ಉಡುಪಿ: ಬರಿಗಾಲ ಸಂತ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ (Gururaja Gantihole) ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಸಮುದ್ರ ತೀರವನ್ನು (Someshwara beach) ಸ್ವಚ್ಛಗೊಳಿಸುವ ಕಾಯಕವನ್ನು ಸದ್ದಿಲ್ಲದೆ ಮಾಡಿದ್ದಾರೆ. ಸೋಮವಾರ ವಿಶ್ವ ಪರಿಸರ ದಿನಾಚರಣೆ (world Environment Day) ಇರುವ ಹಿನ್ನೆಲೆಯಲ್ಲಿ ಇವರ ಈ ಜಾಗೃತಿ ಕಾರ್ಯ ಮಹತ್ವ ಪಡೆದುಕೊಂಡಿದೆ.
ಶಾಸಕ ಗುರುರಾಜ್ ಗಂಟಿಹೊಳೆ ಅವರ ಮುಂದಾಳತ್ವದಲ್ಲಿ “ಕ್ಲೀನ್ ಕಿನಾರೆ – ಸ್ವಚ್ಛ ಬೈಂದೂರು – ಸಮೃದ್ಧ ಬೈಂದೂರು” ಪರಿಕಲ್ಪನೆಯ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಸೋಮೇಶ್ವರ ಬೀಚ್‌ನಲ್ಲಿ ಶಾಸಕರು, ಅವರ ಅಭಿಮಾನಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಸ್ವಯಂಸೇವಕರು ಸೇರಿದಂತೆ ಹಲವರು ಈ ಸಮುದ್ರ ತೀರ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಟ್ರೀಟ್ಮೆಂಟ್ ತಗೊಳ್ಳೋದಾದ್ರೆ ತಗೊಳ್ಳಿ; ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನೇ ಡಾಕ್ಟರ್!
ಅಲ್ಲದೆ, ಸೋಮವಾರ (ಜೂನ್ 5) ವಿಶ್ವ ಪರಿಸರ ದಿನಾಚರಣೆ ಇದ್ದು, ನಾಗರಿಕರಲ್ಲಿ ಪರಿಸರ ಸ್ವಚ್ಛತೆಯ ಜಾಗೃತಿಯನ್ನು ಮೂಡಿಸಬೇಕಿದೆ. ಎಲ್ಲೆಂದರಲ್ಲಿ ಕಸ ಎಸೆಯುವದರಿಂದ ನಮಗೆ ಹಾಗೂ ಮುಂದಿನ ಪೀಳಿಗೆಗೆ ಸಾಕಷ್ಟು ಹಾನಿಯಾಗಲಿದೆ. ಇದು ಜಾಗತಿಕ ತಾಪಮಾನ ಏರಿಕೆ ಮೇಲೆಯೂ ಪರಿಣಾಮವನ್ನು ಬೀರಲಿದೆ. ಈ ನಿಟ್ಟಿನಲ್ಲಿ ಯಾರೂ ಸಹ ಸಾರ್ವಜನಿಕ ಪ್ರದೇಶದಲ್ಲಿ ಗಲೀಜು ಮಾಡಬಾರದು, ಹೀಗೆ ಕಸಗಳನ್ನು ಕಂಡರೆ ಸ್ವಯಂಪ್ರೇರಣೆಯಿಂದ ಸೂಕ್ತ ಜಾಗದಲ್ಲಿ ವಿಲೇವಾರಿ ಮಾಡೆಬೇಕು ಎಂಬ ಸಂದೇಶವನ್ನು ಈ ಮೂಲಕ ಸಾರಲಾಯಿತು. ಇವರ ಈ ಪ್ರಯತ್ನಕ್ಕೆ ಸ್ಥಳೀಯ ಸಂಘ – ಸಂಸ್ಥೆಗಳ ಸ್ವಯಂಸೇವಕರು ಕೈಜೋಡಿಸಿದ್ದಾರೆ.
ಗುರುರಾಜ ಶೆಟ್ಟಿ ಗಂಟಿಹೊಳೆ ಸಮಾಜ ಸೇವೆ
ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದದ ಬಳಿಯ ಗಂಟಿಹೊಳೆಯಲ್ಲಿ ಜನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾದರು. ಈ ರೀತಿ ಹತ್ತು ವರ್ಷ ಪ್ರಚಾರಕರಾಗಿ ವಿವಿಧ ರಾಜ್ಯಗಳಲ್ಲಿ ಸೇವೆ ಮಾಡಿದರು. ನಂತರ ಅವರು ಅಲ್ಲಿಂದ ತಮ್ಮೂರಿಗೆ ವಾಪಸಾದರು.
ಆನಂತರ ಉಡುಪಿ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ನಿರ್ವಹಿಸಿದರು. ಈ ನಡುವೆ ಉದ್ಯಮವನ್ನು ಆರಂಭಿಸಿ ನೂರು ಜನರಿಗೆ ಕೆಲಸ ಕೊಟ್ಟರು. ಉದ್ಯಮ ವಿಸ್ತರಣೆ ಸಂದರ್ಭದಲ್ಲಿ ಹಿನ್ನಡೆಯಾಗಿ ಅಲ್ಲಿಂದ ಹೊರಬಂದರು. ಜತೆಗೆ ಸಂಪೂರ್ಣ ಸಮಾಜ ಸೇವೆಯಲ್ಲೇ ತೊಡಗಿಸಿಕೊಂಡು, ಈಶಾನ್ಯ ರಾಜ್ಯಗಳ ಮಕ್ಕಳ ಶಿಕ್ಷಣದತ್ತ ಗಮನಹರಿಸಿದರು. ಹೀಗೆ ಬೈಂದೂರಿನಲ್ಲಿಯೂ ಅನೇಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Video Viral: ಅಯ್ಯೋ ಭಗವಂತ, ಆನೆ ಓಡೋಡಿ ಬಂದೇ ಬಿಡ್ತು, ಇನ್ನೇನು ಗತಿ?; ವಿಚಾರವಾದಿ ಭಗವಾನ್ ಜಸ್ಟ್ ಸೇವ್!
ಯುವ ಸಮೂಹಕ್ಕೆ ಸ್ವಚ್ಛತೆಯ ಜಾಗೃತಿ
ಸರಳತೆ ಮೂಲಕವೇ ಹೆಸರಾಗಿರುವ ಅವರಿಗೆ ಸಾಕಷ್ಟು ಅಭಿಮಾನಿ ಬಳಗವೂ ಈಗ ಬೈಂದೂರು ಕ್ಷೇತ್ರದಲ್ಲಿದೆ. ಈ ಹಿನ್ನೆಲೆಯಲ್ಲಿ ಅವರ ಪರವಾಗಿ ಅನೇಕ ಯುವಕರು ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಶಾಸಕರಾಗಿ ಆಯ್ಕೆಯಾದ ಮೇಲೂ ಗುರುರಾಜ ಗಂಟಿಹೊಳೆ ಅವರು ತಮ್ಮ ಸರಳತೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಈಗ ಸಮುದ್ರ ತೀರ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವ ಮೂಲಕ ಯುವ ಜನತೆಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ