ಬೆಂಗಳೂರು: ರಾಜಧಾನಿಯಿಂದ 60-80 ಕಿ.ಮೀ. ದೂರದಲ್ಲಿ ಜಾಗತಿಕ ದರ್ಜೆಯ `ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ’ (ಕೆಎಚ್ಐಆರ್ ಸಿಟಿ)ವನ್ನು ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆ ಆಗಲಿದ್ದು, 80 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಹೇಳಿದ್ದಾರೆ.
ಉದ್ದೇಶಿತ ಕೆಎಚ್ಐಆರ್ ಸಿಟಿ ಬಗ್ಗೆ ಗಣ್ಯ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಸಂಶೋಧಕರ ಸಲಹೆ, ಅಭಿಪ್ರಾಯಗಳನ್ನು ಪಡೆಯಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜತೆಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಇದ್ದರು.
ಜಗತ್ತಿನ ಅತ್ಯುತ್ತಮ ಕಂಪನಿಗಳು, ವಿಶ್ವವಿದ್ಯಾಲಯಗಳ ಕ್ಯಾಂಪಸ್, ಆಸ್ಪತ್ರೆ, ಆರ್ & ಡಿ ಕೇಂದ್ರಗಳು, ಆಧುನಿಕ ಸ್ಟಾರ್ಟಪ್ಸ್, ಕೆಎಚ್ಐಆರ್ ಸಿಟಿಯಲ್ಲಿ ನೆಲೆಯೂರಲಿವೆ. ಒಟ್ಟು ಎರಡು ಹಂತಗಳಲ್ಲಿ ಇದನ್ನು ತಲಾ ಒಂದು ಸಾವಿರ ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ಯೋಜನೆಯು ಸಾಕಾರಗೊಂಡರೆ 1 ಲಕ್ಷ ಕೋಟಿ ರೂ.ಗಳಷ್ಟು ವಾರ್ಷಿಕ ವರಮಾನ ಉತ್ಪತ್ತಿಯಾಗಲಿದ್ದು, ರಾಜ್ಯದ ಜಿಡಿಪಿಗೆ ಶೇಕಡ 5ರಷ್ಟು ಕೊಡುಗೆ ಇದರಿಂದ ಬರಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ | DK Shivakumar : BJP-JDS ಬರ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದ ಡಿಕೆಶಿ
ಅಮೆರಿಕ, ಸಿಂಗಪುರ, ಜಪಾನ್, ಅರಬ್, ಸ್ವೀಡನ್, ಡೆನ್ಮಾರ್ಕ್, ಚೀನಾ ಮುಂತಾದ ದೇಶಗಳಲ್ಲಿ ಇಂತಹ `ಸಿಟಿ’ಗಳಿವೆ. ನಿರೀಕ್ಷಿತ ಮಟ್ಟದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕೆಂದರೆ ಆರೋಗ್ಯ, ಶಿಕ್ಷಣ, ಸಂಶೋಧನೆ, ನಾವೀನ್ಯತೆ, ವಿಜ್ಞಾನ, ತಂತ್ರಜ್ಞಾನ ಇವುಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಾಗಿದೆ. ಬೆಂಗಳೂರು ಇವುಗಳ ಆಡುಂಬೊಲವಾಗಿದ್ದು, ಇದರ ಗರಿಷ್ಠ ಲಾಭವನ್ನು ನಾವು ಪಡೆದುಕೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕೆಎಚ್ಐಆರ್ ಸಿಟಿಯಲ್ಲಿ ಆರೋಗ್ಯ ಕ್ಷೇತ್ರದ ಕಂಪನಿಗಳು, ವೈದ್ಯಕೀಯ ಕೇಂದ್ರಗಳು, ರಿಯಲ್ ಎಸ್ಟೇಟ್, ಹೂಡಿಕೆದಾರರು ಮತ್ತು ವಿಮಾ ಕಂಪನಿಗಳ ನಡುವೆ ಸಹಭಾಗಿತ್ವಕ್ಕೆ ಒತ್ತು ಇರಲಿದೆ. ಇದು ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ಉತ್ಕೃಷ್ಟತೆಯ ಮಾನದಂಡವಾಗಿ ಗುರುತಿಸಿಕೊಳ್ಳುವಂತೆ ಮಾಡುವುದು ಸರಕಾರದ ಗುರಿಯಾಗಿದೆ ಎಂದು ಅವರು ವಿವರಿಸಿದರು.
ಈ ‘ಸಿಟಿ’ಯನ್ನು ಸರಿಯಾದ ದಿಕ್ಕಿನಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ಗಣ್ಯ ಸಾಧಕರ ಸಲಹೆಗಳನ್ನು ಪಡೆಯಲಾಗಿದ್ದು, ಒಂದೊಂದು ವಲಯಕ್ಕೂ ಉಪಸಮಿತಿಗಳನ್ನು ರಚಿಸಲಾಗುವುದು. ಒಟ್ಟಾರೆಯಾಗಿ ಯೋಜನೆಯು ರಾಜ್ಯಕ್ಕೆ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾಗಿ ಪರಿಣಮಿಸಬೇಕು ಎನ್ನುವ ನಿಟ್ಟಿನಲ್ಲಿ ನೀಲನಕ್ಷೆ ಮತ್ತು ಕಾರ್ಯತಂತ್ರ ರೂಪಿಸಲಾಗುವುದು ಎಂದು ಸಚಿವರು ನುಡಿದರು.
ಸಭೆಯಲ್ಲಿ ಉದ್ಯಮಿಗಳಾದ ಕ್ರಿಸ್ ಗೋಪಾಲಕೃಷ್ಣನ್, ಗೀತಾಂಜಲಿ ಕಿರ್ಲೋಸ್ಕರ್, ಪ್ರಶಾಂತ್ ಪ್ರಕಾಶ್, ಹೆಸರಾಂತ ವೈದ್ಯರಾದ ಡಾ.ದೇವಿಶೆಟ್ಟಿ, ಡಾ.ಸಿ. ಎನ್. ಮಂಜುನಾಥ್, ಡಾ.ವಿವೇಕ್ ಜವಳಿ, ಡಾ.ಶರಣ್ ಪಾಟೀಲ್, ಡಾ.ತಸ್ಲಿಂ ಸೈಯದ್, ಅಂಶುಲ್ ಗುಪ್ತ, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಆರೋಗ್ಯ ಇಲಾಖೆಯ ಉನ್ನತಾಧಿಕಾರಿ ಟಿ.ಕೆ.ಅನಿಲ್ ಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ | Telangana Election: ತೆಲಂಗಾಣದ ಜನ ಮೋದಿಯ ಮಕ್ಮಲ್ ಟೋಪಿಗೆ ತಲೆ ಕೊಡಲ್ಲ ಎಂದ ಸಿಎಂ ಸಿದ್ದು
ಕೆಎಚ್ಐಆರ್ ಸಿಟಿ ಪರಿಕಲ್ಪನೆಗೆ ಸಾಧಕರ ಸ್ವಾಗತ
ಸರ್ಕಾರ ಅಭಿವೃದ್ಧಿಪಡಿಸಲಿರುವ ಕೆಎಚ್ಐಆರ್ ಸಿಟಿ ಪರಿಕಲ್ಪನೆಯನ್ನು ಸಭೆಯಲ್ಲಿ ಭಾಗವಹಿಸಿದ್ದ ಡಾ.ಸಿ ಎನ್ ಮಂಜುನಾಥ್, ಡಾ.ವಿವೇಕ್ ಜವಳಿ ಮತ್ತು ಡಾ.ದೇವಿಶೆಟ್ಟಿ ಮೆಚ್ಚಿಕೊಂಡು, ಸಚಿವ ಎಂ.ಬಿ.ಪಾಟೀಲ ಅವರ ದೂರದೃಷ್ಟಿಯನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, `ವೇಗದಿಂದ ಬೆಳೆಯುತ್ತಿರುವ ಬೆಂಗಳೂರಿಗೆ ಇಂಥದ್ದೊಂದು ಯೋಜನೆಯ ಅಗತ್ಯವಿತ್ತು. ಇದರಿಂದ ರಾಜ್ಯದ ಜನರಿಗೆ ಕೈಗೆಟುಕುವ ರೀತಿಯಲ್ಲಿ ಅತ್ಯಾಧುನಿಕ ಚಿಕಿತ್ಸೆಗಳನ್ನು ಕೊಡಲು ಮತ್ತು ಈ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಇಲ್ಲಿ ಬರಲಿರುವ ನಾಲ್ಕೂ ವಲಯಗಳು ಒಂದಕ್ಕೊಂದು ಪೂರಕವಾಗಿದ್ದು, ಸುಸ್ಥಿರ ಅಭಿವೃದ್ಧಿ ಸಾಧಿಸಲು ನೆರವಿಗೆ ಬರಲಿದೆ’ ಎಂದರು.
ಇ.ವಿ. ಕರಡು ನೀತಿ ಸಿದ್ಧ, ಉದ್ಯಮಿಗಳೊಂದಿಗೆ ವಿಸ್ತೃತ ಚರ್ಚೆ: ಎಂ.ಬಿ.ಪಾಟೀಲ್
ಬೆಂಗಳೂರು: ಸರ್ಕಾರವು ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ದೇಶಕ್ಕೇ `ನಂಬರ್ 1’ ಮಾಡುವ ಗುರಿಯೊಂದಿಗೆ ಕರಡು ನೀತಿ ರೂಪಿಸಿದ್ದು, ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವ ಮತ್ತು 1 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶಗಳನ್ನು ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
2023ರಿಂದ 2028ರವರೆಗಿನ ಐದು ವರ್ಷಗಳ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿರುವ ನೀತಿಯ ಕರಡಿನ ಬಗ್ಗೆ ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯಮ ಪ್ರತಿನಿಧಿಗಳೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ನಮ್ಮ ಸಂಚಾರ ಕ್ಷೇತ್ರವನ್ನು ಆಳಲಿವೆ. ಕರಡು ನೀತಿಯಲ್ಲಿ ಬಂಡವಾಳ ಸಬ್ಸಿಡಿಯನ್ನು ಹೆಚ್ಚಿಸಬೇಕೆನ್ನುವ ಸಲಹೆ ಕೊಡಲಾಗಿದೆ. ಜೊತೆಗೆ, ಉತ್ಪಾದನೆ ಆಧರಿಸಿ ಕೊಡುವ ಪ್ರೋತ್ಸಾಹ ಭತ್ಯೆಯನ್ನು ಈಗಿನಂತೆ ಶೇಕಡ 1ರ ಪ್ರಮಾಣದಲ್ಲೇ ಮುಂದುವರಿಸಿಕೊಂಡು ಹೋಗುವ ಚಿಂತನೆಯೂ ಇದರಲ್ಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ | ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ದಾಖಲೆ! 10.60 ಲಕ್ಷ ಕೋಟಿ ರೂ.ಗೆ ತಲುಪಿದ ಸಂಗ್ರಹ
ಕರಡು ನೀತಿಯು ಕೇವಲ ವಿದ್ಯುಚ್ಚಾಲಿತ ವಾಹನಗಳ ಬಗ್ಗೆ ಮಾತ್ರ ಗಮನ ಹರಿಸಿಲ್ಲ. ಬದಲಿಗೆ ಇದರಲ್ಲಿನ ಕೋಶಗಳಲ್ಲಿರುವ ಅನೋಡ್, ಕ್ಯಾಥೋಡ್, ಸೆಪರೇಟರ್ಸ್, ಕಾರ್ಬೊನೇಟ್, ಸಾಲ್ವೆಂಟ್, ಶಕ್ತಿಶಾಲಿ ಹೈಬ್ರಿಡ್ ವಾಹನಗಳು, ಬ್ಯಾಟರಿ ರೀಸೈಕ್ಲಿಂಗ್ ಸೌಲಭ್ಯ, ಪರೀಕ್ಷಾರ್ಥ ಮೂಲಸೌಕರ್ಯಗಳನ್ನೂ ಕರಡು ನೀತಿಯು ಒಳಗೊಂಡಿದೆ ಎಂದು ಅವರು ವಿವರಿಸಿದರು.
ವಿದ್ಯುತ್ ಚಾಲಿತ ವಾಹನಗಳ ಮತ್ತು ಬಿಡಿಭಾಗಗಳ ತಯಾರಿಕೆಗೆ ಸೂಕ್ತ ಸ್ಥಳಗಳಲ್ಲಿ ಔದ್ಯಮಿಕ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲು ಇದರಲ್ಲಿ ಹೇಳಲಾಗಿದೆ. ಇದಕ್ಕೆ ಗೌರಿಬಿದನೂರು ಮತ್ತು ಚಿಕ್ಕಮಲ್ಲಿಗೆವಾಡ ಎರಡನ್ನೂ ತಕ್ಕ ತಾಣಗಳೆಂದು ಗುರುತಿಸಲಾಗಿದೆ. ಉದ್ದೇಶಿತ ಕ್ಲಸ್ಟರುಗಳಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲು ಸಜ್ಜುಗೊಳಿಸಿರುವ ಕೈಗಾರಿಕಾ ಶೆಡ್, ಪ್ಲಗ್ & ಪ್ಲೇ ಇನ್ಕ್ಯುಬೇಷನ್ ಸೌಲಭ್ಯ, ಪರೀಕ್ಷಾ ಪ್ರಯೋಗಾಲಯಗಳು, ತ್ವರಿತ ಅನುಮೋದನೆ ಮುಂತಾದ ಆರು ಅಂಶಗಳಿಗೆ ಒತ್ತು ಕೊಡಲಾಗುವುದು. ಜೊತೆಗೆ ವಿದ್ಯುತ್ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ಎಲ್ಲೆಡೆ ಚಾರ್ಜಿಂಗ್ ಸ್ಟೇಷನ್ನುಗಳನ್ನು ತ್ವರಿತ ಗತಿಯಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದು ಅವರು ನುಡಿದರು.
ಈ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲು `ಕಾಮನ್ ಫೆಸಿಲಿಟೀಸ್’ ಮತ್ತು ಪರೀಕ್ಷಾ ಮೂಲಸೌಕರ್ಯಗಳನ್ನು ಒದಗಿಸುವ ಚಿಂತನೆ ಇದೆ. ಇದಕ್ಕಾಗಿ ಖಾಸಗಿಯವರಿಗೆ ಅವರು ಹೂಡುವ ಬಂಡವಾಳದ ಮೇಲೆ ಗರಿಷ್ಠ ಶೇಕಡ 30ರವರೆಗೂ ಪ್ರೋತ್ಸಾಹನ ಭತ್ಯೆ ನೀಡಲು ಕರಡು ನೀತಿಯು ಶಿಫಾರಸು ಮಾಡಿದೆ. ಇ.ವಿ. ಕ್ಷೇತ್ರದ ಬೆಳವಣಿಗೆಗೆ ಬೇಕಾದ ಸೂಕ್ತ ಕಾರ್ಯ ಪರಿಸರ ನಿರ್ಮಾಣ ಇದರ ಉದ್ದೇಶವಾಗಿದೆ ಎಂದು ಪಾಟೀಲ ಹೇಳಿದರು.
ಐಟಿಐ ಅಳವಡಿಕೆಗೆ ಒತ್ತು
ವಿದ್ಯುತ್ ಚಾಲಿತ ವಾಹನಗಳ ಉದ್ಯಮಕ್ಕೆ ಕೌಶಲಪೂರ್ಣ ಮಾನವ ಸಂಪನ್ಮೂಲದ ತೀವ್ರ ಅಗತ್ಯವಿದೆ. ಇದಕ್ಕಾಗಿ ಕಂಪನಿಗಳೇ ಐಟಿಐ ತರಬೇತಿ ಕೋರ್ಸನ್ನು ಅಳವಡಿಸಿಕೊಳ್ಳುವ ಸಲಹೆ ಇದರಲ್ಲಿದೆ. ಇದರಿಂದಾಗಿ ತರಬೇತಿಗೆ ಮೀಸಲಿಡುವ ಸಮಯದಲ್ಲಿ ಶೇ.40ರಷ್ಟು ಉಳಿತಾಯವಾಗಲಿದೆ, 2 ರಿಂದ 4 ತಿಂಗಳ ಕಾಲಾವಧಿಯು ಕೂಡ ಕಡಿಮೆಯಾಗಲಿದೆ. ಇದರ ಜೊತೆಗೆ ಕಂಪನಿಗಳು ಇ.ವಿ. ನವೋದ್ಯಮಗಳು, ಸ್ಥಳೀಯ ವಿಶ್ವವಿದ್ಯಾಲಯಗಳ ಜೊತೆ ಸಹಭಾಗಿತ್ವ ಹೊಂದಬೇಕೆಂದು ಕರಡು ನೀತಿಯು ಹೇಳಿದೆ.
ಇ.ವಿ ಕ್ಲಸ್ಟರ್ಸ್ ಸ್ಥಾಪನೆ, ಚಾರ್ಜಿಂಗ್ ಸೌಲಭ್ಯಕ್ಕೆ ಸಲಹೆ
ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಉದ್ಯಮಿಗಳು ಮೈಸೂರು, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಇ.ವಿ.ಕ್ಲಸರ್ ಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಜೊತೆಗೆ ಬೆಂಗಳೂರು-ಪುಣೆ ಮಧ್ಯೆ 10 ಹೆದ್ದಾರಿ ಟೋಲ್ ಇದ್ದು, ಇಲ್ಲೆಲ್ಲ ಎರಡೂ ಬದಿಗಳಲ್ಲಿ ಇ.ವಿ. ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು.
ಇದಲ್ಲದೆ, ರಾಜ್ಯದ ಉಳಿದೆಡೆಗಳಲ್ಲೂ ಚಾರ್ಜಿಂಗ್ ಸೌಲಭ್ಯ ಒದಗಿಸಬೇಕಾದ ಜರೂರಿರುವ ಬಗ್ಗೆ ಗಮನ ಸೆಳೆದಿದ್ದಾರೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ, ಕ್ರಮ ವಹಿಸಲಾಗುವುದು ಎಂದು ಸಚಿವ ಎಂ ಬಿ ಪಾಟೀಲ ಭರವಸೆ ನೀಡಿದರು.
ಇದನ್ನೂ ಓದಿ | Deepavali Gift: ನೌಕರರ ಖಾತೆಗೆ ಪಿಎಫ್ ಬಡ್ಡಿ ಜಮೆ ಆರಂಭ; ಬ್ಯಾಲೆನ್ಸ್ ಹೀಗೆ ಪರಿಶೀಲಿಸಿ
ಸನ್ ಮೊಬಿಲಿಟಿ ಅಧ್ಯಕ್ಷ ಸಂದೀಪ ಮೈನಿ, ಟೊಯೊಟಾ ಉಪ ವ್ಯವಸ್ಥಾಪಕ ನಿರ್ದೇಶಕ ಪರಶುರಾಮನ್, ಕಾಂಟಿನೆಂಟಲ್ ಅಧ್ಯಕ್ಷ ಪ್ರಶಾಂತ್ ದೊರೆಸ್ವಾಮಿ, ಎಕ್ಸೆಲ್ ಪಾರ್ಟ್ನರ್ಸ್ ಎಂಡಿ ಪ್ರಶಾಂತ ಪ್ರಕಾಶ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಸಭೆಗಳಲ್ಲಿ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಉಮಾಶಂಕರ್ ಇದ್ದರು.