ಬೆಂಗಳೂರು: ಮೈಸೂರು ಬಾರ್ ಕೌನ್ಸಿಲ್‌ನಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವಿವಾದ ಆಗುತ್ತೆ ಎಂಬ ಕಾರಣಕ್ಕೆ ಅಲ್ಲಿಗೆ ಹೋಗುವುದಿಲ್ಲ. ನನ್ನ ಮೇಲೆ ಕೇಸ್ ಇದ್ದಾವೋ ಇಲ್ಲವೋ ಅದು ಬೇರೆ ವಿಷಯ. ಈ ಹಿಂದೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಸಿಎಂ ಆಗಿದ್ದರು. ಅವರ ಮೇಲೆ ಕೇಸ್ ಇರಲಿಲ್ಲವಾ? ಅವರು ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಪ್ರಶ್ನಿಸಿದ್ದಾರೆ.
ನ್ಯಾಯಾಂಗದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಶಾಸಕ, ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ನಾನು ಯಾರಿಗೂ ಮುಜುಗರ ಮಾಡುತ್ತಿಲ್ಲ. ಮೈಸೂರು ಬಾರ್ ಕೌನ್ಸಿಲ್‌ನಿಂದ ಕಾರ್ಯಕ್ರಮಕ್ಕೆ ಕರೆದಿದ್ದರು. ನನಗೆ ಸಾಕಷ್ಟು ಆಹ್ವಾನಗಳು ಬರುತ್ತವೆ. ಜಡ್ಜ್‌ಗಳು ಕೂಡ ಮದುವೆ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ನಾನು ಈ ರೀತಿಯಲ್ಲಿ ವಿವಾದ ಆಗುತ್ತೆ ಅಂತಲೇ ಹೋಗಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Upper Bhadra project : ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಅಲ್ವಂತೆ!; ಕೇಂದ್ರದ ಮೇಲೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ
ಸುರೇಶ್ ಕುಮಾರ್ ಆಕ್ಷೇಪವೇನು?
ಮೈಸೂರಿನಲ್ಲಿ ಆ.12ರಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ (Karnataka State Bar Council) ವತಿಯಿಂದ ವಕೀಲರ ರಾಜ್ಯ ಮಟ್ಟದ 10ನೇ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ, ಸುಪ್ರೀಂ ಕೋರ್ಟ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮತ್ತಿತರ ಗಣ್ಯರು ಭಾಗವಹಿಸುತ್ತಾರೆ. ಆದರೆ, ಹಲವು ಪ್ರಕರಣ ಎದುರಿಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನ್ಯಾಯಾಂಗದ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ ಎಂದು ಪ್ರಶ್ನಿಸಿದ್ದರು.
ನಾನು ಹಿಂದೆ ಕಾನೂನು ಸಚಿವನಾಗಿದ್ದಾಗ ರಾಜ್ಯದ ಉಚ್ಚ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯಮೂರ್ತಿ ಗಳೊಂದಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನ್ಯಾಯಾಲಯದ ಹೊಸ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆಗ ಮುಖ್ಯ ನ್ಯಾಯಮೂರ್ತಿಗಳೊಡನೆ ವೇದಿಕೆ ಮೇಲೆ ಕುಳಿತುಕೊಳ್ಳುವ ಅತಿಥಿಗಳ ಮೇಲೆ (ಕಾನೂನು ಸಚಿವನಾಗಿದ್ದ ನನ್ನದೂ ಸೇರಿದಂತೆ) ಏನಾದರೂ ಕ್ರಿಮಿನಲ್ ಕೇಸ್ ಇದೆಯೇ ಎಂದು ಪ್ರಶ್ನಿಸಲಾಗಿದ್ದ ಘಟನೆ ನೆನಪಿಗೆ ಬರುತ್ತಿದೆ. ನನ್ನ ಮೇಲೆ ಯಾವುದೇ ಪ್ರಕರಣ ಇರಲಿಲ್ಲ ಎಂಬುದು ಬೇರೆ ವಿಚಾರ ಎಂದು ತಿಳಿಸಿದ್ದರು.
ಇದನ್ನೂ ಓದಿ | BBMP Scams: ಬಿಬಿಎಂಪಿ ಕಾಮಗಾರಿ ಅಕ್ರಮಗಳಿಗೆ ತನಿಖೆಯ ಬಾಣ ಬಿಟ್ಟ ಡಿಕೆಶಿ; 4 ತನಿಖಾ ಸಮಿತಿ ರಚನೆಗೆ ಆದೇಶ
ಡಿ.ಕೆ. ಶಿವಕುಮಾರ್ ಅವರು ಎದುರಿಸುತ್ತಿರುವ ಕೆಲ ಕೇಸ್‌ಗಳು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಇರುವುದು ಎಲ್ಲರಿಗೂ ತಿಳಿದ ವಿಷಯ. ಅಂತಹ ವ್ಯಕ್ತಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ನ್ಯಾಯಮೂರ್ತಿಗಳ ಜೊತೆ ಭಾಗವಹಿಸುವುದು ಸೂಕ್ತವೇ? ಕಾರ್ಯಕ್ರಮದ ಯೋಜಕ ವಕೀಲರ ಪರಿಷತ್ ಈ ಕುರಿತು ಸ್ಪಷ್ಟೀಕರಣ ನೀಡಬೇಕು.. ನ್ಯಾಯಮೂರ್ತಿಗಳಿಗೆ ಇದು ಸಮ್ಮತವೇ? ಶಿಷ್ಟಾಚಾರ ಎಲ್ಲರಿಗೂ ಅನ್ವಯವಾಗಬೇಕಲ್ಲವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದ ಸುರೇಶ್ ಕುಮಾರ್ ಅವರು, ಈ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೂ ಪತ್ರ ಬರೆದಿದ್ದರು.