Site icon Vistara News

Women Empowerment : ದುಡಿಯುವ ವರ್ಗ, ಮಹಿಳೆಯರಿಗೆ ಆರ್ಥಿಕ ಸಬಲತೆ; ಈ ಬಜೆಟ್‌ನಲ್ಲಿ ಘೋಷಣೆ: ಸಿಎಂ ಬೊಮ್ಮಾಯಿ

cm on women empowerment

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ (Women Empowerment) ಒತ್ತು ನೀಡಲಾಗುತ್ತಿದೆ. ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ನಲುಗಿರುವ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣುಮಕ್ಕಳು ಸ್ವತಂತ್ರವಾಗಿ ಮನೆ ನಿರ್ವಹಣೆ ಮಾಡುವಷ್ಟರ ಮಟ್ಟಿಗೆ ಆರ್ಥಿಕ ಸಬಲತೆ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಶನಿವಾರ (ಜ.೧೪) ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಹೆಣ್ಣು ಮಕ್ಕಳಿಗೆ ಆರ್ಥಿಕ ಚೇತನ ಸಿಗಬೇಕು. ಅವರು ಕುಟುಂಬವನ್ನು ಸ್ವತಂತ್ರವಾಗಿ ನಡೆಸುವಂತಾಗಲು ವಿಶೇಷ ಕಾರ್ಯಕ್ರಮವನ್ನು ನೀಡಲಾಗುವುದು. ಸ್ತ್ರೀ ಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್ ಉಪಚಾರ, ಆರೋಗ್ಯ, ಮುಂತಾದವುಗಳಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ಈ ವಿಶೇಷ ಯೋಜನೆ ಒಳಗೊಂಡಿದೆ ಎಂದರು.

ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ
ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆಗಳ ಚಿಂತನೆ ಮಾಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಹೆಚ್ವಿನ ಅನುಕೂಲ ಮಾಡುವ ಚಿಂತನೆ ಮಾಡಲಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಒಂದು ಲಕ್ಷ ರೂ. ನೆರವು ನೀಡಿ, ಬ್ಯಾಂಕ್ ಖಾತೆಯನ್ನು ಜೋಡಿಸಿ ಅವರನ್ನು ಸ್ವಾವಲಂಬಿ ಮಾಡಲು ನೇರ ಕಾರ್ಯಕ್ರಮ ಇದಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಪ್ರಾರಂಭ ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಜನವರಿ ಅಂತ್ಯ ಹಾಗೂ ಫೆಬ್ರವರಿ ಪ್ರಾರಂಭದಲ್ಲಿ ಚಾಲನೆ ನೀಡಲಾಗುವುದು. ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಬಜೆಟ್‌ಗೆ ಪೂರ್ವಭಾವಿ ಸಿದ್ಧತೆ
ಸಚಿವ ಸಂಪುಟದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ದಿನಾಂಕ ಗೊತ್ತು ಮಾಡಲಾಗುವುದು. ಬಜೆಟ್ ಅಧಿವೇಶನವನ್ನು ಫೆ. 17ರಂದು ಮಾಡುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ಸಿದ್ಧತೆಗಳನ್ನು ಪ್ರಾರಂಭ ಮಾಡಿದ್ದೇವೆ. ಈಗಾಗಲೇ ಡಿಸೆಂಬರ್‌ವರೆಗೆ ನಮ್ಮ ರಾಜ್ಯದ ಆದಾಯವು ಮೂರುಪಟ್ಟು ಹೆಚ್ಚಾಗಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡಲು ಗುರಿಗಳನ್ನು ಹೆಚ್ಚು ಮಾಡಲು ಸೂಚನೆ ನೀಡಲಾಗಿದೆ. ಜನಪರ ಆಯವ್ಯಯ ನೀಡಲು ತೀರ್ಮಾನ ಮಾಡಲಾಗಿದೆ. ಚುನಾವಣೆ ಇರುವುದರಿಂದ ವಿಶೇಷ ಬಜೆಟ್ ಇರಲಿದೆ. ಅಸ್ಸಾಂ ಹಾಗೂ ಗುಜರಾತ್ ಸರ್ಕಾರ ಕೆಲವು ಘೋಷಣೆಗಳನ್ನು ಮಾಡಿವೆ. ಆದರೆ, ಘೋಷಣೆ ಬೇರೆ ಅನುಷ್ಠಾನ ಬೇರೆ ಎಂದರು.

ಇದನ್ನೂ ಓದಿ | Grenades Found | ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ, 2 ಗ್ರೆನೇಡ್, ಮನುಷ್ಯರ ರಕ್ತ ಪತ್ತೆ

Exit mobile version