ಬೆಳಗಾವಿ: ರಾಜ್ಯದಲ್ಲಿ ಮೀಸಲಾತಿ ಬೇಡಿಕೆ ಮತ್ತು ಚರ್ಚೆ ಜೋರಾಗಿದೆ. ಒಂದು ಕಡೆ ಪಂಚಮಸಾಲಿ ಸಮುದಾಯ ತಮ್ಮನ್ನು ೨ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಹಠ ಹಿಡಿದು ಕೂತಿದ್ದರೆ, ಒಕ್ಕಲಿಗರಿಂದಲೂ ಮೀಸಲಾತಿ ಹೆಚ್ಚಳದ ಬೇಡಿಕೆ ಹೆಚ್ಚಾಗಿದೆ. ಇದರ ನಡುವೆ, ಕಂದಾಯ ಸಚಿವರಾಗಿರುವ ಆರ್. ಅಶೋಕ್ ಅವರು ಒಕ್ಕಲಿಗರಿಗಾಗಿ ಮೀಸಲಾತಿ ಕೇಳುತ್ತಿರುವ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಣಕುವ ಮಾತನ್ನಾಡಿದ್ದಾರೆ.
ಒಕ್ಕಲಿಗರು ಮೀಸಲಾತಿ ಕೇಳುತ್ತಿರುವ ವಿಚಾರವಾಗಿ ವಿಸ್ತಾರ ನ್ಯೂಸ್ ಜತೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ನಾವು ಲಿಂಗಾಯತರು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಐವತ್ತು ಸ್ಥಾನ ಕೊಡ್ತಾ ಇದ್ದೇವೆ. ಆರ್ ಅಶೋಕ್ ಅವರು ಕೂಡ ಬಿಜೆಪಿಗೆ 50 ಸೀಟು ಗೆಲ್ಲಿಸಿಕೊಂಡು ಬರಲಿ. ಆಮೇಲೆ ಮೀಸಲಾತಿ ಕೊಡೋಣ ಎಂದರು. ಮಾಜಿ ಪ್ರಧಾನಿ ದೇವೇಗೌಡರ ರೀತಿ ಅಶೋಕ್ ಸೀಟು ಗೆದ್ದು ಬರಲಿ ಎಂದರು ಯತ್ನಾಳ್.
ʻʻನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಸಮುದಾಯ ಮೊದಲಿಂದಲೂ ಬಿಜೆಪಿ ಜತೆ ಇದೆ. ನಮ್ಮ ಸಮುದಾಯದಿಂದ ಈ ಭಾಗದಲ್ಲಿ ಹೆಚ್ಚು ಶಾಸಕರು ಆಯ್ಕೆ ಆಗಿ ಹೋಗುತ್ತಿದ್ದಾರೆ. ಹೀಗಾಗಿ ಕಂದಾಯ ಸಚಿವರಾಗಿರುವ ಅಶೋಕ್ ಅವರು ನಮಗೆ ಹೇಳಲು ಬರುವುದು ಬೇಡʼʼ ಎಂದು ಗರಂ ಆಗಿ ಹೇಳಿದರು.
ಸಚಿವರಾದ ಅಶೋಕ್, ಸುಧಾಕರ್ ಅವರು ಬೆಳಗ್ಗಿನಿಂದ ಸಂಜೆವರೆಗೂ ಸಿಎಂ ಜತೆಯಲ್ಲಿ ಇರ್ತಾರೆ. ಅವರ ಮಾತನ್ನು ಸಿಎಂ ಕೇಳಬಹುದು. ಮೀಸಲಾತಿ ಕೊಡಬಹುದು ಎಂದರು.
ಅಶೋಕ್‌ಗೆ ಹೆಚ್ಚು ಸ್ಥಾನ ಗೆಲ್ಲೊಕ್ಕಾಗಲ್ಲ!
ʻʻಒಕ್ಕಲಿಗರಿಗೆ ದೇವೇಗೌಡರೇ ನಾಯಕ. ಆ ಭಾಗದಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುತ್ತೆ. ಬಿಜೆಪಿ ಮತ್ತು ಅಶೋಕ್ ಸೇರಿ ನಾಲ್ಕೈದು ಸ್ಥಾನ ಗೆಲ್ತಾರೆ. ಅಶೋಕ್ ಅವರು ಹೆಚ್ಚು ಸ್ಥಾನ ಗೆದ್ದು ರಾಜ್ಯದ ನಾಯಕರಾಗಲಿ. ದೇವೇಗೌಡರ ರೀತಿಯಲ್ಲಿ ಇವರು ಸಮುದಾಯದ ನಾಯಕರಾಗಿ ಬೆಳೆಯಲಿ. ನಲವತ್ತು ಸ್ಥಾನ ಗೆಲ್ಲಿಸಿಕೊಂಡು ಬರಲಿ. ನಾವು ಇಲ್ಲಿಂದ ಜಾಸ್ತಿ ಗೆದ್ದು ಕೊಂಡು ಹೋಗ್ತೀವಿ. ಹೀಗಾಗಿ ನಾವು ಗಟ್ಟಿಯಾಗಿ ಕೇಳುತ್ತಿದ್ದೇವೆʼʼ ಎಂದು ನುಡಿದರು ಯತ್ನಾಳ್.
ʻʻ2ಎ ಅಡಿಯಲ್ಲಿ ಕುರುಬ ಸೇರಿದಂತೆ ಹಲವು ಸಮುದಾಯಗಳು ಬರುತ್ತವೆ. ಹೀಗಾಗಿ ಹೊಸ ಪ್ರವರ್ಗ ಮಾಡಿ ಮೀಸಲಾತಿ ಕೊಟ್ಟರೂ ನಮಗೆ ಬೇಸರವಿಲ್ಲ. ನಮಗೆ ಡಿಸೆಂಬರ್ 29ಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವ ಭರವಸೆ ಸಿಕ್ಕಿದೆ. 29ಕ್ಕೆ ನಮಗೆ ಮೀಸಲಾತಿ ಸಿಗುತ್ತದೆʼʼ ಎಂದು ಭರವಸೆಯಿಂದ ನುಡಿದರು.
ನಮ್ಮಲ್ಲಿನ ಶ್ರೀಮಂತರಿಗೆ ಮೀಸಲಾತಿ ಬೇಡ
ʻʻಪಂಚಮಸಾಲಿಗೆ 2ಎ ಆದ್ರೂ ಕೊಡಿ. ಯಾವುದೇ ಎಬಿಸಿಸಿ ಯಾವುದಾದರೂ ಕೊಡಿ. ಆದರೆ ಅದಕ್ಕೆ ೨ಎಗೆ ಇರುವ ಸೌಲಭ್ಯ ಇರಬೇಕು. ಬಡವರಿಗಾಗಿ ಮಾತ್ರ ನಾವು ಮೀಸಲಾತಿ ಕೇಳ್ತಾ ಇದ್ದೇವೆ. ನನ್ನ ಹಾಗೆ ಶಾಸಕ ಆದವರಿಗೆ, ಡಿಸಿ ಆದವರಿಗೆ ಶ್ರೀಮಂತರಿಗೆ ಈ ಮೀಸಲಾತಿ ಬೇಡ. ಈ ಕಂಡಿಷನ್ ಹಾಕಿಯೇ ಮೀಸಲಾತಿ ನೀಡಿʼʼ ಎಂದು ಹೇಳಿದ ಯತ್ನಾಳ್, ನಾವು ರಾಜಕೀಯಕ್ಕೆ ಕೇಳ್ತಾ ಇಲ್ಲ ಮೀಸಲಾತಿ, ನನಗೆ ಅದರ ಅಗತ್ಯ ಇಲ್ಲ. ನಾನು ಹೇಗಾದರೂ ಗೆಲ್ತೇನೆʼʼ ಎಂದರು ಯತ್ನಾಳ್.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ | ಬೀಸೋ ದೊಣ್ಣೆಯಿಂದ 7 ದಿನ ತಪ್ಪಿಸಿಕೊಂಡ ಬೊಮ್ಮಾಯಿ ಸರ್ಕಾರ; ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದ ಯತ್ನಾಳ್