ಚಾಮರಾಜನಗರ: ರಾಜ್ಯದಲ್ಲೀಗ ಪಠ್ಯ ಪುಸ್ತಕ (Text Book) ಪರಿಷ್ಕರಣೆಯ ಗಲಾಟೆ ಶುರುವಾಗಿದೆ. ಈ ಹಿಂದಿನ ಬಿಜೆಪಿ ಮಾಡಿದ್ದ ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬರುತ್ತಿದ್ದಂತೆ ಪಠ್ಯ ಪರಿಷ್ಕರಣ ಸಮಿತಿ ರಚನೆಗೂ ಮುಂದಾಗಿದೆ. ಇದಕ್ಕೆ ಹಲವಾರು ಬುದ್ಧಿಜೀವಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಈಗ ಸಾಹಿತಿ ಕುಂ. ವೀರಭದ್ರಪ್ಪ (Kum Veerabhadrappa) ಸಹ ಬೆಂಬಲ ನೀಡಿದ್ದು, ಹೊಸ ಪಠ್ಯಪುಸ್ತಕ ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಂ. ವೀರಭದ್ರಪ್ಪ, ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ಭಾರಿ ಲೋಪ ಎಸಗಿದೆ. ಕೆಲವು ಹುಸಿ ದೇಶಭಕ್ತರನ್ನು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡಿದೆ. ರೋಹಿತ್ ಚಕ್ರತೀರ್ಥ ಎಂಬ ಅಪಕ್ವ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿತ್ತು. ಅವರು ಮಾಡಿದ ತಪ್ಪನ್ನು ಈಗ ಸರಿಪಡಿಸಬೇಕು. ಹೊಸ ಪಠ್ಯಪುಸ್ತಕ ಜಾರಿಗೆ ತರಬೇಕು ಎಂದು ಹೇಳಿದರು.
ಇದನ್ನೂ ಓದಿ: ವಿರೋಧಿಗಳ ಕಡತಕ್ಕೆ ಸಹಿ ಹಾಕಲ್ಲವೆಂದಿದ್ದ ಸಚಿವ ಚಲುವರಾಯಸ್ವಾಮಿಗೆ ಸಂಕಷ್ಟ; ರಾಜ್ಯಪಾಲರಿಗೆ ದೂರು
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಪರಿಷ್ಕರಣೆಗೊಂಡು ಮಕ್ಕಳು ಅಭ್ಯಾಸ ಮಾಡುತ್ತಿದ್ದ ಪಠ್ಯ ಅತ್ಯುತ್ತಮವಾಗಿತ್ತು. ಆ ಪುಸ್ತಕಗಳೇ ಮತ್ತೆ ಬರಬೇಕು. ಬಿಜೆಪಿಯವರು ಹೇಳುವುದು ಭಾರತೀಯತೆ ಅಲ್ಲ, ಅವರು ಹೇಳುವುದು ಹಿಂದುತ್ವವಾಗಿದೆ ಎಂದು ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ದೇಶದ ಎಲ್ಲರ ಹಿತಾಸಕ್ತಿ ಕಾಪಾಡುವುದು ಭಾರತೀಯತೆಯಾಗಿದೆ. ಅವರು ಹೇಳುವ ಭಾರತೀಯತೆ ಒಪ್ಪಲು ಸಾಧ್ಯವಿಲ್ಲ. ಬಿಜೆಪಿಯವರು ಹೇಳುವುದು ಆರ್‌ಎಸ್ಎಸ್ ಪ್ರಣೀತ ಭಾರತೀಯತೆಯಾಗಿದೆ. ಅಂಬೇಡ್ಕರ್, ಗಾಂಧಿ ಆಶಯದ ಭಾರತೀಯತೆ ಅಲ್ಲ. ಹಳೇ ಪಠ್ಯಕ್ರಮವನ್ನು ಸರ್ಕಾರ ಜಾರಿಗೆ ತರಬೇಕು ಎಂದು ಸಾಹಿತಿ ಕುಂ. ವೀರಭದ್ರಪ್ಪ ಆಗ್ರಹಿಸಿದ್ದಾರೆ.
ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷ ಆಗಲಾರೆ: ಬರಗೂರು ರಾಮಚಂದ್ರಪ್ಪ
ನಾನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಲು ಒಪ್ಪಿಗೆ ನೀಡಿಲ್ಲ. ನನಗೆ ತಿಳಿದಂತೆ ಹೊಸ ಸಮಿತಿ ರಚನೆ ಆಗಿಲ್ಲ ಎಂದು ಬುಧವಾರ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದರು.
ಹೊಸ ಪಠ್ಯಕ್ರಮ ರಚನೆಗೆ ಸಮಿತಿ?
ಹೊಸ ಪಠ್ಯಕ್ರಮ ರಚಿಸಲು ಸಮಿತಿ ರಚಿಸಲು ಸೂಚನೆ ನೀಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇರಿಸಿದ್ದ ಕೆಲ ಅಧ್ಯಾಯಗಳಿಗೆ ಕೊಕ್ ನೀಡಲು ನಿರ್ಧರಿಸಿದೆ. ಬೋಧನೆ ಮತ್ತು ಮೌಲ್ಯ ಮಾಪನದಿಂದ ಪಠ್ಯವನ್ನು ಕೈಬಿಡಲು ನಿರ್ಧಾರ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರಿಂದ ಶಿಕ್ಷಣ ಇಲಾಖೆಗೆ ಸೂಚನೆ ಹೋಗಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ ನಿರಂಜನಾರಾಧ್ಯ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್ ಹಿಡಿದು ಓಡೋಡಿ ಬಂದ!
ಈ ಶೈಕ್ಷಣಿಕ ವರ್ಷದಲ್ಲಿ ಕೆಲ ಅಧ್ಯಾಯಗಳನ್ನು ಅಧ್ಯಯನ ಮತ್ತು ಮೌಲ್ಯ ಮಾಪನದಿಂದ ಕೈಬಿಡುವುದು. ಮುಂದಿನ ವರ್ಷದಿಂದ ಪಠ್ಯಕ್ರಮ ರಚಿಸಲು ಸಮಿತಿ ರಚಿಸಲು ಮಂಗಳವಾರ ನಡೆದಿದ್ದ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ನೂತನ ಪಠ್ಯ ಪರಿಷ್ಕರಣ ಸಮಿತಿಯು ಪಠ್ಯ ಹೇಗಿರಬೇಕು? ಯಾವ ಅಧ್ಯಾಯಗಳನ್ನು ತೆಗೆಯಬೇಕು? ಯಾವುದನ್ನು ಸೇರಿಸಬೇಕು? ಎಂಬಿತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಿದೆ ಎನ್ನಲಾಗಿದೆ.