ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯದ ಹಲವೆಡೆ ಸೋಮವಾರ (ಜೂನ್ 5) ವಿಶೇಷ ರೀತಿಯಲ್ಲಿ ಆಚರಣೆಗಳು ನಡೆದವು. ಪರಿಸರ ಜಾಗೃತಿ ನಡಿಗೆ, ಉಚಿತವಾಗಿ ಸಸಿ ವಿತರಣೆ, ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಸ್ತಾರ ನ್ಯೂಸ್ ಸಹಯೋಗದಲ್ಲೂ ಪರಿಸರ ದಿನವನ್ನು ವಿವಿಧ ಜಿಲ್ಲೆಗಳಲ್ಲಿ ಆಚರಿಸಲಾಯಿತು.
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪರಿಸರದ ಪಾಠ
ಗದಗದ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಪರಿಸರ ದಿನವನ್ನು ಸಂಭ್ರಮಿಸಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಎಪಿಸಿಒ ಎಸ್.ಕೆ.ಹವಾಲ್ದಾರ್, ಭವಿಷ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‌ಅನ್ನು ಬಳಸಬಾರದು. ತ್ಯಾಜ್ಯವನ್ನು ಆದಷ್ಟು ಕಡಿಮೆ ಮಾಡುವತ್ತ ಗಮನಹರಿಸಬೇಕು. ಪ್ರತಿ ದಿನವು ಪರಿಸರ ಬಗ್ಗೆ ಜಾಗೃತಿ ಇರಬೇಕು ಎಂದರು.
ಶಾಲಾ ಪ್ರಧಾನ ಗುರುಗಳಾದ ಡಿ.ಎನ್.ದೊಡ್ಡಮನಿ ಮಾತನಾಡಿ, ಮಾಧ್ಯಮಗಳು ಇಂದು ಕೇವಲ ಸುದ್ದಿ ಪ್ರಸಾರಕ್ಕಷ್ಟೇ ಸೀಮಿತವಾಗಿರುವದನ್ನು ನೋಡುತ್ತಿದ್ದೇವೆ. ಆದರೆ ವಿಸ್ತಾರ ನ್ಯೂಸ್ ವಿಭಿನ್ನ ಹಾಗೂ ವಿಶಿಷ್ಟ ಕೆಲಸಕ್ಕೆ ಸದಾ ಕ್ರಿಯಾಶೀಲವಾಗಿದೆ. ಪರಿಸರ ದಿನಾಚರಣೆ ಮೂಲಕ ಪ್ರಕೃತಿ ಮಡಿಲಿನ ಬಗ್ಗೆ ವಿಶೇಷ ಸಂದೇಶ ನೀಡುತ್ತಿರುವುದು ನಿಜಕ್ಕೂ ಮಾದರಿ ಕಾರ್ಯ ಹಾಗೂ ಪ್ರೇರಣಾದಾಯಕವಾಗಿದೆ ಎಂದರು.
ಅಲ್ಲದೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೆಚ್ಚಾಗಿ ಕಾಣಬಹುದಾಗಿದೆ. ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿಯೇ 400ಕ್ಕೂ ಹೆಚ್ಚು ಹುಲಿಗಳು ಹಾಗೂ 6 ಸಾವಿರಕ್ಕೂ ಹೆಚ್ಚು ಆನೆಗಳು ಇವೆ. ಆದರೂ ಕಳೆದ 30-40 ವರ್ಷಗಳಲ್ಲಿ ಕಾಡು ಸಹ ಕಡಿಮೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ ಮಾನವ ಮತ್ತು ಕಾಡಾನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಕಾಡಿನ ಸಂರಕ್ಷಣೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು. ಈ ವೇಳೆ ಶಾಲಾ ಶಿಕ್ಷಕರ ಬಳಗ ಹಾಗೂ ಮಕ್ಕಳು ಸೇರಿದಂತೆ ವಿಸ್ತಾರ ನ್ಯೂಸ್‌ನ ತಾಲೂಕು ವರದಿಗಾರ ಪರಮೇಶ ಲಮಾಣಿ ಪಾಲ್ಗೊಂಡಿದ್ದರು.
ಪರಿಸರ ಜಾಗೃತಿ ನಡಿಗೆ
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಂಗಳೂರು ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಆವರಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಆವರಣದಲ್ಲಿ ಸಸಿ ನೆಟ್ಟು ಬಳಿಕ ವಿವಿ ವತಿಯಿಂದ ಉಚಿತವಾಗಿ ಸಂಘ- ಸಂಸ್ಥೆಗಳಿಗೆ ಸಸಿಗಳ ವಿತರಣೆ ಮಾಡಲಾಯಿತು.
ಖ್ಯಾತ ಪರಿಸರ ಪ್ರೇಮಿಗಳಾದ ಡಿ.ಎಸ್. ಮ್ಯಾಕ್ಸ್‌ನ ದಯಾನಂದ್, ಮುನೇಶ್ ಕಸ್ತಿ, ಪ್ರಕೃತಿ ಪ್ರಸನ್ನ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಇದೇ ವೇಳೆ ಮಾತನಾಡಿದ ಡಿ.ಎಸ್. ಮ್ಯಾಕ್ಸ್‌ನ ನಿರ್ದೇಶಕ ದಯಾನಂದ್, ಪ್ರತಿಯೊಬ್ಬರಿಗೂ ಪರಿಸರದ ಕುರಿತು ಕಾಳಜಿ ಇರಬೇಕು. ಒಬ್ಬ ವ್ಯಕ್ತಿ ಎರಡು ಗಿಡಗಳನ್ನು ನೆಟ್ಟು ಪೋಷಿಸುವೆ ಎಂದು ಧೃಢ ಸಂಕಲ್ಪ ಮಾಡಬೇಕು. ಆಗ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಜನರು ಪ್ಲ್ಯಾಸ್ಟಿಕ್ ವಸ್ತುಗಳನ್ನು ಸಂಪೂರ್ಣ ತ್ಯಜಿಸಬೇಕೆಂದು ಮನವಿ ಮಾಡಿದರು.
ಮನೆ-ಮನೆಗೆ ಮಾವಿನ ಸಸಿ ವಿತರಣೆ
ಹುಬ್ಬಳ್ಳಿಯಲ್ಲಿ ಪರಿಸರ ದಿನಾಚರಣೆಯ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ಜತೆಗೆ ಮನೆ ಮನೆಗೆ ಮಾವಿನ ಸಸಿಯನ್ನು ವಿತರಣೆ ಮಾಡಲಾಗಿದೆ. ಗ್ರೀನ್ ಕರ್ನಾಟಕ ಸಂಸ್ಥೆ ಹಾಗೂ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ರಾಜನಗರದ ಪಿರಾಮಿಡ್ ಧ್ಯಾನ ಕೇಂದ್ರದ ಬಳಿ ಸಸಿ ನೆಟ್ಟು ಪರಿಸರ ದಿನವನ್ನು ಸಂಭ್ರಮಿಸಲಾಗಿದೆ. ಗ್ರೀನ್ ಕರ್ನಾಟಕ ಸಂಸ್ಥೆಯು ಮನೆ ಮನೆಗೆ ಮಾವಿನ ಸಸಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜತೆಗೆ 25,000 ಸಸಿಗಳನ್ನು ನೆಡುವ ಅಭಿಯಾನಕ್ಕೂ ಚಾಲನೆ ನೀಡಲಾಗಿದ್ದು, ಇದು ಒಂದು ತಿಂಗಳ ಕಾಲ ನಿರಂತರವಾಗಿ ಅಭಿಯಾನ ನಡೆಯಲಿದೆ.
ಸಸಿ ನೆಟ್ಟು ಸಂಭ್ರಮ
ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಕವಲೂರು ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕೊಪ್ಪಳದ ಭಾನಾಪುರ ಬಳಿ ಇರುವ ಕವಲೂರು ಟ್ರಸ್ಟ್ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು. ಸ್ಥಳೀಯ ಯುವಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪರಿಸರ ರಕ್ಷಣೆ ಮಾಡುವಂತೆ ಮನವಿ ಮಾಡಲಾಯಿತು.
ಸಸಿ ನೆಟ್ಟ ಸಚಿವ ಆರ್.ಬಿ.ತಿಮ್ಮಾಪೂರ
ಬಾಗಲಕೋಟೆಯ ಮುಧೋಳದ ರನ್ನ ಕ್ರೀಡಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಸಿ ನೆಟ್ಟು, ಪರಿಸರವನ್ನು ಕಾಪಾಡುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಸಚಿವ ಆರ್.ಬಿ.ತಿಮ್ಮಾಪೂರ ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಿದ್ದು, ಎಲ್ಲರೂ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
ಹಾವೇರಿಯ ಹಾನಗಲ್ ಪಟ್ಟಣದಲ್ಲಿ ವಿಸ್ತಾರ ನ್ಯೂಸ್, ಅರಣ್ಯ ಇಲಾಖೆ, ನ್ಯಾಯವಾದಿಗಳ ಸಂಘ ಹಾಗೂ ಕೆಎಲ್ಇ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಕೆಎಲ್‌ಇ ಕಾಲೇಜು ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿತಾ ಹಾಗೂ ಹೆಚ್ವುವರಿ ಸಿವಿಲ್ ನ್ಯಾಯಾಧೀಶರಾದ ಬಿ.ವೆಂಕಟಪ್ಪ ಸಸಿ ನೆಟ್ಟರು. ಎಸಿಎಫ್ ಶಿವಾನಂದ ತೋಡಕರ ,ಆರ್‌ಎಫ್‌ಒ ಶಿವರಾಜ್ ಮಠದ, ಸಿಪಿಐ ಎಸ್‌ಆರ್ ಶ್ರೀಧರ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಸವಣೂರ, ಉಪಾಧ್ಯಕ್ಷ ಬೋಸ್ಲೆ ,ಕೆಎಲ್‌ಇ ಪ್ರಾಂಶುಪಾಲ ಶಿವಕುಮಾರ, ರವಿ ಬೆಲ್ಲದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ 12 ಶಾಖೆಗಳ ವ್ಯಾಪ್ತಿಯಲ್ಲಿ ಹೊಂಗೆ ಮತ್ತು ಬೇವಿನ ಸುಮಾರು 100 ಸಸಿಗಳನ್ನು ನೆಡಲಾಯಿತು. ಈ ಕಾರ್ಯಕ್ರಮಕ್ಕೆ ಶಾಸಕ ರವಿ ಸುಬ್ರಮಣ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಆರ್. ವೆಂಕಟೇಶ್, ಉಪಾಧ್ಯಕ್ಷರಾದ ರಾಮೇಗೌಡ, ಬಿಬಿಎಂಪಿ ಮಾಜಿ ಸದಸ್ಯರಾದ ಕುಮಾರ್ ಹಾಗೂ ಸ್ಥಳೀಯ ಮುಖಂಡರುಗಳು ಹಾಜರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ