Site icon Vistara News

Elephant attack | ಸಕಲೇಶಪುರ ಬಳಿ ನೋವಿನಿಂದ ನರಳುತ್ತಾ ರಸ್ತೆಯಲ್ಲೇ ಸಾಗಿದ ಗಾಯಾಳು ಗಜರಾಜ

ಹಾಸನದಲ್ಲಿ ಆನೆ ಓಡಾಟ

ಹಾಸನ: ಹಾಸನ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಆನೆಗಳ ಸುದ್ದಿಯೇ (Elephant attack) ಹರಿದಾಡುತ್ತಿದೆ. ಒಂದು ಕಡೆ ಶುಕ್ರವಾರ ರಾತ್ರಿ ಬೇಲೂರಿನ ಅರೇಹಳ್ಳಿಯಲ್ಲಿ ಆನೆಯೊಂದು ರಸ್ತೆಯಲ್ಲಿ ನಡೆದು ಹೋಗಿದ್ದರೆ, ಇನ್ನೊಂದು ಕಡೆ ಸಕಲೇಶಪುರದ ಉದೇವಾರ ಗ್ರಾಮದಲ್ಲಿ ಆನೆಯೊಂದು ನೋವಿನಿಂದ ನರಳುತ್ತಾ ಸಾಗಿದೆ. ಈ ಎರಡೂ ಘಟನೆಗಳು ಆನೆಗಳು ಎದುರಿಸುತ್ತಿರುವ ಸಂಕಟವನ್ನು ಮತ್ತು ಜನರಿಗೆ ಆಗುತ್ತಿರುವ ತೊಂದರೆಗಳ ಚಿತ್ರಗಳೆರಡನ್ನೂ ತೆರೆದಿಡುತ್ತಿದೆ.

ನೋವಿನಿಂದ ಸಾಗಿದ ಗಜರಾಜ
ಹಾಸನ ಜಿಲ್ಲೆ ಸಕಲೇಶಪುರ ‌ತಾಲೂಕಿನ ಉದೇವಾರ ಗ್ರಾಮದಲ್ಲಿ ಬೆಳಗ್ಗೆ ಆನೆಯೊಂದು ರಸ್ತೆಯಲ್ಲೇ ನಡೆದುಕೊಂಡು ಹೋಗುತ್ತಿತ್ತು. ಆದರೆ, ಅದು ಯಾರಿಗೂ ಯಾವ ತೊಂದರೆಯನ್ನೂ ಮಾಡಲಿಲ್ಲ. ಯಾಕೆಂದರೆ, ಅದು ತೀವ್ರ ಗಾಯಗೊಂಡಿತ್ತು. ಸೊಂಡಿಲು, ಮುಖದ ಭಾಗಕ್ಕೆ ಗಾಯವಾಗಿ ರಕ್ತ ಸುರಿಯುತ್ತಿರುವ ಸ್ಥಿತಿಯಲ್ಲಿ ಈ ಕಾಡಾನೆ ನಾಡಿಗೆ ಬಂದಿದೆ ಎನ್ನಲಾಗಿದೆ. ಕೆಲವೊಮ್ಮೆ ಕಾಲು ಎತ್ತಿಡಲಿಕ್ಕೂ ಕಷ್ಟಪಡುವಂತೆ ಕಾಣುತ್ತಿದ್ದ ಆನೆಯ ನಡಿಗೆ ಮರುಕ ಹುಟ್ಟಿಸುವಂತಿತ್ತು.

ಸಾಮಾನ್ಯವಾಗಿ ಆನೆ ಕಂಡರೆ ಮಾರು ದೂರ ಓಡುವ ಜನರ ಈ ಆನೆಯ ಮುಂದೆಯೇ ಪರೇಡ್‌ ಮಾಡಿದರು ಮತ್ತು ವಿಡಿಯೊಗಳನ್ನು ತೆಗೆದರು. ಜತೆಗೆ ಕಾಡಾನೆ ಸ್ಥಿತಿಗೆ ಮರುಗಿದರು. ಘಟನೆ ತಿಳಿಯುತ್ತಲೇ ಸ್ಥಳಕ್ಕೆ‌ ಅರಣ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿದ್ದಾರೆ. ಇನ್ನು ಅದನ್ನು ಹಿಡಿದು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಆನೆ ಯಾವುದೇ ಕಾಡಾನೆ ಜತೆ ಜಗಳವಾಡಿ ಗಾಯಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಠಾಣೆಯ ಮುಂದೆಯೇ ನಿಂತ ಒಂಟಿ ಸಲಗ
ಈ ನಡುವೆ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಆನೆಯೊಂದು ರಾತ್ರಿ ರಸ್ತೆಯಲ್ಲಿ ಸಾಗಿದ್ದನ್ನು ಕೆಲವರು ವಿಡಿಯೊ ಮಾಡಿಕೊಂಡಿದ್ದಾರೆ. ಪೊಲೀಸ್ ಠಾಣೆಯ ಎದುರು ಬಂದು ನಿಂತಿದ್ದ ಕಾಡಾನೆ ಬಳಿಕ ರಸ್ತೆಯಲ್ಲೇ ಮುಂದೆ ಸಾಗಿದೆ.

ಅರೇಹಳ್ಳಿಯಲ್ಲಿ ರಾತ್ರಿ ಆನೆ ಸವಾರಿ

ಇತ್ತೀಚಿನ ದಿನಗಳಲ್ಲಿ ಜನನಿಬಿಡ ಪ್ರದೇಶ, ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳು ಭಯ ಹುಟ್ಟಿಸುತ್ತಿವೆ. ಆದರೆ, ಈ ಆನೆಯ ಯಾವುದೇ ಹಾನಿ ಮಾಡದೆ ತನ್ನ ಪಾಡಿಗೆ ಸಾಗಿದೆ.

ಇದನ್ನೂ ಓದಿ | Elephant Attack | ಸಕಲೇಶಪುರದಲ್ಲಿ ಒಂಟಿ ಸಲಗ ದಾಳಿ; ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

Exit mobile version