Site icon Vistara News

Learn Kannada | ಅನ್ಯ ಭಾಷಿಕರು ಕನ್ನಡ ಕಲಿಯಲು ಇಲ್ಲಿದೆ ಸರಳ ಮಾರ್ಗ: ಕನ್ನಡತಿಯ ವಿನೂತನ ಪ್ರಯತ್ನಕ್ಕೆ ಎಲ್ಲೆಡೆ ಬೆಂಬಲ

women-from-bengaluru-found-innovative-way-to-learn-kannada

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ, ಅನ್ಯ ಭಾಷಿಕರು ಕನ್ನಡ ಕಲಿಯುತ್ತಿಲ್ಲ (Learn Kannada) ಎನ್ನುವಂತಹ ಕೂಗು ಅನೇಕ ದಶಕಗಳಿಂದಲೂ ಇದೆ. ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಅನೇಕರು ಅನೇಕ ರೀತಿಯ ಪ್ರಯತ್ನ ಮಾಡುತ್ತಿದ್ದಾರಾದರೂ ಸಂಪೂರ್ಣ ಯಶ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಕನ್ನಡತಿ ಭಾರ್ಗವಿ ಹೇಮಂತ್‌ ಅವರು ವಿನೂತನ ಹಾಗೂ ಸರಳ ಮಾರ್ಗವೊಂದನ್ನು ಕಂಡುಹಿಡಿದಿದ್ದಾರೆ.

ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಪ್ರತಿನಿತ್ಯ ಅನ್ಯರಾಜ್ಯದವರು ಆಗಮಿಸುತ್ತಾರೆ. ಇಲ್ಲಿನ ಐಟಿಬಿಟಿ ಕಂಪನಿಗಳಲ್ಲಿರುವ ಉತ್ತಮ ನೌಕರಿಯ ಜತೆಗೆ ಉದ್ಯಮ ಮಾಡಲೂ ಆಗಮಿಸುತ್ತಿದ್ದಾರೆ. ಅನ್ಯ ರಾಜ್ಯದವರಿಗೆ ಕನ್ನಡ ಕಲಿಸುವುದಕ್ಕಿಂತಲೂ ಹೆಚ್ಚಾಗಿ ಅವರ ಭಾಷೆಯನ್ನು ಕಲಿತು ಮಾತನಾಡುವ ಸ್ವಭಾವವನ್ನೇ ಕನ್ನಡಿಗರು ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಇದರಿಂದಾಗಿ ಅನ್ಯರಾಜ್ಯದವರೂ ಕನ್ನಡ ಕಲಿಯುವ ಒತ್ತಡಕ್ಕೆ ಒಳಗಾಗದೆ ಹತ್ತಾರು ವರ್ಷ ಇಲ್ಲಿಯೇ ಇದ್ದರೂ ಭಾಷೆ ಕಲಿಯುತ್ತಿಲ್ಲ.

ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿಯಾನ

ಇದಕ್ಕಾಗಿ ಅನೇಕ ಕನ್ನಡಿಗರು, ಕನ್ನಡ ಕಲಿಕಾ ತರಗತಿಗಳನ್ನು ನಡೆಸಿದರು. ಸ್ಲೇಟು ಬಳಪ ಸಂಸ್ಥೆ ಮೂಲಕ ವಿನೂತನವಾಗಿ ಕನ್ನಡ ಸೇವೆ ಮಾಡುತ್ತಿರುವ ಭಾರ್ಗವಿ ಹೇಮಂತ್‌ ಕೂಡ ಈ ರೀತಿಯ ಪ್ರಯತ್ನ ಮಾಡಿದರು. ಆದರೆ ಇದರಿಂದ ಹೆಚ್ಚಿನ ಪ್ರಯೋಜನ ಆಗಲಿಲ್ಲ ಎನ್ನುವುದನ್ನು ಅರಿತು, ತಂತ್ರಜ್ಞಾನ ಸ್ನೇಹಿ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಅನ್ಯರಾಜ್ಯದವರಿಗೆ ಕನ್ನಡ ವ್ಯಾಕರಣ, ಕಾಗುಣಿತಕ್ಕಿಂತಲೂ ಹೆಚ್ಚಾಗಿ ದಿನನಿತ್ಯ ಬಳಸುವ ಸಾಮಾನ್ಯ ಬಳಕೆಯ ಪದಗಳು,ವಾಕ್ಯಗಳು ಬೇಕು. ದಿನನಿತ್ಯದ ವ್ಯವಹಾರದಲ್ಲಿ ಡ್ರೈವರ್‌, ಹೋಟೆಲ್‌ ಸಿಬ್ಬಂದಿ, ದಿನಸಿ ಅಂಗಡಿ, ಬಾರ್‌, ಕ್ಲಿನಿಕ್‌, ಬ್ಯಾಂಕ್‌, ಹಾಲಿನ ಅಂಗಡಿ, ಬಟ್ಟೆ ಅಂಗಡಿ ಮುಂತಾದೆಡೆ ಸಾಮಾನ್ಯ ಸಂಭಾಷಣೆಗಳನ್ನು ನಡೆಸುವುದನ್ನು ಕಲಿಯಬೇಕು.

ಇದಕ್ಕಾಗಿ ಇಂತಹ 26 ಕ್ಷೇತ್ರಗಳ ಸಾಮಾನ್ಯ ಸಂಭಾಷಣೆಯನ್ನು ಸುಮಾರು ಮೂರು ವರ್ಷದ ಪ್ರಯತ್ನದ ಫಲವಾಗಿ ರೂಪಿಸಿದ್ದಾರೆ. ಉದಾಹರಣೆಗೆ, ಹೋಟೆಲ್‌ನಲ್ಲಿ ಮಾತನಾಡುವಾಗ, ʼಮೆನು ಕೊಡಿ ಪ್ಲೀಸ್‌ʼ ಎಂದು ಕೇಳಬೇಕು. ಅದಕ್ಕೆ ಅನ್ಯಭಾಷಿಕರಿಗೆ ಅರ್ಥವಾಗುವಂತೆ ʼMenu Kodi Please’ ಎಂದು ಇಂಗ್ಲಿಷ್‌ ಅಕ್ಷರದಲ್ಲಿಯೂ ಸಂಭಾಷಣೆ ನೀಡಿದ್ದಾರೆ. ʼಇಂಡ್ಲಿ ಸಾಂಬಾರು ಕೊಡಿʼ ಎಂದು ಕನ್ನದ ಜತೆಗೆ ʼIdli Sambar Kodi’ ಎಂದು ಇಂಗ್ಲಿಷ್‌ ಅಕ್ಷರದಲ್ಲಿಯೂ ಮುದ್ರಿಸಿದ್ದಾರೆ. ಅದರ ಜತೆಗೆ ‘Idli Sambar Please’ ಎಂದು ಇಂಗ್ಲಿಷ್‌ ಭಾಷೆಯಲ್ಲೂ ಸಂಭಾಷಣೆ ನೀಡಿದ್ದಾರೆ. ಇದರಿಂದಾಗಿ ಅನ್ಯಭಾಷಿಕರು ತಮಗೆ ಬೇಕಾದ ಸಂಭಾಷಣೆಯನ್ನು ಆಯ್ಕೆ ಮಾಡಿಕೊಂಡು ಮಾತನಾಡಬಹುದು.

ಅಭಿಯಾನಕ್ಕೆ ರಾಘವೇಂದ್ರ ರಾಜಕುಮಾರ್‌ ಬೆಂಬಲ

ಸರಳ ಮಾರ್ಗ
ಇಷ್ಟು ಸರಳವಾಗಿ ಕನ್ನಡವನ್ನು ಕಲಿಯಲು ಯಾವುದೇ ಕ್ಲಾಸ್‌ಗೆ ಹೋಗುವ ಅಗತ್ಯವಿಲ್ಲದಂತೆ ವಿಧಾನ ರೂಪಿಸಲಾಗಿದೆ. ಭಾರ್ಗವಿ ಹೇಮಂತ್‌ ಅವರು ರೂಪಿಸಿರುವ ಕ್ಯುಆರ್‌ ಕೋಡ್‌ ಸ್ಕಾನ್‌ ಮಾಡಿದರೆ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಅಥವಾ ನೇರವಾಗಿ ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕವೂ ವೆಬ್‌ಸೈಟ್‌ ಪ್ರವೇಶಿಸಬಹುದು.

ಅದರಲ್ಲಿ ಅತ್ಯಂತ ಸರಳವಾಗಿ 26 ವಿವಿಧ ಕ್ಷೇತ್ರಗಳು ಹಾಗೂ ಎರಡು ಸಾಮಾನ್ಯ ಬಳಕೆ ಸೇರಿ 28 ವಿಭಾಗದ ಪಟ್ಟಿ ನೀಡಲಾಗಿದೆ. ಈಗ ಅಗತ್ಯವಾಗಿರುವ ವಿಭಾಗದ ಮೇಲೆ ಕ್ಲಿಕ್‌ ಮಾಡಿದರೆ ಅದರಲ್ಲಿನ ಸಂಭಾಷಣೆಗಳು ತೆರೆದುಕೊಳ್ಳುತ್ತವೆ. ಸಂದರ್ಭಕ್ಕೆ ತಕ್ಕಂತೆ ಅವನ್ನು ನೋಡಿಕೊಂಡು ಕನ್ನಡದಲ್ಲಿ ಮಾತನಾಡಬಹುದು ಎಂದು ಭಾರ್ಗವಿ ಹೇಮಂತ್‌ ತಿಳಿಸುತ್ತಾರೆ.

ವಿವಿಧ ವಾಹನ, ಸಾರ್ವಜನಿಕ ಸ್ಥಳಗಳಲ್ಲಿ ಕ್ಯುಆರ್‌ ಕೋಡ್‌

ಕನ್ನಡಿಗರಿಗೂ ಅನುಕೂಲ
ಭಾರ್ಗವಿ ಹೇಮಂತ್‌ ಅವರು ರೂಪಿಸಿರುವ ಸರಳ ವಿಧಾನವು ಅನ್ಯಭಾಷಿಕರಿಗಷ್ಟೆ ಅಲ್ಲದೆ ಕನ್ನಡಿಗರಿಗೂ ಅನುಕೂಲವಾಗಲಿದೆ. ಇಂಗ್ಲಿಷ್‌ ಎಂದರೆ ಕಬ್ಬಿಣದ ಕಡಲೆ ಎಂದುಕೊಂಡು ಕೀಳರಿಮೆ ಹೊಂದಿರುವ ಅನೇಕರು ಇಂಗ್ಲಿಷನ್ನೂ ಕಲಿಯಬಹುದು. ವಿಮಾನ ನಿಲ್ದಾಣಕ್ಕೆ ಹೋದಾಗ, ʼನಾನು ಹೋಗುವ ಫ್ಲೈಟ್‌ ಡೀಟೇಲ್ಸ್‌ ತಿಳಿಸಿಕೊಡಬಹುದʼ ಎಂದು ನೀಡುವ ಸ್ಥಳದಲ್ಲೇ ʼCan I Get to know details about my flight?’ ಎಂದೂ ಬರೆದಿರುತ್ತದೆ. ಇಂಗ್ಲಿಷ್‌ನಲ್ಲೆ ಕೇಳಬಹುದು. ಹೀಗೆ, ಅನ್ಯ ಭಾಷಿಕರಿಗೆ ರೂಪಿಸಲಾದ ವಿಧಾನ ಕನ್ನಡಿಗರಿಗೂ ಅನುಕೂಲವಾಗುವಂತಿದೆ.

ಕ್ಯುಆರ್‌ ಕೋಡ್‌ ಸ್ಟಿಕರ್‌ ಅಭಿಯಾನ
ಅತ್ಯಂತ ಸರಳವಾಗಿರುವ ಈ ವಿಧಾನವನ್ನು ಜನಪ್ರಿಯಗೊಳಿಸಲು ಟೊಂಕ ಕಟ್ಟಿ ನಿಂತಿರುವ ಭಾರ್ಗವಿ ಹೇಮಂತ್‌ ಅವರು ಕ್ಯುಆರ್‌ ಕೋಡ್‌ ಸ್ಟಿಕರ್‌ ಅನ್ನು ತಮ್ಮ ಕಾರಿನ ಮೇಲೆ ಮೊದಲಿಗೆ ಅಂಟಿಸಿಕೊಂಡಿದ್ದಾರೆ. ಇದನ್ನೇ ಆಟೊ, ರೆಸ್ಟೋರೆಂಟ್‌, ಖಾಸಗಿ ವಾಹನಗಳು ಸೇರಿ ಎಲ್ಲೆಡೆ ಅಂಟಿಸುತ್ತಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರಕಿದ್ದು, ಅನೇಕರು ವೆಬ್‌ಸೈಟ್‌ಗೆ ತೆರಳಿ ಕಲಿಯುತ್ತಿದ್ದಾರೆ.

ಹಿರಿಯ ಚಿತ್ರನಟ ರಾಘವೇಂದ್ರ ರಾಜಕುಮಾರ್‌ ಸೇರಿ ಅನೇಕರೂ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಸ್ಕ್ಯಾನ್‌ ಮಾಡಿ, ಕನ್ನಡ ಮಾತಾಡಿ ಎಂದು ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಈ ಸ್ಟಿಕರ್‌ಗಳನ್ನು ತಮ್ಮ ಪ್ರದೇಶದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಬಹುದು. ಅದಕ್ಕಾಗಿ ಉಚಿತವಾಗಿ ಸ್ಟಿಕರ್‌ಗಳನ್ನೂ ಭಾರ್ಗವಿ ಅವರು ಕಳಿಸಿಕೊಡುತ್ತಾರೆ. ಅದಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ವಾಟ್ಸಪ್‌ ಗ್ರೂಪ್‌ ಸೇರ್ಪಡೆ ಆಗಬಹುದು. ಅಥವಾ ಈ ಲಿಂಕ್‌ ಕ್ಲಿಕ್‌ ಮಾಡಿ ಗೂಗಲ್‌ ಫಾರ್ಮ್‌ ಭರ್ತಿ ಮಾಡಬಹುದು. ಅಂತಹವರಿಗೆ ಉಚಿತವಾಗಿ ಸ್ಟಿಕರ್‌ ಕಳಿಸಲಾಗುತ್ತದೆ ಎಂದು ಭಾರ್ಗವಿ ಹೇಮಂತ್‌ ಹೇಳಿದ್ದಾರೆ.

ಇದನ್ನೂ ಓದಿ | ಎನ್‌ಇಪಿ ಅಡಿ ಕನ್ನಡ ಕಲಿಕೆ ಕಡ್ಡಾಯ: ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ

Exit mobile version