ಯಲ್ಲಾಪುರ: ಕಾಡನ್ನೇ ಸರ್ವಸ್ವವನ್ನಾಗಿಸಿಕೊಂಡಿರುವ ಸಿದ್ಧಿ ಜನಾಂಗವು, ಯಾವುದೇ ತೊಂದರೆಯಾಗದಂತೆ ತಮ್ಮ ಮೂಲ ಜಾಗದಲ್ಲಿ ನಿರ್ಭೀತಿಯಿಂದ ವಾಸ ಮಾಡಬೇಕು. ನಮ್ಮ ಸರ್ಕಾರ ಸದಾ ನಿಮ್ಮ ಬೆಂಬಲಕ್ಕಿದ್ದು, ಈ ಸಮುದಾಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಯಲ್ಲಾಪುರ ತಾಲೂಕಿನಲ್ಲಿ (Yellapura News) ತಮ್ಮ ಗ್ರಾಮ ವಾಸ್ತವ್ಯದ ವೇಳೆ ತಿಳಿಸಿದರು.
ತಾಲೂಕಿನ ಮಾಗೋಡು ಗ್ರಾಮದ ಸಿದ್ಧಿ ಸಮುದಾಯದವರ ಮನೆಯಲ್ಲಿ ಗ್ರಾಮ ವಾಸ್ತವ್ಯ, ಸಂವಾದ ಹಾಗೂ ಸರ್ಕಾರದ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಬಹಳ ವರ್ಷಗಳಿಂದ ಅರಣ್ಯ ಹಕ್ಕು ಪತ್ರದಲ್ಲಿನ ನ್ಯೂನತೆಯಿಂದ ಅನುಭವಿಸುತ್ತಿರುವ ತೊಂದರೆಯನ್ನು ಈಗಾಗಲೇ ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ. ತುರ್ತಾಗಿ ಅದನ್ನು ನಮ್ಮ ಇಲಾಖೆಯ ವತಿಯಿಂದ ಬಗೆಹರಿಸಿ ಕೊಡುತ್ತೇನೆ” ಎಂದರು.
“ಈ ಹಿಂದೆ ಯಾವುದೇ ಸರ್ಕಾರ ಮಾಡದಂತಹ ಮಹತ್ತರ ಬದಲಾವಣೆಯಾಗಿ ನಮ್ಮ ಸರ್ಕಾರವು ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಶೇ.೩ ರಿಂದ ಶೇ.೭ಕ್ಕೆ ಏರಿಸಿದೆ. ಇದರಿಂದ ನಮ್ಮ ಸಮುದಾಯದ ಮಕ್ಕಳೂ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಿಗೆ ತಲುಪಲು ಸಹಾಯವಾಗುತ್ತದೆ. ಕೇವಲ ಆಶ್ವಾಸನೆ ನೀಡದೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದೊಡನೆ ಈ ಕೆಲಸವನ್ನು ಮಾಡಿದ್ದೇವೆ. ನಿಮ್ಮ ಮನವಿಗಳನ್ನು ಸಹ ಆಲಿಸಿದ್ದೇನೆ. ನಮ್ಮ ಇಲಾಖೆಯಿಂದ ಸಾಧ್ಯವಾದಷ್ಟು ಶೀಘ್ರದಲ್ಲಿ ಬಗೆಹರಿಸಲಾಗುವುದು. ಮುಂದೆಯೂ ಸಿದ್ಧಿ ಜನಾಂಗದವರೊಂದಿಗೆ ಸಂಪರ್ಕದಲ್ಲಿದ್ದು, ಆಗುಹೋಗುಗಳ ಬಗ್ಗೆ ನಿಗಾ ವಹಿಸುತ್ತೇನೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಪಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟನಕರ್, ನಂದೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ಕೋಣೆಮನೆ, ಉಪಾಧ್ಯಕ್ಷೆ ಮೀನಾಕ್ಷಿ ವೆಂಕಟ್ರಮಣ ಭಟ್, ಸದಸ್ಯೆ ಭವಾನಿ ಸಿದ್ಧಿ, ಲಕ್ಷ್ಮೀ ಸಿದ್ಧಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್. ಕಾಂತರಾಜು, ಕವಿತಾ ವಾರಂಗಲ್, ಅರುಣಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನಿರ್ದೇಶಕರಾದ ರಾಜಕುಮಾರ್ ಸ್ವಾಗತಿಸಿದರು. ಕೆಂಗೇರಿ ಮಲ್ಲಿಕಾರ್ಜುನ, ವಸಂತ ಲಕ್ಷ್ಮೀ ನಿರ್ವಹಿಸಿದರು.
ಇದನ್ನೂ ಓದಿ | ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಹೆಣಗಾಡುತ್ತಿದ್ದಾರೆ ಎಂದ ಪರಮೇಶ್ವರ್ ಹೇಳಿಕೆ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ