ಮೈಸೂರು: ಪಾರಂಪರಿಕ ಕಟ್ಟಡಗಳ ಉಳಿವಿಗೆ ಟೆಂಡರ್ ಪ್ರಕ್ರಿಯೆ ಬದಲಾಗಬೇಕು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ನಗರದ ನವೀಕೃತ ಪಾರಂಪರಿಕ ಕಟ್ಟಡ ಸರ್ಕಾರಿ ಆಯುರ್ವೇದ ಕಾಲೇಜನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದ ಅವರು, ಈಗಿರುವ ಟೆಂಡರ್ ಪ್ರಕ್ರಿಯೆ ಪ್ರಕಾರ, ಕಟ್ಟಡವನ್ನು ನೆಲಸಮ ಮಾಡುವುದು ಮತ್ತು ಮರು ನಿರ್ಮಾಣ ಮಾಡುವುದು ಎಂದು ಮಾತ್ರ ಇದೆ. ಹೀಗಾಗಿ ಪಾರಂಪರಿಕ ಕಟ್ಟಡಗಳನ್ನು ಪುನಶ್ಚೇತನಗೊಳಿಸಲು ಅವಕಾಶ ಕಲ್ಪಿಸಿ ರಕ್ಷಣೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪುನಶ್ಚೇತನಕ್ಕೆ ಅನುಮತಿ ಸಿಗುತ್ತಿಲ್ಲ, ಅದು ಕೂಡ ಸರಿಯಾಗಬೇಕು.
ಆಯುರ್ವೇದಿಕ್ ಆಸ್ಪತ್ರೆಯನ್ನು ಉತ್ತಮವಾಗಿ ಪುನಶ್ಚೇತನಗೊಳಿಸಲಾಗಿದೆ. ಇದೇ ರೀತಿ ಲ್ಯಾನ್ಸ್‌ಡೌನ್ ಮತ್ತಿತರ ಪುರಾತನ ಕಟ್ಟಡಗಳ ಪುನಶ್ಚೇತನವಾಗಬೇಕಿದೆ. ಆಯುರ್ವೇದಿಕ್ ಆಸ್ಪತ್ರೆ ಕೇವಲ ಸ್ಮಾರಕವಾಗಿಲ್ಲ, ಜನರಿಗೆ ಬಳಕೆ ಆಗುತ್ತಿದೆ. ಪಾರಂಪರಿಕ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಕಟ್ಟಡ ಮಾದರಿಯಾಗಬೇಕು ಎಂದು ತಿಳಿಸಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದು ಕಟ್ಟಡ ನೆಲಸಮ
ನಗರದ ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರ ಪ್ರತಿಕ್ರಿಯಿಸಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಅದು ಪಾರಂಪರಿಕ ಕಟ್ಟಡವಾಗಿರುವ ಕಾರಣ ಸಮಿತಿಯಿಂದ ನೆಲಸಮಕ್ಕೆ ಅನುಮತಿ ದೊರೆತಿದೆ. ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು. ಈಗಾಗಲೇ ಪಾರಂಪರಿಕ ಸಮಿತಿ ಕಟ್ಟಡ ಸದೃಢವಾಗಿಲ್ಲ ಎಂದು ವರದಿ ನೀಡಿದೆ. ನ್ಯಾಯಾಲಯದ ಆದೇಶದ ಬಂದ ನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಶ್ವ ಯೋಗದಿನದಂದು ನಗರ ಬಸ್ ನಿಲ್ದಾಣ ತಾತ್ಕಾಲಿಕ ಶಿಫ್ಟ್ ಮಾಡುವ ವಿಚಾರ ಪ್ರತಿಕ್ರಿಯಿಸಿದ ಅವರು, ಸದ್ಯ ಪ್ರಧಾನಿ ಆಗಮಿಸಲಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮುಂದಾಗಿದ್ದೇವೆ. ನಗರ ಬಸ್ ನಿಲ್ದಾಣ ತಾತ್ಕಾಲಿಕ ಶಿಫ್ಟ್ ಮಾಡುವ ಬಗ್ಗೆ ನಗರ ಪೊಲೀಸ್ ಆಯುಕ್ತರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | ಯೋಗದಿನದಲ್ಲಿ ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರ: ಸಂಸದ ಪ್ರತಾಪ್ ಸಿಂಹ