Site icon Vistara News

Video Viral: ಕಳ್ಳಿಯ ʼಶಕ್ತಿʼ ಪ್ರದರ್ಶನ; ಮಾಂಗಲ್ಯ ಕದ್ದು ನಾನವಳಲ್ಲ ಎಂದವಳ ಜುಟ್ಟು ಹಿಡಿದಳು!

Woman who stole mangalya from bus handed over to police Video Viral

ಚಿಕ್ಕಬಳ್ಳಾಪುರ‌: ಚಿಕ್ಕಬಳ್ಳಾಪುರ‌ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (KSRTC Bus Stop) ಹೈಡ್ರಾಮವೇ ನಡೆದಿದೆ. ಶಕ್ತಿ ಯೋಜನೆಯಡಿ (Shakti Scheme) ಮಹಿಳೆಯರಿಗೆ ಉಚಿತ ಪ್ರಯಾಣ (Free Bus Service) ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಇದರ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳುತ್ತಿರುವ ಮಹಿಳೆಯರು ರಾಜ್ಯದ ಹಲವು ಕಡೆ ಪ್ರಯಾಣ ಮಾಡುತ್ತಿದ್ದಾರೆ. ಈ ವೇಳೆ ಬಸ್‌ ಸಹ ಜನರಿಂದ ತುಂಬಿ ತುಳುಕುತ್ತಿದೆ. ಇದರ ಲಾಭ ಪಡೆಯಲು ಕಳ್ಳಿಯೊಬ್ಬಳು ಮುಂದಾಗಿದ್ದು, ಮಾಂಗಲ್ಯ ಕದಿಯಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ನಾನವಳಲ್ಲ.. ನಾನವಳಲ್ಲ ಎಂದವಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಇವಳೇ ಕಳ್ಳಿ ಎಂದು ಮಹಿಳೆ ಕಂಡು ಹಿಡಿದು ಆಕೆಯ ಜುಟ್ಟು ಹಿಡಿದು ಹೋಗಿರುವ ವಿಡಿಯೊ ಈಗ ಸಖತ್‌ ವೈರಲ್‌ (Video Viral) ಆಗಿದೆ.

ಚಿಕ್ಕಬಳ್ಳಾಪುರ‌ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವೀಕೆಂಡ್ ಆಗಿರುವುದರಿಂದ ಇಶಾ ಫೌಂಡೇಶನ್‌ಗೆ ಸಾವಿರಾರು ಮಹಿಳೆಯರು ಭೇಟಿ ನೀಡಿದ್ದರು. ಹೇಗೂ ಸರ್ಕಾರ ಬಸ್‌ನಲ್ಲಿ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ಹೆಚ್ಚಿನ ಮಹಿಳೆಯರು ಸರ್ಕಾರಿ ಬಸ್‌ಗಾಗಿಯೇ ಕಾಯುತ್ತಲಿದ್ದರು. ಹೀಗಾಗಿ ಬಸ್‌ ಬಂದಾಗ ಒಮ್ಮೆಲೆಗೆ ಎಲ್ಲರೂ ನುಗ್ಗುವುದರಿಂದ ನೂಕು ನುಗ್ಗಲು ಉಂಟಾಗುತ್ತದೆ. ಈ ವೇಳೆ ಏನೇ ಕದ್ದರೂ ಸಿಕ್ಕಿ ಬೀಳುವುದಿಲ್ಲ ಎಂಬುದು ಕಳ್ಳಿಯೊಬ್ಬಳ ಪ್ಲ್ಯಾನ್‌ ಆಗಿತ್ತು. ಆದರೆ, ಅದೇ ಆಕೆಗೆ ಈಗ ಉಲ್ಟಾ ಹೊಡೆದಿದೆ.

ಇದನ್ನೂ ಓದಿ: Snake Bite: ರಾಘವೇಂದ್ರ ಮಠದ ಅಡುಗೆ ಮನೆಯಲ್ಲಿ ಹಾವು; ಸ್ನೇಕ್ ಕ್ಯಾಚರ್‌ಗೆ ಕಚ್ಚೇ ಬಿಟ್ಟಿತು!

ಕೋಲಾರದ ಮಾಸ್ತಿಯಿಂದ ಚಿಕ್ಕಬಳ್ಳಾಪುರದ ಸಂಬಂಧಿಕರ ಮನೆಗೆಂದು ಮಹಿಳೆ‌ಯೊಬ್ಬರು ಬಂದಿದ್ದರು. ಅವರು ಪುನಃ ಚಿಕ್ಕಬಳ್ಳಾಪುರ‌ದಿಂದ ವಾಪಸ್‌ ಕೋಲಾರಕ್ಕೆ ಹೋಗಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್‌ ಬಂದ ಕೂಡಲೇ ಸೀಟ್‌ ಹಿಡಿದುಕೊಳ್ಳುವ ತವಕದಲ್ಲಿ ಬಸ್‌ ಹತ್ತಿದ್ದಾರೆ. ಆದರೆ, ಹಿಂದೆಯೇ ಇದ್ದ ಕಳ್ಳಿಯು ಇವರ ಮಾಂಗಲ್ಯವನ್ನು ಎಗರಿಸಿದ್ದಾಳೆ. ಆದರೆ, ತಕ್ಷಣ ಆಕೆಗೆ ವಿಷಯ ಗೊತ್ತಾಗಿದೆ. ಹಿಂದೆ ತಿರುಗಿ ನೋಡಿದ್ದಾರೆ. ಈ ವೇಳೆ ಕದ್ದ ಮಹಿಳೆಯ ವರ್ತನೆಯಲ್ಲಿ ಬದಲಾವಣೆ ಕಂಡಿದೆ. ಅಲ್ಲದೆ, ಅವಳು ತನ್ನ ಕೈಯನ್ನು ಸೀರೆ ಒಳಗೆ ಇಟ್ಟುಕೊಳ್ಳಲು ಪ್ರಯತ್ನ ಪಟ್ಟಿರುವುದನ್ನೂ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಆಕೆಯೇ ಕಳ್ಳಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಜುಟ್ಟು ಹಿಡಿದು ಎಳೆದೊಯ್ದ ಮಹಿಳೆ

ತನ್ನ ಚೈನ್‌ ಕದ್ದಿದ್ದು ನೀನೇ ಎಂದು ಪಕ್ಕದಲ್ಲಿದ್ದ ಮತ್ತೊಬ್ಬ ಮಹಿಳೆಯನ್ನು ಆಕೆ ಕೇಳಿದ್ದಾರೆ. ಅದಕ್ಕೆ ಆ ಮಹಿಳೆ ನಾನಲ್ಲ, ನಾನೇಕೆ ಕದಿಯಲಿ ಎಂದು ದಬಾಯಿಸಿದ್ದಾಳೆ. ಆದರೆ, ಆಕೆಯ ವರ್ತನೆಯಿಂದ ಅನುಮಾನ ಹೆಚ್ಚಿದ್ದರಿಂದ ಮಾಂಗಲ್ಯ ಕಳೆದುಕೊಂಡಿದ್ದ ಮಹಿಳೆ ಸಿಟ್ಟಿಗೆದ್ದಿದ್ದು, ಆಕೆಯ ಜುಟ್ಟು ಹಿಡಿದು ಬಾರಿಸಿದ್ದಾರೆ. ಕೊನೆಗೆ ಆಕೆಯ ಜುಟ್ಟನ್ನು ಹಿಡಿದು ದರ ದರನೆ ಪೊಲೀಸ್‌ ಠಾಣೆಗೆ ಎಳೆದೊಯ್ದಿದ್ದಾರೆ.

ಮಹಿಳೆಯನ್ನು ಕಳ್ಳಿ ಎಂದು ಆರೋಪಿಸಿ ಕರೆದೊಯ್ಯುತ್ತಿರುವ ವಿಡಿಯೊ

ಇದನ್ನೂ ಓದಿ: Love Jihad: ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಬ್ಯಾಕ್ ಸೈಟ್: ಆರ್. ಅಶೋಕ್‌

ಮಾಂಗಲ್ಯವು ಸುಮಾರು ಒಂದು ಲಕ್ಷ ಎಪ್ಪತೈದು ಸಾವಿರ ರೂಪಾಯಿ ಬೆಲೆ ಬಾಳಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಆರೋಪಿ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆಕೆ ನಾನು ಕಳ್ಳಿಯಲ್ಲ, ಸುಮ್ಮನೆ ತನ್ನ ಮೇಲೆ ಆರೋಪ ಹೊರಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Exit mobile version