ಬೆಂಗಳೂರು/ಮಂಗಳೂರು: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಾನುವಾರವಷ್ಟೇ (ಜೂನ್ 11) ತನ್ನ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಗ್ಯಾರಂಟಿಯಾದ (Congress Guarantee) “ಶಕ್ತಿ” ಯೋಜನೆಯನ್ನು (Shakti Scheme) ಅನುಷ್ಠಾನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸಹ ರಾಜ್ಯಾದ್ಯಂತ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಮೊದಲ ದಿನವೇ 5.7೦ ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಯಾಣಿಸಿದ್ದರು. ಈಗ ಈ ಉಚಿತ ಸೇವೆಯ (Free Bus Service) ಸಂಪೂರ್ಣ ಲಾಭವನ್ನು ಪಡೆಯಲು ಮಹಿಳೆಯರು ಮುಂದಾಗಿದ್ದು, ಗುಂಪು ಗುಂಪಾಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಈಗ ಬಸ್‌ಗಳೂ ಫುಲ್, ತೀರ್ಥಕ್ಷೇತ್ರಗಳೂ ರಶ್ ಎಂಬಂತೆ ಆಗಿದೆ.
ಧರ್ಮಸ್ಥಳದಲ್ಲಿ ಭಕ್ತರ ದಂಡು
ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಹಿಳಾ ಭಕ್ತರ ದಂಡೇ ಹರಿದು ಬಂದಿದೆ. ರಾಜ್ಯದ ಬೇರೆ ಬೇರೆ ಭಾಗದಿಂದ ಬಸ್‌ನಲ್ಲಿ ಮಹಿಳೆಯರು ಬಂದಿದ್ದಾರೆ. ದೇವರ ದರ್ಶನ ಪಡೆದಿದ್ದಾರೆ. ಅಲ್ಲಿಂದ ಸೀದಾ ಕುಕ್ಕೆಗೆ ತೆರಳಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದ ಬಸ್‌ಗಳು ಬಹುತೇಕ ರಶ್ ಆಗುತ್ತಿವೆ.
ಧರ್ಮಸ್ಥಳದಿಂದ ಕುಕ್ಕೆಗೆ ತೆರಳಲು ಧರ್ಮಸ್ಥಳದಲ್ಲಿ ಜನಜಂಗುಳಿ ಉಂಟಾಗಿದ್ದು, ಎಲ್ಲರೂ ಸಹ ಸರ್ಕಾರಿ ಬಸ್ ಹತ್ತಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ನೂಕು ನುಗ್ಗಲು ಸಹ ಉಂಟಾಗಿದೆ. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದರಿಂದ ಟಿಕೆಟ್ ಕೊಡುವುದು ಸಹ ನಿರ್ವಾಹಕರಿಗೆ ತಲೆಬಿಸಿಯಾಗಿ ಮಾರ್ಪಟ್ಟಿದೆ.
ಮಲೆ ಮಹದೇಶ್ವರನತ್ತ ಹೊರಟ ಮಹಿಳೆಯರು
ಇನ್ನು ಬೆಂಗಳೂರಿನಿಂದಲೂ ಮಹಿಳೆಯರು ರಾಜ್ಯದ ಹಲವಾರು ಕಡೆ ಇರುವ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ. ಕೆಲವರು ಇನ್ನೂ ಪ್ಲ್ಯಾನ್ ಮಾಡುವ ಹಂತದಲ್ಲಿದ್ದರೆ, ಮತ್ತೆ ಕೆಲವರು ತಮ್ಮ ರೂಟ್ ಮ್ಯಾಪ್ ಅನ್ನು ಸಿದ್ಧಪಡಿಸಿ ಹೊರಟೇ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮದೇ ತಂಡಗಳನ್ನು ಮಾಡಿಕೊಂಡು ಆಯ್ಕೆ ಮಾಡಿಕೊಂಡ ಜಾಗಗಳಿಗೆ ಹೋಗುತ್ತಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನಿಂದ ಹಲವು ಮಹಿಳೆಯರ ತಂಡವು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿವೆ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು ಕಡೆ ಹೋಗುವ ಬಸ್‌ನಲ್ಲಿ ಜನವೋ ಜನ ಎಂಬಂತೆ ಆಗಿದೆ. ಮಹಿಳೆಯರು ಕಿಕ್ಕಿರಿದು ತುಂಬಿದ್ದು, ಉಚಿತವಾಗಿ ಪ್ರಯಾಣ ಮಾಡುವ ಖುಷಿಯಲ್ಲಿದ್ದಾರೆ. ಹೀಗಾಗಿ ಸರ್ಕಾರದ ಈ ಯೋಜನೆ ಬಗ್ಗೆ ಬಹಳ ಖುಷಿ ಪಟ್ಟಿದ್ದಾರೆ. ಎಲ್ಲರೂ ಮಲೆಮಹದೇಶ್ವರ ಬೆಟ್ಟದ ಕಡೆ ಹೋಗಿದ್ದಾರೆ.
ಇದನ್ನೂ ಓದಿ: Electricity Bill: ಸರ್ಕಾರಕ್ಕೆ ಕೆಟ್ಟ ಹೆಸರು ಬೇಕಾ? ಕೂಡಲೇ ವಿದ್ಯುತ್ ದರ ತಗ್ಗಿಸಿ; ಸಿಎಂಗೆ ತನ್ವೀರ್ ಸೇಠ್ ಪತ್ರ
ಮೊದಲ ದಿನದ ಪ್ರಯಾಣ ಹೀಗಿತ್ತು
ಭಾನುವಾರ ಒಂದೇ ದಿನ ನಾಲ್ಕು ನಿಗಮದಿಂದ 5,71,023 ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಅಂದು ಮಧ್ಯಾಹ್ನ 1 ಗಂಟೆಯ ನಂತರ ಮಧ್ಯರಾತ್ರಿ ವರೆಗೆ ಒಟ್ಟು 5,71,023 ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಮಹಿಳಾ ಪ್ರಯಾಣಿಕರ ಪ್ರಯಾಣಿಸಿದ ಒಟ್ಟು ಮೌಲ್ಯ 1,40,22,878 ರೂಪಾಯಿ ಆಗಿದೆ.