಬಂಧಿಸುವ ಮೂಲಕ ಸಾವಿಗೆ ಒಂದು ಹಂತದ ನ್ಯಾಯವನ್ನು ನೀಡಿದ್ದಾರೆ.
ಖಾಸಗಿ ಕಾಲೇಜಿಗೆ ಸೇರಿದ ಹಾಸ್ಟಲ್ ಇದಾಗಿದ್ದು, ಅಲ್ಲಿದ್ದ ಬಾಲಕಿಯನ್ನು ಈ ಉಪನ್ಯಾಸಕ ಪುಸಲಾಯಿಸಿ, ಆಮಿಷ ಒಡ್ಡಿ ಬಹುಕಾಲದಿಂದ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯನ್ನು ಆತ ಆಗಾದ ತನ್ನ ಕೋಣೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಘಟನೆ ನಡೆದ ದಿನದಿಂದ ರಮೇಶ್ ನಾಪತ್ತೆಯಾಗಿದ್ದು, ಆತನನ್ನು ಬಂಧಿಸುವಂತೆ ಪೋಷಕರು ಆಗ್ರಹಿಸಿದ್ದರು. ಕೊನೆಗೂ ಆರೋಪಿ ರಮೇಶ್‌ನನ್ನು ಬಿಜಾಪುರದಲ್ಲಿ ಪತ್ತೆ ಹಚ್ಚಿ ಕರೆತಂದಿರುವ ಪೊಲೀಸರು ಠಾಣೆಯಲ್ಲಿ ಒಂದು ಹಂತದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.