ಬೆಳಗಾವಿ: ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಮಹಿಳೆಯೊಬ್ಬರನ್ನು ಬೆಳಗಾವಿಗೆ ಕರೆಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಮಹಿಳೆ ಜಿಲ್ಲೆಯ ಬೇರೆ ಪಟ್ಟಣದವರಾಗಿದ್ದು, ಆಕೆಗೆ ನೌಕರಿ ಕೊಡಿಸುವುದಾಗಿ ಆಮಿಷ ಒಡ್ಡಿ ಕಾಮುಕರು ಕರೆಸಿಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಬೈಲಹೊಂಗಲ ತಾಲೂಕಿನ ಮಾಸ್ತಮಳ್ಳಿ ಗ್ರಾಮದ ಯಲ್ಲಪ್ಪ ನಾಯಕ, ದುರುಗಪ್ಪ ಕಸಾಯಿ ಎಂಬವರನ್ನು ಬಂಧಿಸಲಾಗಿದೆ.
ಅವರು ಮಹಿಳೆಯನ್ನು ಕರೆಸಿಕೊಂಡು ಆಕೆಯನ್ನು ನೌಕರಿ ವಿಚಾರದಲ್ಲಿ ಮಾತನಾಡಲೆಂದು ಕರೆದೊಯ್ದು ಕೋಣೆಯೊಂದರಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತೆ ಸೋಮವಾರ ರಾತ್ರಿ ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗಿ 24 ಗಂಟೆಯಲ್ಲಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ | Sexual Assault | ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ; ಇಬ್ಬರು ಡ್ರೈವರ್‌ಗಳಿಂದ ಕೃತ್ಯ