ವಿಜಯಪುರ/ಬಳ್ಳಾರಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಅಥಣಿ ಕ್ಷೇತ್ರದಿಂದ ಟಿಕೆಟ್ ಸಿಗಲಿಲ್ಲವೆಂದು ಬಿಜೆಪಿ ತೊರೆದ ವಿಧಾನ ಪರಿಷತ್ ಮಾಜಿ ಸದಸ್ಯ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಅವರು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಬಿ. ಶ್ರೀರಾಮುಲು ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ, ಸವದಿ ತಾಳ್ಮೆ ವಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಜಯಪುರದಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜಕಾರಣದಲ್ಲಿ ನನಗೂ ಸಾಕಷ್ಟು ಅಪಮಾನವಾಗಿದೆ. ನಾವು ಸಹನೆ, ತಾಳ್ಮೆಯಿಂದ ತೀರ್ಮಾನವನ್ನು ತೆಗೆದುಕೊಳ್ಳಬೇಕು. ನಾನು ಮಂತ್ರಿಯಾಗಲು, ಉಪ ಮುಖ್ಯಮಂತ್ರಿ ಆಗಲು ಅರ್ಹನಾಗಿದ್ದೆ. ಆದರೆ, ಯಾವುದೋ ಕಾರಣಕ್ಕೆ ಕೊಡಲಿಲ್ಲ. ಪಕ್ಷಕ್ಕೆ ಅವಶ್ಯಕತೆ ಇದ್ದಾಗ ಮಾಡಿಯೇ ಮಾಡುತ್ತಾರೆ. ಇದಕ್ಕೆಲ್ಲ ಸಿಟ್ಟು ಮಾಡಿಕೊಂಡು ಪಕ್ಷ ಬಿಡಬಾರದು. ನಾನು ಪಕ್ಷದ ಹಗುರವಾಗಿ ಮಾತನಾಡಿಲ್ಲ. ನಮ್ಮದು ವ್ಯಕ್ತಿಗತ ಜಗಳವಿತ್ತು. ಜೆಡಿಎಸ್‌ನಲ್ಲಿ ಇದ್ದಾಗಲೂ ಸಿದ್ಧಾಂತವನ್ನು ಬಿಟ್ಟಿರಲಿಲ್ಲ ಎಂದು ಹೇಳಿದರು.
ಸವದಿ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಸವದಿಯವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಪಕ್ಷದಿಂದ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಂದೆ ಸವದಿಗೆ ಒಳ್ಳೆಯ ಭವಿಷ್ಯವಿತ್ತು. ತಾಳ್ಮೆಯಿಂದ ಇದ್ದಿದ್ದರೆ ಒಳ್ಳೆಯ ಭವಿಷ್ಯ ಕಾದಿತ್ತು. ಪಕ್ಷದಲ್ಲಿ ಸವದಿ ಬಗ್ಗೆ ಬಹಳ ಗೌರವವಿತ್ತು. ಆದರೆ, ಅವರು, ದುಡುಕಿದ್ದಾರೆ, ಉದ್ವೇಗಕ್ಕೆ ಒಳಗಾಗಿದ್ದಾರೆ. ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಚುನಾವಣೆಯಲ್ಲಿ ಯಾವುದೇ ಹಿನ್ನಡೆ ಆಗಲ್ಲ ಎಂದು ಹೇಳಿದರು.
ಇದನ್ನೂ ಓದಿ: Viral News : 8 ವರ್ಷ ಅಣ್ಣ ಎಂದು ಕರೆದಳು, ಕೊನೆಗೆ ಅವನನ್ನೇ ಮದುವೆಯಾದಳು
ಮಾಜಿ ಮುಖ್ಯಮಂತ್ರಿಯಾಗಿರುವ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಅವಮಾನ ಆಗಿಲ್ಲವೇ? ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಂಡಿರುತ್ತಾರೆ ಎಂದು ಯತ್ನಾಳ್ ಹೇಳಿದರು.
ಈಶ್ವರಪ್ಪ ರಾಜಕೀಯ ನಿವೃತ್ತಿ ಪಡೆದುಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಈಶ್ವರಪ್ಪ ಗೌರವಯುತವಾಗಿ ನಡೆದುಕೊಂಡರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎನ್ನುವ ಸಂದೇಶವನ್ನು ಈಶ್ವರಪ್ಪ ನೀಡಿದ್ದಾರೆ. ಎಲ್ಲ ಕಾರ್ಯಕರ್ತರಲ್ಲಿ ಈ ಭಾವನೆ ಬರಬೇಕು. ಕೊನೆಯ ಅಧಿವೇಶನದಲ್ಲಿ ಇದನ್ನೇ ಹೇಳಿದ್ದೆ. 75 ವರ್ಷದ ನಂತರ ಪಕ್ಷದ ಕೆಲಸ ಮಾಡಬೇಕು ಎಂದು ಬಿಜೆಪಿ ಕಡ್ಡಾಯ ಮಾಡಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕ ಬೇಕಿದೆ. ಜನರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತ ಅರೆಹುಚ್ಚನನ್ನು ಪ್ರಧಾನಿ ಮಾಡ್ತಾರಾ? ಮೋದಿ ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ರಾಜಕೀಯದಲ್ಲಿ ಆತುರಕ್ಕೆ ಬೀಳಬಾರದು- ಶ್ರೀರಾಮುಲು
ಬಳ್ಳಾರಿ: ಲಕ್ಷಣ ಸವದಿ ನನ್ನ ಸ್ನೇಹಿತರಾಗಿದ್ದು, ಅವರ ಪಕ್ಷ ಬಿಟ್ಟಿರುವ ಬಗ್ಗೆ ಬೇಸರವಿದೆ. ಸೋತಾಗ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ನಾನು ಮತ್ತು ಸವದಿ ರಾಮ, ಲಕ್ಷ್ಮಣರಂತೆ ಇದ್ದೇವೆ. ಸಣ್ಣಪುಟ್ಟ ವಿಚಾರಕ್ಕೆ ಟಿಕೆಟ್ ಸಿಕ್ಕಿಲ್ಲವೆಂದು ಹೊರಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಇದ್ದಿದ್ದರೆ ಅವರಿಗೆ ಇನ್ನೊಂದು ದೊಡ್ಡ ಸ್ಥಾನ ಸಿಗುತ್ತಿತ್ತು. ಆದರೆ, ಅವರ ಸ್ವಲ್ಪ ಕಾಯಬೇಕಿತ್ತು, ಹೀಗೆ ಆತುರ ಪಡಬಾರದಾಗಿತ್ತು. ರಾಜಕೀಯದಲ್ಲಿ ಯಾವತ್ತೂ ಆತುರಕ್ಕೆ ಬೀಳಬಾರದು ಎಂದು ಸಚಿವ ಶ್ರೀರಾಮುಲು ಹೇಳಿದರು.
ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ದ್ರೋಹ ಮಾಡಿಲ್ಲ. ಅವರು ಈ ನಿರ್ಧಾರವನ್ನು ಕೈಗೊಳ್ಳಬಾರದಿತ್ತು ಎಂದು ಹೇಳಿದರು.
ಇದನ್ನೂ ಓದಿ: Karnataka Elections 2023 : ಜೆಡಿಎಸ್‌ನಿಂದ ಇನ್ನೂ 6 ಕ್ಷೇತ್ರಗಳ ಪಟ್ಟಿ ರಿಲೀಸ್; ಮಾಲಕ ರೆಡ್ಡಿ, ರಘು ಆಚಾರ್‌ಗೆ ಟಿಕೆಟ್
ಜಗದೀಶ್ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಟಿಕೆಟ್ ವಿಳಂಬ ಆಗಿದ್ದರಿಂದ ಅವರಿಗೆ ಅಸಮಾಧಾನ ಆಗಿರಬಹುದು. ಆದರೆ, ಅವರನ್ನು ಪಕ್ಷ ಎಂದೂ ಕಡೆಗಣಿಸಿಲ್ಲ. ವರಿಷ್ಠರು ಅವರ ಮನವೊಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.