Site icon Vistara News

Women’s protest | ಹೊಸ ಮದ್ಯದಂಗಡಿ ಆರಂಭದ ವಿರುದ್ಧ ಸಿಡಿದೆದ್ದ ಲಕ್ಷ್ಮೇಶ್ವರದ ಲಕ್ಷ್ಮಿಯರು, ಶಾಪ್‌ಗೆ ಮುತ್ತಿಗೆ

Lakshmeshwara madya

ಗದಗ: ಮದ್ಯಪಾನದಿಂದ ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಕುಟುಂಬಗಳಲ್ಲಿ ಆಗುತ್ತಿರುವ ಅವಾಂತರಗಳನ್ನು ಕಣ್ಣಾರೆ ಕಂಡಿರುವ, ಅನುಭವಿಸುತ್ತಿರುವ ಲಕ್ಷ್ಮೇಶ್ವರದ ಮಹಿಳೆಯರು ತಮ್ಮೂರಲ್ಲಿ ಹೊಸದಾಗಿ ಜೀವ ಪಡೆಯಲು ಮುಂದಾದ ಮದ್ಯದಂಗಡಿಯನ್ನು ಆರಂಭದಲ್ಲೇ ಪ್ರತಿರೋಧಿಸಿದ್ದಾರೆ.

ಗದಗ ಜಿಲ್ಲೆ ಲಕ್ಷೇಶ್ವರ ಪಟ್ಟಣದಲ್ಲಿ ಸಂಗಮ್‌ ಬಾರ್ & ಲಾಡ್ಜಿಂಗ್ ಮುಂದೆ ಸೋಮವಾರ ಮುಂಜಾನೆಯೇ ಮಹಿಳೆಯರು ಜಮಾಯಿಸಿ ಯಾವ ಕಾರಣಕ್ಕೂ ಇಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ಆಗ್ರಹಿಸಿದರು.

ಇಲ್ಲಿ ಸೋಮವಾರ ಹೊಸ ಸಾರಾಯಿ ಅಂಗಡಿ ಆರಂಭವಾಗುವುದಿತ್ತು. ಸರಕಾರದಿಂದ ಎಲ್ಲ ರೀತಿಯ ಅನುಮತಿಗಳನ್ನು ಪಡೆದು ಬಂದಿದ್ದರೂ ಮಹಿಳೆಯರು ಇನ್ನು ತೀವ್ರವಾಗಿ ವಿರೋಧಿಸಿದರು. ತಕ್ಷಣವೇ ಸಾರಾಯಿ ಅಂಗಡಿಯನ್ನು ತೆರವು ಮಾಡಬೇಕು ಎಂದು ಮಾಲೀಕನಿಗೆ ಮನವಿ ಮಾಡಿದರೆ, ಅನುಮತಿಯನ್ನು ಹಿಂದೆ ಪಡೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಇಲ್ಲಿ ಮಾತ್ರವಲ್ಲ, ಈ ಏರಿಯಾದ ಯಾವ ಭಾಗದಲ್ಲೂ ಸಾರಾಯಿ ಅಂಗಡಿ ತೆರೆಯಬಾರದೆಂದು ಅಂಗಡಿ ಮಾಲೀಕನಿಗೆ ಮುತ್ತಿಗೆ ಹಾಕಿದ ಮಹಿಳೆಯರು ಆಗ್ರಹಿಸಿದರು.

ಮದ್ಯಪಾನ ಮಾಡಿ ನಮ್ಮ ಕುಟುಂಬ ಈಗಾಗಲೇ ಹಾಳಾಗಿದೆ. ಇನ್ನು ನಮ್ಮ ಮಕ್ಕಳು ಕೂಡಾ ಹಾಳಾಗುತ್ತಾರೆ. ಅದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ ಅವರು, ಸಾರಾಯಿ ಅಂಗಡಿ ತೆರೆದಲ್ಲಿ ಉಗ್ರಪ್ರತಿಭಟನೆ ಎಚ್ಚರಿಕೆ ನೀಡಿದರು.

ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕೂಡಾ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ದಯವಿಟ್ಟು ಮದ್ಯದಂಗಡಿ ತೆರೆಯಲು ಬಿಡಬೇಡಿ ಎಂದು ಮಹಿಳೆಯರು ಕಂಡ ಕಂಡವರಲ್ಲಿ ಮನವಿ ಮಾಡುತ್ತಿದ್ದ ದೃಶ್ಯ ಈ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಯ ದರ್ಶನ ಮಾಡಿಸುತ್ತಿತ್ತು.

ಇದನ್ನೂ ಓದಿ | New Year liquor sale | 9 ದಿನಗಳಲ್ಲಿ 1262 ಕೋಟಿ ರೂ. ಮದ್ಯ ಮಾರಾಟ, ಅಬಕಾರಿ ಇಲಾಖೆಗೆ 657 ಕೋಟಿ. ರೂ. ಆದಾಯ

Exit mobile version