ಬೆಂಗಳೂರು: ಅನಧಿಕೃತವಾಗಿ ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸರ್ಕಾರದ ಯಶಸ್ವಿನಿ ಕಾರ್ಡ್ (Yashaswini Scheme) ಮಾಡಿ ಕೊಡುವುದಾಗಿ ಜನರಿಗೆ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಖಾಸಗಿ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಯಶಸ್ವಿನಿ ಯೋಜನೆಯ ಸದಸ್ಯರ ಕಾರ್ಡ್ ವಿತರಣೆಯ ಸಂಪೂರ್ಣ ಉಸ್ತುವಾರಿಯನ್ನು ಸರ್ಕಾರವೇ ರಚಿಸಿರುವ ಯಶಸ್ವಿನಿ ಟ್ರಸ್ಟ್ ಮೂಲಕ ನಿರ್ವಹಿಸಲಾಗುತ್ತಿದೆ. ಬೇರೆ ಯಾರಿಗೂ ಕಾರ್ಡ್ ವಿತರಿಸುವ ಅನುಮತಿಯನ್ನು ಸರ್ಕಾರ ನೀಡಿಲ್ಲ. ಆದರೆ ಯಶಸ್ವಿನಿ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಜನರಿಗೆ ವಂಚನೆ ಮಾಡುತ್ತಿರುವುದು ಟ್ರಸ್ಟ್ ಗಮನಕ್ಕೆ ಬಂದಿದೆ.
ಹೀಗಾಗಿ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟಸ್ವಾಮಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಸ್ಡಮ್ ಪರ್ಲ್ ಫೌಂಡೇಷನ್ ಸಂಸ್ಥೆಯು (Wisdom Pearl Foundation) ಸರ್ಕಾರ ಹಾಗೂ ಸಹಕಾರ ಇಲಾಖೆಯ ಹೆಸರು ಮತ್ತು ಲೋಗೋ ಬಳಸಿ ಪೋಸ್ಟರ್ ಮೂಲಕ ಯಶಸ್ವಿನಿ ಕಾರ್ಡ್ ಮಾಡಿಕೊಡುವುದಾಗಿ ಪ್ರಕಟಣೆ ಹೊರಡಿಸಿದೆ. ಇದು ಅಮಾಯಕರಿಗೆ ವಂಚನೆ ಮಾಡುತ್ತಿರುವುದಲ್ಲದೇ, ಮುಂದಿನ ದಿನಗಳಲ್ಲಿ ಸರ್ಕಾರವು ರೂಪಿಸಿರುವ ಯಶಸ್ವಿನಿ ಯೋಜನೆಗೆ ಕಳಂಕ ಬರುವ ಸಾಧ್ಯತೆಯಿರುತ್ತದೆ. ಆದರಿಂದ ರಾಜ್ಯ ಸರ್ಕಾರದ ಹೆಸರು ಮತ್ತು ಲೋಗೋವನ್ನು ದುರ್ಬಳಕೆ ಮಾಡುತ್ತಿರುವ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವೆಂಕಟಸ್ವಾಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Road Accident : ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವು
ಈ ಸಂಸ್ಥೆ ಜಯನಗರದ ಈದ್ಗಾ ಮೈದಾನ ಆವರಣದ ವಿಳಾಸ ಕೊಟ್ಟಿದ್ದು, ಈ ಬಗ್ಗೆ ಪರಿಶೀಲಿಸಲು ಮಸೀದಿ ಒಳಗೆ ಟ್ರಸ್ಟ್‌ಗೆ ಅನುಮತಿ ಇಲ್ಲ. ಈ ನಿಟ್ಟಿನಲ್ಲಿ ಖುದ್ದು ಪರಿಶೀಲಿಸಿ ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ.
ಕ್ರೀಡಾ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ