ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಜಯಶ್ರೀ ಎಂಬ ಯುವತಿಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಗ್ನ ಪ್ರೇಮಿಯ ಕರಾಳ ಕೃತ್ಯವೇ ಎನ್ನುವ ಸಂಶಯ ಹುಟ್ಟಿಕೊಂಡಿದೆ.
ಗಿರಿಜಾ ಎಂಬವರ ಪುತ್ರಿ ಜಯಶ್ರೀ(23) ಅವರನ್ನು ಸೋಮವಾರ ಬೆಳಗ್ಗೆ ದುಷ್ಕರ್ಮಿಯೊಬ್ಬ ಮನೆಗೆ ಬಂದು ಕೊಲೆ ಮಾಡಿದ್ದ. ಜಯಶ್ರೀ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಳ್ಳುತ್ತಿದ್ದಳು. ತಾಯಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಬಂದ ದುಷ್ಕರ್ಮಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಜಯಶ್ರೀ ಬೊಬ್ಬೆ ಹೊಡೆಯುತ್ತಿದ್ದಾಗ ತಾಯಿ ಓಡಿ ಬಂದರು. ಅಷ್ಟು ಹೊತ್ತಿಗೆ ಜಯಶ್ರೀ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ದುಷ್ಕರ್ಮಿ ಹೊಟ್ಟೆಗೆ ಹಾಕಿದ ಚೂರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಕೂಡಲೇ ಅಕ್ಕಪಕ್ಕದವರು ಸೇರಿ ಆಕೆಯನ್ನು ಆಸ್ಪತ್ರೆಗೆ ತರುವಾಗ ಅರ್ಧ ದಾರಿಯಲ್ಲಿ ಮೃತಪಟ್ಟಳು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ದಕ್ಷಿಣಕನ್ನಡ ಎಸ್.ಪಿ ಋಷಿಕೇಶ್ ಸೋನಾವಣೆ ಭೇಟಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಸ್ಥಳಕ್ಕೆ ಬಂದಿರುವ ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಕೂಡಾ ಘಟನೆಯ ಬಗ್ಗೆ ಮಾಹಿತಿ, ಸಾಕ್ಷ್ಯ ಕಲೆ ಹಾಕಿದೆ. ಪ್ರಕರಣದ ಸಂಬಂಧ ಕೆಲವು ಸುಳಿವುಗಳು ಲಭ್ಯವಾಗಿದೆ. ಶೀಘ್ರವಾಗಿ ಪ್ರಕರಣವನ್ನು ಭೇದಿಸಲಾಗುವುದು ಎಂದು ಹೇಳಿದರು.
ಪ್ರೇಮ ಪ್ರಕರಣದ ಹಿನ್ನಲೆ
ಬಿಎಸ್ಸಿ ಶಿಕ್ಷಣ ಪಡೆದಿರುವ ಜಯಶ್ರೀ ಕೆಲ ಸಮಯದಿಂದೀಚೆಗೆ ಮನೆಯಲ್ಲೇ ಇದ್ದರು. ಜಯಶ್ರೀಯನ್ನು ಸುಳ್ಯ ತಾಲ್ಲೂಕಿನ ಕನಕಮಜಲಿನ ಉಮೇಶ್ ಎಂಬಾತ ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತ ಆಗಾಗ ಗಿರಿಜಾ ಅವರ ಮನೆಗೆ ಬಂದು ಹೋಗುತ್ತಿದ್ದ. ಆದರೆ ಇತ್ತೀಚೆಗೆ ಅವನ ಗುಣ ನಡತೆ ಜಯಶ್ರೀಗೆ ಇಷ್ಟವಾಗದ ಕಾರಣ 2022ನೇ ನವಂಬರ್ ವೇಳೆಗೆ ಆಕೆ ಆತನನ್ನು ದೂರ ಮಾಡಿದ್ದಳು.
ಈ ವಿಷಯದಲ್ಲಿ ಉಮೇಶ ಅಸಮಾಧಾನದಿಂದ ಇದ್ದು, ಆತನೇ ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ಚೂರಿಯಿಂದ ತಿವಿದು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿ ಗಿರಿಜಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಪ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಶಂಕಿತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಕುಟುಂಬಕ್ಕೆ ಎದುರಾದ 2ನೇ ಆಘಾತ
ಗಿರಿಜಾ ಅವರ ಪತಿ ಗುರುವ ಅವರು ಕೋವಿಡ್ ಸಂದರ್ಭದಲ್ಲಿ ನಿಧನರಾಗಿದ್ದರು. ಇದೀಗ ಪುತ್ರಿ ಚೂರಿ ಇರಿತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದು, ಈ ಕುಟುಂಬಕ್ಕೆ ಕಳೆದ ಎರಡು ವರ್ಷಗಳಲ್ಲಿ ಎರಡು ದೊಡ್ಡ ಆಘಾತಗಳು ಎದುರಾಗಿದೆ
ಮೂರು ಬಾರಿ ಚೂರಿಯಿಂದ ಇರಿದು ಜಯಶ್ರೀ ಅವರನ್ನು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಪೋಷಕರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಕೊಲೆಯ ಹಿಂದೆ ಕೆಲವೊಂದು ವಿಚಾರಗಳಿದ್ದು, ಪರಿಶೀಲನೆ ಮಾಡುತ್ತೇವೆ. ಶೀಘ್ರದಲ್ಲೇ ಆರೋಪಿ ಸಿಗುತ್ತಾನೆ ಎಂಬ ಭರವಸೆ ಇದೆ ಎಂದಿದ್ದಾರೆ ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ.