ಯಾದಗಿರಿ: ತಾಲೂಕಿನ ರಾಮಸಮುದ್ರ ಗ್ರಾಮದ ಹೊರಭಾಗದಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಇದೊಂದು ಕೊಲೆಯಾಗಿರಬಹುದು ಎಂಬ ಸಂಶಯ ಮೂಡಿದೆ
ರಾಮಸಮುದ್ರ ಗ್ರಾಮದ ಯುವಕ ಮಲ್ಲಿಕಾರ್ಜುನ ಸೊಂಡೇರ್ (೨೮) ಅವರ ಶವ ಈ ರೀತಿ ಪತ್ತೆಯಾಗಿದೆ. ಅವರು ಮಂಗಳವಾರ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟ ಮಾಡಿ ನಂತರ ಎತ್ತುಗಳನ್ನು ಮೇಯಿಸಲು ಹೋಗಿದ್ದರು. ಹಾಗೆ ಹೋದವರು ಮರಳಿ ಬಾರದೆ ಇದ್ದಾಗ ಹುಡುಕಲಾಯಿತು. ಈ ವೇಳೆ ಅವರ ಶವ ಪತ್ತೆಯಾಗಿದೆ.
ಕೊಲೆ ಮಾಡಿ ಎಸೆದ ಆರೋಪ
ಈ ನಡುವೆ, ಇದೊಂದು ಕೊಲೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಮಲ್ಲಿಕಾರ್ಜುನ್ ಅವರು ಮೇಯಿಸಲು ಒಯ್ದ ಎತ್ತುಗಳು ಪಕ್ಕದ ಜಮೀನಿಗೆ ಹೋಗಿ ಮೇಯುತ್ತಿದ್ದವು ಎಂಬ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಇದೇ ವಿಷಯ ವಿಕೋಪಕ್ಕೆ ತಿರುಗಿ ಭೂಮಿಯ ಮಾಲೀಕರಾದ ಮಲ್ಲಿಕಾರ್ಜುನ ಎಂಬವರ ಪುತ್ರರಾದ ದೇವು ಮತ್ತು ಜ್ಯೋತಿರ್ಲಿಂಗ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕೊಲೆ ಮಾಡಿ ಕೃಷಿ ಹೊಂಡದಲ್ಲಿ ಎಸೆಯಲಾಗಿದೆ ಎಂದು ಮನೆಯವರು ಆರೋಪಿಸಿದ್ದು, ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Murder | ತಾಯಿ ಚಿಕಿತ್ಸೆಗೆ ಹಣ ನೀಡದ ಆಕ್ರೋಶ: ಮಗನಿಂದ ತಂದೆಯ ಕೊಲೆ