Site icon Vistara News

Ram Mandir: ಅಯೋಧ್ಯೆಯಲ್ಲಿ ಕರ್ನಾಟಕದ ಭಕ್ತರಿಗಾಗಿ ಯಾತ್ರಿ ನಿವಾಸ

ramammandir

ಬೆಂಗಳೂರು: ಕರ್ನಾಟಕದಿಂದ ಅಯೋಧ್ಯೆಗೆ ಹೋಗುವ ಭಕ್ತರಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅದರಂತೆ ರಾಘವನ ದರ್ಶನ ಪಡೆಯಲು ಕರ್ನಾಟಕದಿಂದ ತೆರಳುವ ಭಕ್ತರಿಗೆ ಅನುಕೂಲವಾಗಲು ಯಾತ್ರಿ ನಿವಾಸ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಕರ್ನಾಟಕದ ಯಾತ್ರಿ ನಿವಾಸ ತಲೆ ಎತ್ತಲಿದೆ. ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ತೆರಳಲಿದ್ದು, ಅವರಿಗಾಗಿ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕರ್ನಾಟಕ ಮುಜರಾಯಿ ಇಲಾಖೆ ಪತ್ರ ಬರೆದಿದೆ.

ಕರ್ನಾಟಕದಿಂದ ಬರುವ ಭಕ್ತರಿಗೆ ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಅಗಸ್ಟ್​​​ ತಿಂಗಳಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೂ ಮುನ್ನ 2020ರಲ್ಲಿ ಬಿಎಸ್​ ಯಡಿಯೂರಪ್ಪ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

ರಾಜ್ಯದ ಮನವಿಗೆ ಉತ್ತರ ಪ್ರದೇಶ ಸರ್ಕಾರದ ಹೌಸಿಂಗ್ ಬೋರ್ಡ್ ಸ್ಪಂದಿಸಿದೆ. ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿ ನಡೆಯುತ್ತಿದೆ. ಇನ್ನೊಂದು ವರ್ಷದಲ್ಲಿ ರಾಮಮಂದಿರದ ಬಳಿ ಅತಿಥಿ ಗೃಹ ತಲೆ ಎತ್ತಲಿದೆ. ರಾಜ್ಯದ ಭಕ್ತಾದಿಗಳ ಅನುಕೂಲಕ್ಕೆ ಸರಯೂ ನದಿ ಸಮೀಪದಲ್ಲಿ ಐದು ಎಕರೆ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮುಜರಾಯಿ ಇಲಾಖೆ ಅತಿಥಿ ಗೃಹ ನಿರ್ಮಿಸುತ್ತಿದೆ ಎಂದು ಬೋರ್ಡ್‌ ತಿಳಿಸಿದೆ.

ಇದನ್ನೂ ಓದಿ | Ram Mandir: ಕೃತಕ ಬುದ್ಧಿಮತ್ತೆ, ಡ್ರೋನ್‌ ತಂತ್ರಜ್ಞಾನ; ಮಂದಿರಕ್ಕೆ ಹೀಗಿದೆ ಸೆಕ್ಯುರಿಟಿ

ರಾಮಮಂದಿರದ ಬಳಿ ಸರಯೂ ನದಿಯ ಸಮೀಪದಲ್ಲೇ ಕರ್ನಾಟಕ ಅತಿಥಿ ಗೃಹ ನಿರ್ಮಾಣವಾಗಿ, ಆದಷ್ಟು ಬೇಗ ಕನ್ನಡಿಗರಿಗೆ ಸಿಗುವಂತಾಗಲಿ ಎಂಬುವುದು ಭಕ್ತರ ಆಶಯವಾಗಿದೆ.

Exit mobile version