ಯಲ್ಲಾಪುರ: ದೇಶ ಕಾಯುವ ಸೈನಿಕ, ದೇಶಕ್ಕೆ ಅನ್ನ ಹಾಕುವ ರೈತ ಹಾಗೂ ದೇಶದ ಅಭಿವದ್ಧಿಗಾಗಿ ಶ್ರಮಿಸುವ ಕಾರ್ಮಿಕರನ್ನು ಎಂದಿಗೂ ಕಡೆಗಣಿಸುವಂತಿಲ್ಲ. ಕೃಷಿಕ ಹಾಗೂ ಕಾರ್ಮಿಕ (Farmer and labourer) ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಅವರಿಗೆ ತೊಂದರೆಯಾಗದಂತೆ ಜತೆ ಜತೆಯಾಗಿ ನಡೆಸಿಕೊಂಡು ಹೋಗುತ್ತೇನೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಬೃಹತ್ ಎಸ್.ಟಿ. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಕಾರಣದಿಂದ 2 ವರ್ಷ ನಾವು ಯಾವುದೇ ಅಭಿವೃದ್ಧಿ ಕಾರ್ಯದತ್ತ ಗಮನಹರಿಸಲು ಆಗಲಿಲ್ಲ. ಕೇವಲ ಆರೋಗ್ಯ ಉಳಿಸಿಕೊಳ್ಳುವತ್ತ ನಮ್ಮ ಸರ್ಕಾರ ಕ್ರಮ ಕೈಗೊಂಡಿತು. ಆದರೆ, ಈಗ ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದ್ದೆ. ನನ್ನ ಇಲಾಖೆಯಿಂದ ಜನತೆಗಾಗಿ ನೂತನ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿಯೇ ವಿನೂತನವಾದ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 40 ವಿದ್ಯಾರ್ಥಿಗಳು ಈ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ನಾನು ಒಬ್ಬ ಕಾರ್ಮಿಕನಾಗಿ ಕೆಲಸ ಮಾಡಿದವನು. ಕಾರ್ಮಿಕರ ಕಷ್ಟವನ್ನು ಅರಿತಿದ್ದೇನೆ. ಹೀಗಾಗಿ ಕಾರ್ಮಿಕ ಇಲಾಖೆಗೆ ಜೀವಂತಿಕೆ ನೀಡುವ ಉದ್ದೇಶದಿಂದ ನಾನಾಗಿಯೇ ಈ ಇಲಾಖೆಯನ್ನು ಪಡೆದುಕೊಂಡಿದ್ದೆ. ಇಂದು ಇಲಾಖೆಯ ಅಧಿಕಾರ ಪಡೆಯಲು ಸ್ಪರ್ಧೆ ಏರ್ಪಟ್ಟಿದೆ ಎಂದರು.
ಇದನ್ನೂ ಓದಿ: ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಆಯೋಜಿಸಿರುವ 4ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ತಾಲಿಬಾನಿಗಳು!
ಕ್ಷೇತ್ರದಲ್ಲಿ 25 ವರ್ಷಗಳಲ್ಲಿ ಆಗದಂತಹ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಎಸ್.ಸಿ. ಎಸ್.ಟಿ ಮೀಸಲಾತಿಯನ್ನು ಹೆಚ್ಚಿಸಿ ನಿಮ್ಮ ಜನಾಂಗಕ್ಕೆ ನ್ಯಾಯ ಒದಗಿಸುವ ಕೆಲಸ ನಮ್ಮ ಸರ್ಕಾರದಿಂದಾಗಿದೆ. ಇದರ ಸದುಪಯೋಗದಿಂದ ಮುಂದೆ ನಿಮ್ಮ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಜಾತಿ, ಮತ ಪಕ್ಷವನ್ನು ನೋಡದೆ ಕೋವಿಡ್ ಸಂದರ್ಭದಲ್ಲಿ 70 ಸಾವಿರ ಆಹಾರದ ಕಿಟ್ ಅನ್ನು 2 ಬಾರಿ ವಿತರಿಸಿದ್ದೇನೆ. ಕಷ್ಟ ಕಾಲದಲ್ಲಿ ಜತೆಗಿದ್ದವರು ನಾವು. ಈಗ ಮತ ಕೇಳಲು ವಿರೋಧಿಗಳು ಮುಂದಾಗಿದ್ದಾರೆ. ಹೀಗಾಗಿ ಜನರು ಇದನ್ನು ನೇರವಾಗಿ ಕೇಳಬೇಕಾಗಿದೆ. ಕಷ್ಟವನ್ನು ಅರಿತವರಿಗೆ ಮಾತ್ರ ಬಡವರ ನೋವು ತಿಳಿಯುತ್ತದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ಮತ್ತೊಮ್ಮೆ ಆಯ್ಕೆಯಾಗಿ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: WPL 2023: ಸೋತವರ ಮತ್ತು ಗೆದ್ದವರ ನಡುವೆ ಕಾದಾಟ
ಎಸ್.ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯಕ ಮಾತನಾಡಿ, ಹಿಂದುಳಿದ ವರ್ಗಕ್ಕೆ ಹಾಗೂ ಪಂಗಡಕ್ಕೆ ಮೀಸಲಾತಿಯನ್ನು ಕೊಟ್ಟಿರುವುದು ನಮ್ಮ ಬಿಜೆಪಿ ಸರ್ಕಾರ. ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಕಾರ್ಮಿಕರ ಆಹಾರಕ್ಕೆ ಆಸರೆ ಆಗಿದ್ದು ಕಾರ್ಮಿಕ ಇಲಾಖೆಯಾಗಿದೆ. ಇದು ಸಚಿವ ಹೆಬ್ಬಾರ್ ಅವರ ಕಾರ್ಯ ವೈಖರಿಯನ್ನು ತೋರಿಸುತ್ತದೆ. ಪರಿಶಿಷ್ಟ ವರ್ಗ ಹಾಗೂ ಪಂಗಡಕ್ಕೆ ನಮ್ಮ ಸರ್ಕಾರ ನೀಡಿದಷ್ಟು ಸೌಕರ್ಯಗಳನ್ನು ಈ ಹಿಂದಿನ ಯಾವುದೇ ಸರ್ಕಾರ ನೀಡಿಲ್ಲ. ನಾವೆಷ್ಟು ದಿನ ಅಧಿಕಾರದಲ್ಲಿದ್ದೇವೆ ಎಂಬುದಕ್ಕಿಂತ ಜನತೆಗೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದು ಮಹತ್ವದ್ದಾಗಿರುತ್ತದೆ. ಹೀಗಾಗಿ ಆ ಕೆಲಸಗಳ ಆಧಾರದ ಮೇಲೆ ಮತ ಕೇಳುತ್ತೇವೆಯೇ ಹೊರತು ನೀಡಿದ ಹುಸಿ ಆಶ್ವಾಸನೆಗಳ ಮೇಲಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ, ರಾಷ್ಟ್ರಾದ್ಯಂತ ಬಿಜೆಪಿಯನ್ನು ಜನ ಒಪ್ಪಿಕೊಂಡು ಅಧಿಕಾರ ನೀಡಿದ್ದಾರೆ. ಅಂತೆಯೇ ಈ ಬಾರಿ ಜಿಲ್ಲೆಯ ಎಲ್ಲ 6 ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.
ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬಡ ಜನರ ಕಷ್ಟವನ್ನು ಅರಿತು ಕೆಲಸ ಮಾಡುವ ಸಚಿವರು ನಮ್ಮ ಕ್ಷೇತ್ರಕ್ಕೆ ಸಿಕ್ಕಿದ್ದಾರೆ. ಅವರಿಂದ ಇನ್ನಷ್ಟು ಪ್ರಯೋಜನ ಪಡೆಯುವ ಅವಶ್ಯಕತೆ ನಮಗಿದೆ. ಹೀಗಾಗಿ ಮತ್ತೊಮ್ಮೆ ಹೆಬ್ಬಾರ್ ಅವರು ಬಹುಮತದಿಂದ ಆಯ್ಕೆಯಾಗುತ್ತಾರೆ ಎಂಬುದಕ್ಕೆ ಇಂದು ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿಯಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ಸಿ.ಪಿ.ಪಾಟೀಲ್, ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಸಿದ್ದಿ, ರಾಜ್ಯ ಮಹಿಳಾ ಕಾರ್ಯಕಾರಣಿ ಸದಸ್ಯೆ ರೇಖಾ ಹೆಗಡೆ ಪ್ರಮುಖರಾದ ವಿಜಯ ಮಿರಾಶಿ, ಚಂದ್ರು ಹೆಗಡೆ, ಉಷಾ ಹೆಗಡೆ, ಮತ್ತಿತರರು ವೇದಿಕೆಯಲ್ಲಿದ್ದರು.
ಇದನ್ನೂ ಓದಿ: KSRTC Employees Strike: ಕೆಪಿಟಿಸಿಎಲ್ ಬಳಿಕ ಸಾರಿಗೆ ನೌಕರರ ವೇತನವೂ ಹೆಚ್ಚಳ ಸಾಧ್ಯತೆ; ಸಂಜೆ ಸಭೆ ಬಳಿಕ ಮುಷ್ಕರ ವಾಪಸ್?
ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ತಳವಾರ್ ಸ್ವಾಗತಿಸಿದರು. ಉಮೇಶ್ ಬಂಕಾಪುರ ನಿರ್ವಹಿಸಿದರು. ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ವಂದಿಸಿದರು. ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.