ಯಾದಗಿರಿ: ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ (Exam Cheating) ಸಂಬಂಧಿಸಿದಂತೆ ಅಫಜಲಪುರದಲ್ಲಿಯೇ ಅಭ್ಯರ್ಥಿಗಳಿಗೆ ಬ್ಲ್ಯೂಟೂತ್ ಡಿವೈಸ್ ಪೂರೈಕೆ ಆಯಿತಾ ಎಂಬ ಶಂಕೆ ವ್ಯಕ್ತವಾಗಿದೆ. ಪಿಎಸ್ಐ ಕಿಂಗ್ ಪಿನ್ ಆರ್.ಡಿ ಪಾಟೀಲ್ನಿಂದಲೇ ಬ್ಲ್ಯೂಟೂತ್ ಪೂರೈಕೆಯಾಗಿರುವ ಬಗ್ಗೆ ಆರೋಪಿಗಳು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಆರ್.ಡಿ ಪಾಟೀಲ ಬೆಂಬಲಿಗನಿಂದಲೇ ಅಫಜಲಪುರನಲ್ಲಿ ಬ್ಲ್ಯೂಟೂತ್ ಪೂರೈಕೆ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪರೀಕ್ಷೆ ನಡೆಯುವ ಎರಡು ದಿನ ಮುಂಚಿತವಾಗಿ ಬ್ಲ್ಯೂಟೂತ್ ಪೂರೈಕೆ ಆಗಿದೆ. ಮಾತ್ರವಲ್ಲ ಬ್ಲ್ಯೂಟೂತ್ ಬಳಕೆ ಮಾಡುವುದು ಹೇಗೆ ಎಂದು ಅಭ್ಯರ್ಥಿಗಳಿಗೆ ಮಾಹಿತಿ ನೀಡಿದ್ದಾನೆ.
ಅಫಜಲಪುರನ ವಿವಿಧ ಸ್ಥಳಗಳಲ್ಲಿ ಬ್ಲ್ಯೂಟೂತ್ ಡಿವೈಸ್ ಪೂರೈಕೆ ಆಗಿದೆ. ಯಾದಗಿರಿ ನಗರದ ಐದು ಪರೀಕ್ಷೆ ಕೇಂದ್ರಗಳಲ್ಲಿ ನಡೆದ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಈಗಾಗಲೇ 16 ಜನ ಆರೋಪಿಗಳ ಬಂಧನವಾಗಿದ್ದು, ನಿನ್ನೆಯಷ್ಟೇ ನ್ಯಾಯಾಲಯ 9 ಜನ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ನಡೆಸುವಾಗ ಬ್ಲ್ಯೂಟೂತ್ ಪೂರೈಕೆ ಮಾಡಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಆರೋಪಿಗಳ ಹೇಳಿಕೆ ಆಧರಿಸಿ ಕಲಬುರಗಿಗೆ ಕರೆದೊಯ್ದು ಬ್ಲ್ಯೂಟೂತ್ ಪಡೆದ ಸ್ಥಳಗಳನ್ನು ಮಹಜರ್ ಮಾಡಲಿದ್ದಾರೆ. ಎಫ್ಡಿಎ ಪರೀಕ್ಷೆ ಅಕ್ರಮದ ಬಗ್ಗೆ ಈಗಾಗಲೇ ಐದು ಮಂದಿ ತನಿಖಾಧಿಕಾರಿಗಳ ತಂಡದಿಂದ ತನಿಖೆ ಚುರುಕುಗೊಂಡಿದೆ.
ಆರ್.ಡಿ ಪಾಟೀಲ್ ಬಳಿ ಬ್ಲ್ಯೂಟೂತ್ ಖರೀದಿ
ಪಿಎಸ್ಐ ಅಕ್ರಮದ ಕಿಂಗ್ ಪಿನ್ ಆರ್. ಡಿ ಪಾಟೀಲ್ ಬಳಿ ಅಭ್ಯರ್ಥಿಗಳು ಬ್ಲ್ಯೂಟೂತ್ ಡಿವೈಸ್ ಖರೀದಿಸಿ ಪರೀಕ್ಷೆಯಲ್ಲಿ ಅಕ್ರಮವೆಸಗಿ ಪೊಲೀಸರಿಗೆ ಲಾಕ್ ಆಗಿದ್ದಾರೆ. ಸದ್ಯ ಅಫಜಲಪುರ ಕಲಬುರಗಿ ಸೇರಿ ಹಲವು ಭಾಗದಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು ಪಿಎಸ್ಐ ಸ್ಕ್ಯಾಮ್ ಕಿಂಗ್ ಪಿನ್ ವಿರುದ್ಧವೂ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Exam Cheating : ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಎಸ್ಕೇಪ್ ಆದ ಪಿಎಸ್ಐ ಕಿಂಗ್ ಪಿನ್ ಆರ್.ಡಿ ಪಾಟೀಲ್
ಮನೆಯಲ್ಲೇ ಲಕ್ಷ ಲಕ್ಷ ಡೀಲ್
ಪಿಎಸ್ಐ ಸ್ಕ್ಯಾಮ್ ಕಿಂಗ್ ಪಿನ್ ಆರ್.ಡಿ ಪಾಟೀಲ್ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಕಲಬುರಗಿ ನಗರ ಹಾಗೂ ಅಫಜಲಪುರ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಕ್ಕೆ ಬಳಸಲು ತಂದಿದ್ದ ಬ್ಲ್ಯೂಟೂತ್ ಡಿವೈಸ್ಗಳನ್ನು ಆರ್.ಡಿ ಪಾಟೀಲ್ ಬಳಿ ಖರೀದಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಅಭ್ಯರ್ಥಿ ಆಕಾಶ್ ಮಂಠಾಳೆ ಎಂಬಾತ 25 ಲಕ್ಷಕ್ಕೆ ಡೀಲ್ ಫಿಕ್ಸ್ ಮಾಡಿಕೊಂಡು, ಮುಂಗಡ 8 ಲಕ್ಷ ರೂ. ಆರ್. ಡಿ ಪಾಟೀಲ್ಗೆ ನೀಡದ್ದಾನೆ ಎನ್ನಲಾಗಿದೆ. ಸಂತೋಷ್ ಯಾಳಗಿ ಎಂಬಾತ 20 ಲಕ್ಷಕ್ಕೆ ಡೀಲ್ ಮಾಡಿ ಮುಂಗಡ 5 ಲಕ್ಷ ನೀಡಿದ್ದಾನೆ ಎನ್ನಲಾಗಿದೆ. ಈ ಎಲ್ಲಾ ಹಣಕಾಸಿನ ವ್ಯವಹಾರವು ಪಿಎಸ್ಐ ಕಿಂಗ್ ಪಿನ್ ಆರ್.ಡಿ. ಪಾಟೀಲ್ನ ಕಲಬುರಗಿ ನಿವಾಸದಲ್ಲಿ ನಡೆದಿತ್ತು ಎನ್ನಲಾಗಿದೆ. ಕಲಬುರಗಿ ಹಾಗೂ ಅಫಜಲಪುರದಲ್ಲಿ ಪ್ರಕರಣಗಳು ದಾಖಲಾಗಿದ್ದು, ಪಿಎಸ್ಐ ಕಿಂಗ್ ಪಿನ್ ಆರ್.ಡಿ ಪಾಟೀಲ್ ಸದ್ಯ ನಾಪತ್ತೆಯಾಗಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ. 28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ (Examination on October 28, 29) ಖಾಲಿ ಇದ್ದ 720 ಎಫ್ಡಿಎ (FDA) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ನಡೆಸಿತ್ತು. ಆದರೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿತ್ತು.
ಕಲಬುರಗಿ ನಗರ ಹಾಗೂ ಅಫಜಲಪುರ ತಾಲೂಕಿನಲ್ಲಿ ಹಲವು ಅಭ್ಯರ್ಥಿಗಳು, ಕನ್ನಡ ಮತ್ತು ಇಂಗ್ಲೀಷ್ ಕಮ್ಯೂನಿಕೇಷನ್ಸ್ ಪ್ರಶ್ನೆ ಪತ್ರಿಕೆ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯಲು ಮುಂದಾಗಿದ್ದರು. ಆದರೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಲಬುರಗಿ ಹಾಗೂ ಅಫಜಲಪುರ ಸೇರಿ ಒಟ್ಟು 16ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದರು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ