Site icon Vistara News

Kantara Movie : ಸಮಸ್ಯೆ ಹೇಳಿಕೊಂಡು ಬಂದ ವಿವಾಹಿತೆಯನ್ನು ತಾನೇ ವರಿಸುವುದಾಗಿ ಹೇಳಿದ ದೈವ ಪಾತ್ರಿ!

kantara patri

#image_title

ಕಾರವಾರ: ಕಾಂತಾರ ಸಿನಿಮಾದ (Kantara Movie) ಬಳಿಕ ಭೂತದ ಕೋಲ, ನೇಮಗಳ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ. ದೈವಗಳ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಡುವೆ ಕೆಲವು ಕಡೆ ಅಪಸವ್ಯಗಳು ಕೂಡಾ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ.

ಕಾಂತಾರ ಸಿನಿಮಾದ ಅತ್ಯಂತ ಮುಖ್ಯವಾದ ದೃಶ್ಯವೊಂದರಲ್ಲಿ ಭೂಮಾಲೀಕನ ಮಗ ಕೇಳುತ್ತಾನೆ: ಇದು ದೈವ ಮಾತನಾಡುವುದೋ, ದೈವ ನರ್ತಕ ಮಾತನಾಡುವುದೋ ಅಂತ. ಆಗ ದೈವ ನರ್ತಕ, ʻʻಮಾತನಾಡಿದ್ದು ದೈವ ನರ್ತಕನಾಗಿದ್ದರೆ ಮರಳಿ ಬರುತ್ತೇನೆ, ದೈವವೇ ಆಗಿದ್ದರೆ ಮರಳಿ ಬರುವುದಿಲ್ಲʼ ಎಂದು ಹೇಳಿ ಕಾಡಿನತ್ತ ಓಡಿ ಕಣ್ಮರೆಯಾಗುತ್ತಾನೆ. ಅಂಕೋಲಾದಲ್ಲಿ ನಡೆದ ಒಂದು ಘಟನೆಯಲ್ಲಿ ಈಗ ನಿಜಕ್ಕೂ ಮಾತನಾಡಿದ್ದು ದೈವವೋ, ದೈವದ ಪಾತ್ರಿಯೋ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಹಾಗಿದ್ದರೆ ಆಗಿದ್ದೇನು?
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಂಬಾರಕೊಡ್ಲು ಗ್ರಾಮದಲ್ಲಿ ಕಾಲಭೈರವ ದೇವಸ್ಥಾನದಲ್ಲಿ ನಡೆದ ದೈವಾರಾಧನೆಯ ಸಂದರ್ಭದಲ್ಲಿ ದೈವ ನರ್ತಕ ನೀಡಿದ ಅಭಯ ಸಂಶಯಕ್ಕೆ ಕಾರಣವಾಗಿದೆ.

ಕಾಲಭೈರವ ದೇವರ ದರ್ಶನ ಮಾಡಿ ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಬೆಳಗಾವಿಯಿಂದ ಮಹಿಳೆಯೊಬ್ಬರು ಬಂದಿದ್ದರು. ಆಕೆಗೆ ಮದುವೆಯಾಗಿ ಗಂಡ ಬಿಟ್ಟು ಹೋಗಿದ್ದು ಸಾಕಷ್ಟು ಸಮಸ್ಯೆಯಾಗಿತ್ತು. ಇಲ್ಲಿ ದೈವ ದರ್ಶನ ಕಾರ್ಯಕ್ರಮಕ್ಕೆ ಬಂದ ಆತ ಆ ಮಹಿಳೆಯ ಸಮಸ್ಯೆಯನ್ನು ಕೇಳಿಸಿಕೊಂಡಿದ್ದಾನೆ.

ಆಕೆಯ ಬಾಯಿಯಿಂದ ಸಮಸ್ಯೆ ಕೇಳಿಸಿಕೊಂಡ ದೈವ- ಪಾತ್ರಿ ಸಮಸ್ಯೆಗೆ ಪರಿಹಾರವಾಗಿ ತಾನೇ ಆಕೆಯನ್ನು ಮದುವೆಯಾಗುವುದಾಗಿ ಘೋಷಣೆ ಮಾಡಿಬಿಟ್ಟ. ಇದು ಆಲ್ಲಿದ್ದವರನ್ನು ಅಚ್ಚರಿಗೆ ಕೆಡವಿತು.

ʻʻಈ ಬಾಲಕಿಯನ್ನು ಈ ಬಾಲಕ ಮದುವೆಯಾಗುತ್ತಾನೆ. ಈವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿ, ಅರ್ಧನಾರೀಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಮಂಜುನಾಥೇಶ್ವರನ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಈಕೆಯ ಕುತ್ತಿಗೆಗೆ ತಾಳಿ ಬೀಳುತ್ತದೆ. ಇದು ಸತ್ಯ ಸತ್ಯ ಸತ್ಯʼʼ ಎಂದು ಕಾಂತಾರ ಚಿತ್ರದ ಸ್ಟೈಲ್‌ನಲ್ಲಿ ದೈವ ಪಾತ್ರಿ ನುಡಿದಿದ್ದ. ಇದು ಜನರಿಗೆ ಸಂಶಯ ಮೂಡಿಸಿತು.

ಇಲ್ಲಿನ ಸಾರ್ವಜನಿಕರು ಹೇಳುವ ಪ್ರಕಾರ, ಮಹಿಳೆಯನ್ನು ಗಂಡ ಬಿಟ್ಟು ಹೋಗಿರುವ ಮಾಹಿತಿ ದೈವ ಪಾತ್ರಿಗೆ ಮೊದಲೇ ತಿಳಿದಿತ್ತು. ದೈವ ಪಾತ್ರಿಗೂ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ. ಹೀಗಾಗಿ ವಿವಾಹಿತ ಮಹಿಳೆಯನ್ನು ವರಿಸಲು ಆತ ದೈವದ ಹೆಸರು ಬಳಸಿಕೊಂಡನೇ ಎಂಬ ಸಂಶಯ ವ್ಯಕ್ತವಾಗಿದೆ.

ದೈವ ಪಾತ್ರಿ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : Kantara Movie: ಹಿಂದಿಯಲ್ಲಿ ನೂರು ದಿನಗಳನ್ನು ಪೂರೈಸಿದ ʻಕಾಂತಾರʼ

Exit mobile version