Site icon Vistara News

Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್‌ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ

Writer Vaidehi has received the Nrupatunga Award, Belur Raghunandan and five others have received the Mayura Varma Award

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ʼನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಲೇಖಕಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) ಅವರಿಗೆ ಹಾಗೂ 2022ನೇ ಸಾಲಿನ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು (Literary Award) ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ಹಾಸನದ ಬೇಲೂರು ರಘುನಂದನ್‌ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.

ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಮಾತನಾಡಿ, ನನ್ನ ಜತೆ ಜತೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿರುವ ಹಿರಿಯ ಸಾಹಿತಿ ವೈದೇಹಿಗೆ ಅಭಿನಂದನೆಗಳು. ನಾವು ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡವನ್ನು ಮರೆತು ಹೋಗಿದ್ದೇವೆ. ಮಾತೃಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯ ಸೃಜನಶೀಲವಾಗಿರುವುದು ಸಾಧ್ಯ. ಅನ್ಯ ಭಾಷೆಯಲ್ಲಿ ಏನೇ ವಿಷಯವನ್ನು ಮಂಡಿಸಿದರೂ ಅದು ಕೇವಲ ಕಂಠಪಾಠ ಮಾತ್ರ ಆಗುತ್ತದೆ. ನಮ್ಮ ಸೃಜನಶೀಲತೆ ಉಳಿಯಲು ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೆಕು. ಅದಕ್ಕೆ ನಮ್ಮ ಮಕ್ಕಳಿಗೆ ಕನ್ನಡ ಭಾಷೆಯೇ ಪ್ರಮಾಣವಾಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂ.ಮ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರು ಮಾತನಾಡಿ, ಇವತ್ತಿನ ದಿನಮಾನದಲ್ಲಿ ಪುಸ್ತಕಗಳ ಓದುವ ಪದ್ಧತಿಗಳು ಕಾಣೆಯಾಗುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಇರುವ ಕನ್ನಡ ಕ್ರಿಯಾ ಸಮಿತಿ ಎಲ್ಲರ ಮೆಚ್ಚುಗೆಯ ಸಮಿತಿಯಾಗಿದೆ. ಕನ್ನಡವನ್ನು ಕಲಿಕೆಯಲ್ಲಿ, ಆಟದಲ್ಲಿ, ದಿನ ನಿತ್ಯದ ವ್ಯವಹಾರದಲ್ಲಿ ಮಕ್ಕಳು ನಿರಂತರವಾಗಿ ಬಳಸುವಂತಾಗಬೇಕು. ಮಕ್ಕಳಿಗೆ ಕನ್ನಡ ಕಷ್ಟವಾಗುತ್ತಿರುವುದು ಕಂಡು ಬರುತ್ತಿದೆ, ಸರಳ ಕನ್ನಡ ಬಳಸುವ ಕಲಿಸುವ ಪುಸ್ತಕಗಳು ಸಿದ್ಧವಾಗಬೇಕಿದೆ. ಬಾಲ್ಯದಲ್ಲಿಯೇ ಸಮರ್ಥವಾಗಿ ಭಾಷೆ ಕಲಿಸಿದರೆ ಅದರ ನಂಟು ಕೊನೆಯವರೆಗೂ ಇರುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ಎಚ್. ಎಸ್. ವೆಂಕಟೇಶ ಮೂರ್ತಿ ಮಾತನಾಡಿ, ಮಹಿಳಾ ಸಾಹಿತ್ಯದ ಶ್ರೇಷ್ಠ ಪ್ರತಿನಿಧಿ ವೈದೇಹಿ ಅವರು ಎಂದು ಗುರುತಿಸಿ ಅವರ ಕೊಡುಗೆ ಸಾರಸ್ವತ ಲೋಕಕ್ಕೆ ಅಪಾರ ಎಂದು ಬಣ್ಣಿಸಿದರು. ಹೊಸಬರ ಚಿಂತನೆಯಲ್ಲಿ ಹೊಸತನ ಇರುತ್ತದೆ. ಅದೇ ರೀತಿ ಯುವ ಬರಹಗಾರರು ಸಾಹಿತ್ಯ ಲೋಕದ ಹೊಸತನ ರಚಿಸುವ ನಕ್ಷತ್ರಗಳಾಗಿ ಬೆಳಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಪ್ರಶಸ್ತಿ ಎಂದು ಗುರುತಿಸಿಕೊಂಡಿರುವ ʻನೃಪತುಂಗʼ ಪ್ರಶಸ್ತಿಯು ಜ್ಞಾನಪೀಠಕ್ಕೆ ಸರಿಸಮಾನವಾದ ಪ್ರಶಸ್ತಿಯಾಗಿದ್ದು, ʻಕನ್ನಡದ ಜ್ಞಾನಪೀಠʼ ಎಂದು ಗುರುತಿಸಿಕೊಂಡ ಈ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದತ್ತಿ ಇಡುವ ಮೂಲಕ ನೀಡುತ್ತಿದೆ. 7 ಲಕ್ಷದ 1 ರೂಪಾಯಿ ಮೌಲ್ಯದ ಇಂತಹ ಮಹತ್ವದ ಪ್ರಶಸ್ತಿಗೆ ವೈದೇಹಿಯವರ ಪಾತ್ರರಾಗಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ನೃಪತುಂಗ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬರಹಗಾರ್ತಿ ವೈದೇಹಿ, ನಮ್ಮ ಕಾಲದಲ್ಲಿ ಮಾತ್ರ ಭಾಷೆಗೆ ಮಹತ್ವವಿತ್ತು. ಅದರಲ್ಲಿ ಮಿಂದು ಎದ್ದವರಿಗೆ ಆಡಿಪಾಡಿ ಬೆಳೆದವರಿಗಷ್ಟೇ ಕನ್ನಡದ ಚೆಲುವು ಅರಿಯಲು ಸಾಧ್ಯ. ಕನ್ನಡ ನಮ್ಮಲ್ಲಿ ನಿಗಿ ನಿಗಿಯಾಗಿ ಸೇರಿಕೊಂಡಿದ್ದು, ಅದು ಮಾತಿಗೆ, ಬರವಣಿಗೆಗೆ, ಜಗಳಕ್ಕೆ ಜೀವನಕ್ಕೆ ಹೀಗೆ ಎಲ್ಲದಕ್ಕೂ ನಮ್ಮ ಮಧ್ಯದಲ್ಲಿ ಅದು ಹಾಸು ಹೊಕ್ಕಾಗಿ ಹೋಗಿದೆ. ನಾನು ನಾನಾಗಿಯೇ ಬರಹಗಾರ್ತಿ ಆಗಲಿಲ್ಲ, ಕನ್ನಡವನ್ನೇ ನಂಬಿದ ನನಗೆ ಯಕ್ಷಗಾನದ ಕನ್ನಡದ ಜ್ಞಾನ ಶಬ್ದ ಭಂಡಾರ, ಕುಂದಾಪುರದ ಕುಂದ ಕನ್ನಡ ನನ್ನೊಳಗಿದ್ದ ಬರಹಗಾರ್ತಿಯನ್ನು ಜಾಗೃತಗೊಳಿಸಿತು. ಈ ಕನ್ನಡ ನೆಲವೇ ನನಗೆ ಬರಹಗಾರ್ತಿಯನ್ನಾಗಿ ಮಾಡಿತು. ಆದರೆ ಈಗ ಭಾಷೆ ಎನ್ನುವುದು ಸೌಹಾರ್ದದ ಸೇತುವೆಯಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯವುದು ಹೊಣೆ ನಮ್ಮೆಲರದ್ದು ಎಂಬ ಜವಾಬ್ದಾರಿಯುತ ಮಾತನ್ನು ಹಂಚಿಕೊಂಡರು.

ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ, ನಾಟಕಕಾರ ಬೇಲೂರು ರಘುನಂದನ್ ಮಾತನಾಡಿ, ಧಾರಣಾ ಶಕ್ತಿ ಇರುವ ಬೀಜ ಬಿತ್ತಿದಾಗ ಮಾತ್ರ ಅದು ಸಸಿಯಾಗುವಂತೆ ಹಿರಿಯ ಸಾಹಿತಿಗಳು ಬಿತ್ತಿದ ಸಾಹಿತ್ಯ ಬೀಜವೇ ಇಂದು ಯುವ ಸಾಹಿತಿಗಳು ಹುಟ್ಟುವುದಕ್ಕೆ ಕಾರಣವಾಗಿದೆ. ಕನ್ನಡದ ಪ್ರಜ್ಞೆ ಮೂಡಿಸುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ

ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಹಿರಿಯ ಕವಯತ್ರಿ ಸವಿತಾ ನಾಗಭೂಷಣ, ಕ.ರಾ.ರ.ಸಾ.ಸಂ. ಕೇಂದ್ರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ, ಕಸಾಪ ಗೌರವ ಕಾರ್ಯದರ್ಶಿ ನೆ.ಭ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು, ಪರಿಷತ್‌ ಪ್ರಕಟಣಾ ಸಮಿತಿ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ, ಪರಿಷತ್‌ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಮತ್ತಿತರರು ಇದ್ದರು.

Exit mobile version