ಯಾದಗಿರಿ: 30 ವರ್ಷಗಳ ಹಿಂದಿನ ಗುರು ಶಿಷ್ಯರ ಅಪರೂಪದ ಸಮಾಗಮಕ್ಕೆ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ರಸ್ತೆಯ ಸಪ್ತಪದಿ ಕನ್ವೆನ್ಷನ್ ಹಾಲ್ ಸಾಕ್ಷಿಯಾಯಿತು. ಯಾದಗಿರಿಯ ಚಂದ್ರಶೇಖರ ವಿದ್ಯಾಸಂಸ್ಥೆಯ ನ್ಯೂ ಕನ್ನಡ ಪ್ರೌಢಶಾಲೆಯ 1991-92ನೇ ಬ್ಯಾಚ್‌ನ ನೂರಾರು ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ತಮ್ಮನ್ನು ತಿದ್ದಿ ತೀಡಿ ಬೆಳೆಸಿದ ಶಿಕ್ಷಕ ವರ್ಗಕ್ಕೆ ಸನ್ಮಾನಿಸುವ ಮೂಲಕ ಗುರುವಂದನೆ (Guru Vandana) ಸಲ್ಲಿಸಿದರು.
ಬರೋಬ್ಬರಿ ಮೂರು ದಶಕಗಳ ಹಿಂದೆ, ಹೈಸ್ಕೂಲ್‌ನಲ್ಲಿ ಅಕ್ಷರ ಕಲಿಸಿದ ಗುರುಗಳು ಹಾಗೂ ಕಲಿತ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸಮ್ಮಿಲನ ಸಂಭ್ರಮಕ್ಕೆ, ಹಳೆಯ ನೆನಪುಗಳ ಮರುಕಳಿಸುವಿಕೆಗೆ ಕಾರಣವಾಗಿತ್ತು. ಕಾರ್ಯಕ್ರಮದಲ್ಲಿ ಅಂದಿನ ಶಿಕ್ಷಕರ ವೃಂದದ ಬಹುತೇಕ ಗುರುಗಳು ಹಾಗೂ ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿ ರಾಜ್ಯ ಹಾಗೂ ದೇಶದ ವಿವಿಧೆಡೆ ವಾಸಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಅಲ್ಲಿ ಸೇರಿದ್ದರು.
ಭಾನುವಾರ ಬೆಳಗ್ಗೆ ನ್ಯೂ ಕನ್ನಡ ಪ್ರೌಢಶಾಲೆಯಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು ಗುರುಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಹಿಂದಿನಂತೆ, ಶಾಲಾ ಆವರಣದಲ್ಲಿ ರಾಷ್ಟ್ರಗೀತೆಯ ನಂತರ ಆಯಾ ಕೊಠಡಿಗಳಿಗೆ ತೆರಳಿ ಆಗಿನಂತೆ ಅವರವರ ಬೆಂಚುಗಳ ಮೇಲೆ ಕುಳಿತು ನೆನಪುಗಳ ಮರುಕಳಿಸುವಂತೆ ಮಾಡಿದರು. ಅಲ್ಲೊಂದು ಫೋಟೋ ಸೆಷನ್ ಕೂಡ ನಡೆಯಿತು.
ಇದನ್ನೂ ಓದಿ | ವಚನಾನಂದ ಶ್ರೀ-ಯತ್ನಾಳ್ ನಡುವೆ ಜೋಕರ್-ಬ್ರೋಕರ್ ವಾರ್: ಸ್ವಾಮೀಜಿ ಬಣ್ಣ ಬಯಲು ಮಾಡುವೆ ಎಂದ ಶಾಸಕ
ನಂತರ, ಕಾರ್ಯಕ್ರಮದ ಸ್ಥಳಕ್ಕೆ ಗುರುಗಳು ಆಗಮಿಸಿದಾಗ ಬ್ಯಾಂಡ್, ಡೊಳ್ಳು ಹಾಗೂ ಸಂಗೀತದ ಮೂಲಕ ಅವರನ್ನು ಬರಮಾಡಿಕೊಂಡ ಶಿಷ್ಯವೃಂದ, ಗುರುಗಳ ಪಾದಗಳಿಗೆ ಪುಷ್ಪವೃಷ್ಟಿ ಮೂಲಕ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿತು. ಇಂತಹ ಅನಿರೀಕ್ಷಿತ ಹಾಗೂ ಸಂಭ್ರಮದ ಸ್ವಾಗತಕ್ಕೆ ಗುರುಗಳ ಕಣ್ಣೀರಂಚಲ್ಲಿ ನೀರಾಡಿಸಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮಪ್ಪ ಪಾಟೀಲ್ ಚೇಗುಂಟಾ, ಸಂಸ್ಥೆಗೆ ಕೀರ್ತಿ ತಂದ ಶಿಷ್ಯವೃಂದಕ್ಕೆ ಶ್ಲಾಘಿಸಿದರಲ್ಲದೆ, ಇಂತಹ ಕಾರ್ಯಕ್ರಮಗಳು ನಿಜಕ್ಕೂ ಅವಿಸ್ಮರಣೀಯ ಎಂದರು.
ನಿವೃತ್ತ ಶಿಕ್ಷಕರಾದ ಎಚ್.ಎಸ್.ಬಿರಾದಾರ್ ಮಾತನಾಡಿ, ಮೂರು ದಶಕಗಳ ಹಿಂದಿನ ಘಟನೆಗಳ ಮೆಲುಕು ಹಾಕಿದರು. ಇಂತಹ ಅಭೂತಪೂರ್ವ ಸಂಭ್ರಮಾಚರಣೆ ಖುಷಿ ಹಾಗೂ ಸಾರ್ಥಕ ಭಾವ ಮೂಡಿಸಿದೆ ಎಂದರು.
77ರ ಹರೆಯದ ಸದಾನಂದ ಪಾಟೀಲ್ ಮಾತನಾಡಿ, ಇಂತಹ ಕಾರ್ಯಕ್ರಮ ಹಾಗೂ ಮಕ್ಕಳ ಪ್ರೀತಿ ನೋಡಿದರೆ 100 ವರ್ಷಗಳ ಕಾಲ ಜೀವಿಸುವ ಆಸೆಯಾಗುತ್ತದೆ ಎಂದು ಭಾವುಕರಾದರು.
ನಿವೃತ್ತ ಶಿಕ್ಷಕರಾದ ಚಂದ್ರಕಾಂತ ಲೇವಡಿ, ಮಹಾದೇವಪ್ಪಾ ಮುನಗಲ್, ನಾಗನಗೌಡ ಪಾಟೀಲ್, ಸುರೇಂದ್ರನಾಥ್ ಕಡೇಚೂರು, ಶಿವಶಂಕರ ಪಾಟೀಲ್, ವಿಜಯರಾವ್ ಕುಲ್ಕರ್ಣಿ, ಮಲ್ಲಪ್ಪ ಮುಂಡ್ರಿಕೇರಿ, ಪರಿಮಳಾ ಜೋಷಿ, ಶೋಭಾ ಟಪಾಲ, ಅಕ್ಕನಾಗಮ್ಮ, ಜುಬೇದಾ ಬೇಗಂ ಮಾತನಾಡಿದರು. ಕಾರ್ಯದರ್ಶಿಗಳ ಸಹಿತ ಅಂದಿನ ಈ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ಮಹಾದೇವ ಅವರನ್ನು ಗೌರವಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನರಸಿಂಗರಾವ್ ಕುಲ್ಕರ್ಣಿ ಹಾಗೂ ಪರಿಮಳಾ ನಿರೂಪಿಸಿದರು, ಶಿವಶರಣಪ್ಪ ಬಿ. ನಾಯಕ್ ಸ್ವಾಗತಿಸಿ, ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪಾ ಮ್ಯಾಗೇರಿ ವಂದಿಸಿದರು, ಅಗಲಿದ ಗುರುಗಳು ಹಾಗೂ ಸಹೋದ್ಯೋಗಿಗಳ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು. ಅನಿವಾರ್‍ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲಾಗದ ಶಿಕ್ಷಕರು ಇದರ ಯಶಸ್ಸಿಗೆ ಸಂದೇಶ ಕಳುಹಿಸಿದ್ದರು. ಲಿಂಗೇರಿ ಮೊರಾರ್ಜಿ ಶಾಲೆಯ ಚಂದ್ರಶೇಖರ ಗೋಗಿ ಹಾಗೂ ತಂಡದಿಂದ ನಾಡಗೀತೆ, ವಚನ ಗಾಯನ ಮತ್ತು ವಿತೇಶ ತಂಡದಿಂದ ಸಂಗೀತ ಸಂಜೆ ನಡೆಯಿತು. ಬಾಲಪ್ರತಿಭೆ ಪವನ್ ಮ್ಯಾಗೇರಿ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.
1991-92ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಎಲ್ಲ ಕನ್ನಡ ಹಾಗೂ ಆಂಗ್ಲ ವಿಭಾಗದಲ್ಲಿ ಅಭ್ಯಸಿಸಿದ್ದ ಅಂದಿನ ಬಹುತೇಕ ವಿದ್ಯಾರ್ಥಿಗಳು ಆಗಮಿಸಿದ್ದರು. ಇದರ ಅಂಗವಾಗಿ ಎಲ್ಲರಿಗೂ ಸ್ಮರಣಿಕೆ ಹಾಗೂ ಸನ್ಮಾನಿಸಲಾಯಿತು.
ಇದನ್ನೂ ಓದಿ | Panchamasali Community | ಮುರುಗೇಶ್ ನಿರಾಣಿ ಸಾಹೇಬ್ರು ಸ್ವಲ್ಪ ದಿನದಲ್ಲೇ ಸಿಎಂ ಆಗ್ತಾರೆ: ರಾಮಣ್ಣ ಲಮಾಣಿ