ಬೆಳಗಾವಿ: ಸಾಲದ ಸುಳಿಯಲ್ಲಿ ಸಿಲುಕಿದ್ದ ಗಂಡ ತಮ್ಮನ್ನೆಲ್ಲ ಬಿಟ್ಟು ನಾಪತ್ತೆಯಾಗಿದ್ದರಿಂದ ದಿಕ್ಕು ಕಾಣದಂತಾದ ಮಹಿಳೆಯೊಬ್ಬಳು ತನ್ನ ಮೂವರು ಹೆಣ್ಣುಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ (Suicide attempt) ಯತ್ನಿಸಿದ್ದಾಳೆ.
ವಿಶ್ವ ಮಹಿಳಾ ದಿನದಂದೇ ಈ ಘಟನೆ ನಡೆದಿರುವುದು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲೇ. ಇದನ್ನು ಗಮನಿಸಿದ ಕಚೇರಿ ಸಿಬ್ಬಂದಿ ಸಕಾಲದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರಿಂದ ಸದ್ಯ ನಾಲ್ಕೂ ಜನ ಬಚಾವಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಜನತಾ ಪ್ಲ್ಯಾಟ್ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಆಕೆ ತನ್ನ ಜೊತೆಗೆ ಮಕ್ಕಳಾದ ಸೃಷ್ಟಿ (14), ಸಾಕ್ಷಿ (8), ಸಾನ್ವಿ (3) ಅವರಿಗೆ ಫಿನೈಲ್ ಕುಡಿಸಿದ್ದಾಳೆ.
ಅದೃಶ್ಯಪ್ಪ ಹಂಪಣ್ಣನವ ಕಳೆದ ಹಲವು ವರ್ಷಗಳಿಂದ ಅನಗೋಳದ ಸಲೂನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಸರಸ್ವತಿ ತನ್ನ ಮೂವರು ಮಕ್ಕಳೊಂದಿಗೆ ಪತಿಯ ಜೊತೆಗೆ ಬೆಳಗಾವಿಯ ಅನಗೋಳದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ನಡುವೆ, ಅದೃಶ್ಯಪ್ಪ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ.
ಅದೃಶ್ಯಪ್ಪ ಸಾಲ ತೀರಿಸಲಾಗದೆ 15 ದಿನಗಳ ಹಿಂದೆಯೇ ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಿದ್ದಾನೆ. ಈ ನಡುವೆ ತುತ್ತು ಅನ್ನಕ್ಕೂ ಗತಿಯಿಲ್ಲದ ಸರಸ್ವತಿ ಜಿಲ್ಲಾಧಿಕಾರಿ ಭೇಟಿಗಾಗಿ ಡಿಸಿ ಕಚೇರಿಗೆ ಮಕ್ಕಳ ಜೊತೆಗೆ ಆಗಮಿಸಿದ್ದರು.
ಆ ವೇಳೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಹಿಳೆಯನ್ನು ವಿಚಾರಿಸಿದ್ದಾರೆ. ಅಷ್ಟು ಹೊತ್ತಿಗೆ ಅಲ್ಲೇ ಇದ್ದ ಹಿರಿಯ ಪುತ್ರಿ ಸೃಷ್ಟಿ ತಮ್ಮ ತಾಯಿ ಮೂವರಿಗೆ ಏನೋ ಜ್ಯೂಸ್ ಕುಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟು ಹೊತ್ತಿಗೆ ಸರಸ್ವತಿ ಹಾಗೂ ಮೂವರು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರೆನ್ನಲಾಗಿದೆ.
ಕೂಡಲೇ ಅಲರ್ಟ್ ಆದ ಡಿಸಿ ಕಚೇರಿ ಸಿಬ್ಬಂದಿ ತಕ್ಷಣವೇ ಡಿಸಿ ಕಚೇರಿ ಬಳಿಯ ಪೊಲೀಸರ ನೆರವು ಪಡೆದು ಜಿಲ್ಲಾಸ್ಪತ್ರೆಗೆ ಅಸ್ವಸ್ಥರನ್ನು ಶಿಫ್ಟ್ ಮಾಡಿಸಿದ್ದಾರೆ.
ಸದ್ಯ ಸರಸ್ವತಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಜಿಲ್ಲಾಡಳಿತ ಯಾವ ನೆರವನ್ನು ನೀಡಲಿದೆ ಎಂದು ಕಾದು ನೋಡಬೇಕಾಗಿದೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Suicide Attempt: ಹೆತ್ತ ಮಗುವನ್ನು ನೋಡಲು ಬಿಡದ ಮೊದಲ ಗಂಡ; ಲೈವ್ ವಿಡಿಯೊ ಮಾಡಿ ವಿಷ ಕುಡಿದಳು!