Site icon Vistara News

ಮಣ್ಣೆತ್ತಿನ ಅಮಾವಾಸ್ಯೆ‘ಶಕ್ತಿ’; ಬೆಳಗ್ಗೆಯೇ ಬಸ್​ ಹತ್ತಿ ಹೊರಟ ಸ್ತ್ರೀಯರು, ಎಲ್ಲೆಲ್ಲೂ ನೂಕು ನುಗ್ಗಲು

Rush At Mandya Bus Stand

#image_title

ಇಂದು ಮಣ್ಣೆತ್ತಿನ ಅಮಾವಾಸ್ಯೆ (Mannettina Amavasya). ಉತ್ತರ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದಲ್ಲಿ ಇದೊಂದು ಹಬ್ಬವಾಗಿದ್ದು, ಬೆಳಗ್ಗೆಯಿಂದಲೇ ಮಹಿಳೆಯರು ಬಸ್​ ಹತ್ತಿ ವಿವಿಧ ದೇವಸ್ಥಾನಗಳತ್ತ ಹೊರಟಿದ್ದಾರೆ. ಈಗಂತೂ ಕೆಎಸ್​​ಆರ್​ಟಿಸಿ ಬಸ್​ ಉಚಿತವಾಗಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲದತ್ತ ಮುಖ ಮಾಡಿದ್ದಾರೆ. ಪುರುಷರಿಗೆ ಬಸ್ ಹತ್ತಲು ಸಾಧ್ಯವಾಗದ ಪರಿಸ್ಥಿತಿಯೂ ಬಂದಿದೆ.

ಎಳ್ಳು ಅಮಾವಾಸ್ಯೆ ಅಥವಾ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಇಂದು ಮಂಡ್ಯದಿಂದ ಅನೇಕ ಮಹಿಳೆಯರು ಬೆಳಗ್ಗೆಯೇ ಚಾಮರಾಜನಗರದಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದಾರೆ. ಮಳವಳ್ಳಿ ಸೇರಿ ವಿವಿಧ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ನೂಕುನುಗ್ಗಲು ಉಂಟಾಗಿತ್ತು. ಇದರಿಂದ ಕೆಲ ಸಮಯ ಬಸ್​ ನಿಲ್ದಾಣದಲ್ಲಿ ಗೊಂದಲ ಏರ್ಪಟ್ಟಿತ್ತು. ಮಳವಳ್ಳಿ ಬಸ್​ ನಿಲ್ದಾಣಕ್ಕೆ ಪೊಲೀಸರು ಕೂಡ ಆಗಮಿಸಬೇಕಾಯ್ತು. ಮಲೆ ಮಹದೇಶ್ವರ ಬೆಟ್ಟಕ್ಕೆ ಅಷ್ಟೇ ಅಲ್ಲದೆ, ಶಕ್ತಿ ದೇವತೆಗಳೆನಿಸಿದ, ಶ್ರೀರಂಗಪಟ್ಟಣದ ನಿಮಿಷಾಂಬೆ ಮತ್ತು ಅಹಲ್ಯಾ ದೇವಿ ದರ್ಶನಕ್ಕಾಗಿಯೂ ಅನೇಕಾನೇಕ ಭಕ್ತರು ಹೊರಟಿದ್ದಾರೆ. ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ.

ದೇಗುಲಗಳಲ್ಲೂ ಬೆಳಗ್ಗೆಯಿಂದಲೇ ಭಕ್ತರ ಸಂಖ್ಯೆ ಜಾಸ್ತಿಯಿದ್ದು, ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇತ್ತ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲೂ ಪ್ರವಾಸಿಗರು ತುಂಬಿದ್ದಾರೆ. ಇಲ್ಲೂ ಮಹಿಳೆಯರದ್ದೇ ಮೇಲುಗೈ. ಕೊಳ್ಳೆಗಾಲ ಮತ್ತು ಚಾಮರಾಜನಗರ ಬಸ್​ ನಿಲ್ದಾಣಗಳಲ್ಲಿ ಜನರು ತುಂಬಿಹೋಗಿದ್ದಾರೆ. ಬಸ್​ಸ್ಟ್ಯಾಂಡ್​ಗಳಲ್ಲಿ ಖಾಸಗಿ ಬಸ್​ಗಳು ಇದ್ದರೂ ಅವುಗಳ ಕಡೆಗೆ ಮಹಿಳೆಯರು ನೋಡುತ್ತಿಲ್ಲ. ಕೆಎಸ್​ಆರ್​ಟಿಸಿ ಬಸ್​ಗಳು ಎಷ್ಟೇ ರಶ್​ ಆದರೂ ಸರಿ, ಇಲ್ಲೇ ಮತ್ತಷ್ಟು ನುಸುಳುತ್ತಿದ್ದಾರೆ.

ಇದನ್ನೂ ಓದಿ: Free Bus Service: ಮಹಿಳಾ ಶಕ್ತಿಗೆ ಕಿತ್ತುಬಂದ ಬಸ್‌ ಡೋರ್‌!

ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು!
ಇಂದಿನಿಂದ ಆಷಾಢ ಮಾಸ ಆರಂಭವಾದ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನ, ಪೂಜೆಗಾಗಿ ಜನರು ಮುಗಿಬೀಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಕೆಎಸ್​ಆರ್​ಟಿಸಿ ಬಸ್​ ಉಚಿತ ಇದ್ದ ಕಾರಣ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಎಲ್ಲಿ ನೋಡಿದರಲ್ಲಿ ಜನರೇ ಕಾಣುತ್ತಿದ್ದಾರೆ. ದೇಗುಲದಲ್ಲಿ ವಿಶೇಷ ದರ್ಶನ, ಧರ್ಮ ದರ್ಶನ ಎರಡೂ ಕಡೆಗಳಲ್ಲೂ ನೂಕುನುಗ್ಗಲು ಉಂಟಾಗುತ್ತಿದೆ. ಮುಂಜಾನೆಯಿಂದಲೇ ಮಾರುದ್ದ ಕ್ಯೂ ಇದೆ.

ಇನ್ನು ಕಲಬುರಗಿಯಲ್ಲೂ ಇದೇ ಕಥೆ ಆಗಿದೆ. ಬಸ್ ಉಚಿತ ಪ್ರಯಾಣ ಇರುವ ಕಾರಣಕ್ಕೆ ಮಹಿಳೆಯರು ಪ್ರಯಾಣ ಮಾಡುವ ಪ್ರಮಾಣ ಜಾಸ್ತಿಯಾಗಿದೆ. ಬೆಳಗ್ಗೆಯಾದರೆ ಸಾಕು ಬಸ್​ಸ್ಟ್ಯಾಂಡ್​ಗಳು ಸ್ತ್ರೀಯರಿಂದ ತುಂಬಿ ತುಳುಕುತ್ತವೆ. ಇತ್ತ ದಕ್ಷಿಣ ಕನ್ನಡ, ಕರಾವಳಿ ತೀರದ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಕಲಬುರಗಿ ಬಸ್​ ನಿಲ್ದಾಣದಲ್ಲಿ ಬಸ್ ಹತ್ತಲು ನೂಕು ನುಗ್ಗಲು

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Exit mobile version