Site icon Vistara News

Rain News: ತುಂಬಿ ಹರಿದ ನದಿಗಳು, ವರದಾ ನದಿಯಲ್ಲಿ ತೇಲಿ ಬಂದ ಶವ!

tunga river

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ (rain news) ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ (tunga river), ವರದಾ, ಕುಮದ್ವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ಸೊರಬ ತಾಲೂಕಿನ ವರದಾ ನದಿಯಲ್ಲಿ (varada river) ಅಪರಿಚಿತ ವ್ಯಕ್ತಿಯ ಶವವೊಂದು (dead body) ತೇಲಿಕೊಂಡು ಬಂದುದು ಸ್ಥಳೀಯರಿಗೆ ಕಂಡು ಬಂತು. ಲಕ್ಕವಳ್ಳಿ ಗ್ರಾಮದ ವರದಾ ನದಿ ತೀರದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಶವ ದಡದತ್ತ ಬರದೆ ನದಿಯಲ್ಲಿ ತೇಲಿಕೊಂಡು ಹೋಗಿದೆ. ಲಕ್ಕವಳ್ಳಿ ಗ್ರಾಮಸ್ಥರು ಶವ ನೋಡಿ ಅಚ್ಚರಿ ಪಟ್ಟರು.

ಶಿವಮೊಗ್ಗ ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದು, 200ಕ್ಕೂ ಅಧಿಕ ಮನೆಗಳು, 30ಕ್ಕೂ ಅಧಿಕ ಕೊಟ್ಟಿಗೆಗಳಿಗೆ ಹಾನಿಯಾಗಿವೆ. 206 ಮನೆಗಳ ಗೋಡೆ ಕುಸಿತವಾಗಿದೆ. 34 ಜಾನುವಾರುಗಳ ಕೊಟ್ಟಿಗೆಗಳಿಗೆ ಹಾನಿಯಾಗಿದೆ. 815 ಹೆಕ್ಟೇರ್ ಕೃಷಿ ಮತ್ತು 30.5 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. 9 ಜಾನುವಾರುಗಳು ಸಾವಿಗೀಡಾಗಿವೆ.

ತುಂಗಭದ್ರಾ ಜಲಾಶಯದತ್ತ ಭಾರಿ ನೀರು

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ (tungabhadra dam) ಹರಿದುಬರುವ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಿದ್ದು, ಬರೋಬ್ಬರಿ 40 TMCಗೂ ಅಧಿಕ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.

ಕೇವಲ 24 ಗಂಟೆಯಲ್ಲಿ ಜಲಾಶಯದತ್ತ 9 ಟಿಎಂಸಿಗೂ ಅಧಿಕ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಯಲ್ಲಿ ಸರಾಸರಿ 98,357 ಕ್ಯೂಸೆಕ್ ನೀರು ಹರಿದು ಬಂದಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಸದ್ಯ 40.136 TMC ನೀರು ಸಂಗ್ರಹವಾಗಿದೆ. ಟಿಬಿ ಡ್ಯಾಂ ಒಟ್ಟು 1,633 FLR ಅಡಿ ಹೊಂದಿದ್ದು, ಸದ್ಯ ಜಲಾಶಯದಲ್ಲಿ 1,611.27 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 31,362 ಸಾವಿರ ಕ್ಯೂಸೆಕ್ ಒಳಹರಿವು ಹಾಗೂ 32,328 ಸಾವಿರ ಕ್ಯೂಸೆಕ್ ಹೊರಹರಿವು ಇತ್ತು.

ಭೀಮಾ ತೀರದಲ್ಲಿ ಪ್ರವಾಹ ಭೀತಿ

ಯಾದಗಿರಿ: ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಭೀಮಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಭೀಮಾ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್‌ನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ನದಿ ತೀರದಲ್ಲಿರುವ ವೀರಾಂಜನೇಯ, ಕಂಗಳೇಶ್ವರ ದೇಗುಲಗಳು ಜಲಾವೃತವಾಗಿವೆ. ನದಿ ತೀರಕ್ಕೆ ತೆರಳಬಾರದೆಂದು ಜಿಲ್ಲಾಡಳಿತ ಜನರಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Rain News: ಮನೆ ಗೋಡೆ ಕುಸಿದು ವೃದ್ಧೆ ಸಾವು, ಇನ್ನೊಬ್ಬರು ವೃದ್ಧೆ ನೀರು ಪಾಲು

Exit mobile version