Site icon Vistara News

ಯುಕ್ತಾಪುರದಲ್ಲಿ ನೀರಿಗೆ ಹಾಹಾಕಾರ

ಯಾದಗಿರಿ: ಯಾದಗಿರಿ ಜಿಲ್ಲೆಯ ಯುಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೂ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮದ ಸಮೀಪ ಜನರು ಬಾವಿಯಿಂದ ನೀರು ತರುತ್ತಿದ್ದು, ಬೇಸಿಗೆಯಲ್ಲಿ ಬಾವಿ ಬತ್ತಿ ಹೋಗುತ್ತಿದೆ. ಇದರಿಂದ ಗ್ರಾಮದಲ್ಲಿ ನೀರಿನ ಸರಬರಾಜು ಮಾಡಲು ತೊಂದರೆ ಉಂಟಾಗಿದೆ.

ಯುಕ್ತಾಪುರ ಗ್ರಾಮದ ಜನರು ಕುಡಿಯುವ ನೀರಿಗಾಗಿ ಒಂದು ಬಾವಿಯನ್ನು ಆಸರಿಸಿದ್ದರು. ಈಗ ಅದು ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಲ್ಲ, ಅನ್ಯ ಬಳಕೆಗೆ ಮಾತ್ರ ಸೂಕ್ತ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಎರಡು ವರ್ಷದಿಂದ ಈ ಗ್ರಾಮದಲ್ಲಿ ಶುದ್ಧ ನೀರಿನ ಕುಡಿಯುವ ಘಟಕ ಹಾಳಾಗಿದ್ದು ಈವರೆಗೆ ಅದನ್ನು ದುರಸ್ತಿ ಮಾಡಿಲ್ಲ. ಈ ಕಾರಣದಿಂದ ಗ್ರಾಮಸ್ಥರು ಅನಿವಾರ್ಯವಾಗಿ ಬಾವಿಯ ನೀರನ್ನು ಕುಡಿಯಲು ಬಳಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಗ್ರಾಮದ ಮುಖಂಡ ಕಾಂತಪ್ಪ ಕುಂಬಾರ ತಿಳಿಸಿದ್ದಾರೆ.

ಯುಕ್ತಾಪರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ

ಅಲ್ಲಿನ ಗ್ರಾಮಸ್ಥರು ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅನೇಕ ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಗ್ರಾಮಸ್ಥರು ʼಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾಮ ಪಂಚಾಯಿತಿ ಮೂಲಕ ಹಣ ಬಿಡುಗಡೆ ಮಾಡಿದ್ದರೂ ಅದರ ಸದುಪಯೋಗ ಆಗುತ್ತಿಲ್ಲ. ಈ ಕಾರಣದಿಂದಲೇ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಹಾಳಾದ ರಸ್ತೆ, ಹಾಗೂ ಶೌಚಾಲಾಯದಂತಹ ಸಮಸ್ಯೆಗಳು ಇನ್ನೂ ಕಂಡುಬರುತ್ತಿದೆʼ ಎಂದು ದುಃಖ ವ್ಯಕ್ತ ಪಡಿಸಿದರು.

ಈ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಾಗೂ ಕುಡಿಯುವ ನೀರಿನ ಮೂಲಭೂತ ಸೌಕರ್ಯ. ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಈ ಗ್ರಾಮದ ಮಹಿಳೆಯರು ಮದುವೆಯಾಗಿ ಮೂರೇ ದಿನಕ್ಕೆ ಓಡಿ ಹೋಗುತ್ತಾರೆ !

Exit mobile version