Site icon Vistara News

Yethinahole Project :‌ ಎತ್ತಿನಹೊಳೆ ಯೋಜನೆ ಅಧಿಕಾರಿಗಳ ಕಳ್ಳಾಟದ ವಿರುದ್ಧ ಸಿಡಿದೆದ್ದ MMCL ಕಂಪನಿ

Yettinahole project Dr HS Shetty

ಹಾಸನ: ಪಶ್ಚಿಮಘಟ್ಟ ಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ಪೂರ್ವದ ಏಳು ಜಿಲ್ಲೆಗಳಿಗೆ ಹರಿಸುವ ಎತ್ತಿನಹೊಳೆ ಯೋಜನೆ (Yethinalhole Project) 10 ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಳ್ಳುವುದೂ ಇಲ್ಲ, ನೀರು ಹರಿಯುವುದೂ ಇಲ್ಲ ಎಂಬ ಪರಿಸ್ಥಿತಿ ಇದೆ. ಆದರೆ, ಈ ಯೋಜನೆಯ ಹೆಸರಿನಲ್ಲಿ ನೂರಾರು ಕುಟುಂಬಗಳನ್ನು, ಕಂಪನಿಗಳನ್ನು, ಕಾಫಿ ತೋಟಗಳನ್ನು ಮುಳುಗಿಸುವ, ಧ್ವಂಸಗೊಳಿಸುವ ಹಠ ತೊಟ್ಟಂತೆ ಕಾಣುತ್ತಿದೆ.

ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮ (Vishweshwarayya Jalabhagya Nigama) ನಡೆಸುತ್ತಿರುವ ಯೋಜನೆಯ ವೆಚ್ಚ 2014ರಲ್ಲಿದ್ದ 12.9 ಸಾವಿರ ಕೋಟಿಯಿಂದ 25 ಸಾವಿರ ಕೋಟಿಗೇರಿದೆ. ಹಾಸನ ಜಿಲ್ಲೆಯ ಅತ್ಯಂತ ಪ್ರಶಾಂತ ಕಾಡುಗಳನ್ನು ಕುಲಗೆಡಿಸಿ, ಕಾಫಿ ತೋಟಗಳನ್ನು ನಾಶ ಮಾಡಿ, ರಸ್ತೆಗಳನ್ನು ಒಡೆದು ಸಂಚಾರಕ್ಕೆ ತೊಂದರೆ ಮಾಡಿದ್ದು ಬಿಟ್ಟರೆ ಈ ಯೋಜನೆಯಿಂದ ಆಗಿರುವ ಲಾಭ ನಯಾ ಪೈಸೆಯೂ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರನ್ನು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಅಲ್ಲಿನ ಅವ್ಯವಸ್ಥೆಯನ್ನು ಗಮನಿಸಿದರೆ ನಿಗದಿತ ಭಾಗಕ್ಕೆ ಒಂದು ಹನಿ ನೀರು ಕೂಡಾ ಹರಿಯುವ ಭರವಸೆ ಕಾಣಿಸುತ್ತಿಲ್ಲ.

ಉದ್ಯಮಿ ಎಚ್‌.ಎಸ್‌. ಶೆಟ್ಟಿ ಜಮೀನಿನ ವಿಚಾರದಲ್ಲಿ ಅಧಿಕಾರಿಗಳ ಚೆಲ್ಲಾಟ

ಎತ್ತಿಹೊಳೆ ಯೋಜನೆಯ ಹೆಸರಿನಲ್ಲಿ ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆಡಿದ್ದೇ ಆಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ ಬರುವ ಹೆಗ್ಗದ್ದೆ, ಜಾಲಹಳ್ಳಿ ಮತ್ತು ಕುಂಬರಡಿ ಪ್ರದೇಶದಲ್ಲಿ ಮೈಸೂರು ಮರ್ಕಂಟೈಲ್‌ ಕಂಪನಿ ಲಿಮಿಟೆಡ್‌ (MYSORE MERCANTILE CO LTD-MMCL) ಕಂಪನಿಗೆ ಸೇರಿದ ಜಮೀನು ಇದೆ. ಡಾ.ಎಚ್‌.ಎಚ್‌. ಶೆಟ್ಟಿ ಅವರಿಗೆ ಸೇರಿದ ಈ ಜಮೀನಿನಲ್ಲೇ ಎತ್ತಿನಹೊಳೆ ಯೋಜನೆಯ ಪೈಪುಗಳು ಹಾದು ಹೋಗಲು ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ರಸ್ತೆಗಳನ್ನು ಒಡೆದು ಹಾಕಲಾಗಿದೆ. ಅತ್ಯಂತ ಅಪಾಯಕಾರಿಯಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇದನ್ನು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲೇ ಇಲ್ಲ. ಅದರ ಜತೆಗೆ ಕಂಪನಿಗೆ ಸೇರಿದ 10 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ದುಷ್ಟ ತಂತ್ರಗಳನ್ನು ಮಾಡುತ್ತಿದೆ. ಇಡೀ ಯೋಜನೆಗೆ ಇನ್ನೂ ಭಾರಿ ಪ್ರಮಾಣದ ಭೂ ಸ್ವಾಧೀನ ಮಾಡಬೇಕಾಗಿದೆ. ಕಾಮಗಾರಿಗಳು ಇನ್ನೂ ಕೆಲವು ಭಾಗದಷ್ಟೂ ಮುಗಿದಿಲ್ಲ. ಆಗಿರುವ ಕಾಮಗಾರಿಗಳೂ ಅಧ್ವಾನವೇ. ಆದರೆ, ಎಂಎಂಸಿಎಲ್‌ ಕಂಪನಿಗೆ ಸೇರಿದ 10 ಗುಂಟೆ ಜಾಗವನ್ನು ವಶಪಡಿಸಿಕೊಳ್ಳುವುದೇ ಇಡೀ ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶ ಎಂಬಂತೆ ವರ್ತಿಸಲಾಗುತ್ತಿದೆ.

ಪರಿಸರ ಹಾಳಾಯಿತು, ಈಗ ಜೀವವೇ ಅಪಾಯದಲ್ಲಿದೆ ಎನ್ನುತ್ತಾರೆ ಡಾ.ಎಚ್‌.ಎಸ್‌. ಶೆಟ್ಟಿ

ನಮ್ಮ ಜಮೀನಿನ ಮೇಲ್ಭಾಗದಲ್ಲಿ ಐವತ್ತು ಅಡಿ ಎತ್ತರದಲ್ಲಿ ಪೈಪ್‌ಲೈನ್‌ ಗಳು ಹಾದು ಹೋಗಿವೆ. ಈ ಪೈಪ್‌ಲೈನ್‌ ಕಾಮಗಾರಿಯಿಂದಾಗಿ ಗುಡ್ಡಗಳು ಕುಸಿದಿವೆ. ಈ ಪೈಪ್‌ ಲೈನ್‌ನ ಕೆಳಭಾಗದಲ್ಲೇ ಆ ಭಾಗಕ್ಕೆ ಹೋಗುವ ರಸ್ತೆ ಇದೆ. ಇದರ ಮೂಲಕ ಕಂಪನಿಯ ನೌಕರರು, ಜನಸಾಮಾನ್ಯರು ಸಾಗಿ ಹೋಗುತ್ತಾರೆ. ಅವರಿಗೆ ಯಾವಾಗ ಅಪಾಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಿಜವೆಂದರೆ, ಯೋಜನೆಯಿಂದ ಪರಿಸರಕ್ಕೆ ದೊಡ್ಡ ಮಟ್ಟದ ಹಾನಿ ಆಗಲೇ ಸಾಕಷ್ಟು ಆಗಿದೆ. ಜನರ ತೋಟ, ಜಮೀನುಗಳು ನಾಶವಾಗಿವೆ. ಆದರೆ, ಈಗ ಜೀವ ಹಾನಿಯ ಅಪಾಯವೇ ಎದುರಾಗಿದೆ. ಆದರೆ, ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹೇಳುತ್ತಾರೆ ಎಂಎಂಸಿಎಲ್‌ ಕಂಪನಿಯ ಮುಖ್ಯಸ್ಥರಾಗಿರುವ ಡಾ.ಎಚ್‌.ಎಸ್‌. ಶೆಟ್ಟಿ.

ಇಲ್ಲಿ ಮನೆಗಳಿವೆ. ಜನವಸತಿ ಇದೆ. ನಾಳೆ ಈ ಪೈಪ್‌ ಲೈನ್‌ಗಳು, ಗುಡ್ಡಗಳು ಶೇಕಡಾ 100ಕ್ಕೆ ನೂರು ಒಡೆದು ಹೋಗುತ್ತವೆ. ಹಾಗಿದ್ದರೆ ಈ ಭಾಗದ ಜನರ ಸುರಕ್ಷತೆಯನ್ನು ಹೇಗೆ ಖಾತ್ರಿ ಪಡಿಸುತ್ತೀರಿ ಎಂದು ಕೇಳಿದರೆ ಯಾರೂ ಉತ್ತರಿಸುವುದಿಲ್ಲ. ನೀರಿನ ಯೋಜನೆಯ ಹೆಸರಿನಲ್ಲಿ ಪಶ್ಚಿಮ ಘಟ್ಟ, ಜನವಸತಿ, ತೋಟಗಳಿಗೆ ಅಪಾಯ ಉಂಟು ಮಾಡಲಾಗುತ್ತಿದೆ ಎಂದು ಎಚ್‌.ಎಸ್‌. ಶೆಟ್ಟಿ ಅವರು ಹೇಳುತ್ತಾರೆ.

ಇದನ್ನೂ ಓದಿ : Yettinahole Project: ಅಕ್ರಮದ ಹೊಳೆಯಾದ ಎತ್ತಿನಹೊಳೆ ಪ್ರಾಜೆಕ್ಟ್; ಭ್ರಷ್ಟಾಚಾರದ ಹಿಂದಿದೆಯಾ ಮಾಫಿಯಾ?

ಇಲ್ಲಿ ಯಾವ ಎಂಜಿನಿಯರ್‌ ಗಳೂ ಇಲ್ಲ. ಕೇವಲ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಳ್ಳಾಟವಾಡುತ್ತಿದ್ದಾರೆ. ನಾವು ಈ ಭಾಗದಲ್ಲಿ ಹಾಕಿರುವ ಸಿಸಿ ಟಿವಿಯನ್ನು ಒಡೆದು ಹಾಕಲಾಗಿದೆ. ತಮ್ಮ ದುಷ್ಟಕೃತ್ಯಗಳು ಬಯಲಾಗುವ ಭಯದಿಂತ ಈ ಕೃತ್ಯ ಎಸಗಲಾಗಿದೆ ಎನ್ನುವುದು ಡಾ.ಎಚ್‌.ಎಸ್‌. ಶೆಟ್ಟಿ ಅವರ ಆರೋಪ.

ಇಲ್ಲಿ ಯಾವೊಬ್ಬ ಎಂಜಿನಿಯರ್‌ ಕೂಡಾ ಕೆಲಸ ಮಾಡುತ್ತಿಲ್ಲ. ಒಂದು ಕಾಮಗಾರಿ ನಡೆದಾಗ ಎಂಜಿನಿಯರ್ಸ್‌ ಡೈರಿ ಮೆಂಟೇನ್‌ ಮಾಡುತ್ತಾರೆ. ನಾನು ಆರ್‌ಟಿಐ ಮೂಲಕ ಅದನ್ನು ಕೇಳಿದೆ. ಆದರೆ, ಇದು ನಿಮಗೆ ಸಂಬಂಧಿಸಿದ್ದಲ್ಲ ಎಂದು ಹೇಳಲಾಯಿತು. ನಿಜವೆಂದರೆ ಅವರ ಬಳಿ ಯಾವ ಡೈರಿಯೂ ಇಲ್ಲ. ಕೊಡಬೇಕು ಎಂದರೆ ಇನ್ನು ಬರೆದುಕೊಡಬೇಕಷ್ಟೇ ಎನ್ನುತ್ತಾರೆ ಎಚ್‌.ಎಸ್‌. ಶೆಟ್ಟಿ.

ತಮ್ಮ ಕಳ್ಳಾಟ ಬಯಲಾಗುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಜಮೀನಿನಲ್ಲಿದ್ದ ನಮ್ಮ ಸಿಸಿಟಿವಿಗಳನ್ನು ಒಡೆದು ಹಾಕಿದರು. ನಾನು ಹೈಕೋರ್ಟ್‌ ಮೊರೆ ಹೋದಾಗ ಹೈಕೋರ್ಟ್‌ ಕೇವಲ ನಾಲ್ಕು ದಿನದಲ್ಲಿ ಅವುಗಳನ್ನು ಮರು ಸ್ಥಾಪಿಸಬೇಕು ಎಂದು ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮಕ್ಕೆ ಆದೇಶ ಕೊಟ್ಟಿತು. ಅವರು ಕೋರ್ಟ್‌ ಆದೇಶವನ್ನು ಕೂಡಾ ಮಾನ್ಯ ಮಾಡಲಿಲ್ಲ. ಕೊನೆಗೆ ನಾನೇ ಅವುಗಳನ್ನು ಮರುಸ್ಥಾಪನೆ ಮಾಡಿದೆ ಎಂದು ಶೆಟ್ಟರು ಹೇಳುತ್ತಾರೆ. ಹಾಗೆ ಮರುಸ್ಥಾಪನೆ ಮಾಡಿದಾಗಲೂ ಎಂಜಿನಿಯರ್‌ಗಳು ಉದ್ಧಟತನ ಮೆರೆದಿದ್ದಾರೆ. ಅವುಗಳನ್ನು ತೆಗೆಯಬೇಕು ಎಂದು ನನಗೇ ಹತ್ತು ಪತ್ರ ಬರೆದಿದ್ದಾರೆ ಎಂದು ಶೆಟ್ಟಿ ಅವರು ಹೇಳುತ್ತಾರೆ.

ಹೈಡ್ರೋ ಪ್ರಾಜೆಕ್ಟ್‌ಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳು

ಈ ಭಾಗದಲ್ಲಿ ಎಂಎಂಸಿಎಲ್‌ಗೆ ಸೇರಿದ ಹೈಡ್ರೋ ಪ್ರಾಜೆಕ್ಟ್‌ ಒಂದಿದೆ. ಅದಕ್ಕೆ ಪರಿಸರ ಇಲಾಖೆಯೂ ಸೇರಿದಂತೆ ಸುಮಾರು 10 ಪರವಾನಗಿಗಳನ್ನು ಪಡೆದು ಸ್ಥಾಪಿಸಲಾಗಿದೆ. ಆದರೆ, ಈಗ ನೀವು ನಡೆಸುತ್ತಿರುವ ಹೈಡ್ರೋ ಪ್ರಾಜೆಕ್ಟ್‌ ಅಕ್ರಮ ಎಂದು ಆರೋಪಿಸಿ ಸುಮಾರು 50 ಪತ್ರಗಳನ್ನು ಬರೆದಿದ್ದಾರೆ. ತಮ್ಮ ಕಡೆಯಿಂದ ಈ ಹಿಂದೆ ನೀಡಲಾಗಿರುವ ಅನುಮತಿಯನ್ನೇ ಹಿಂದಕ್ಕೆ ಪಡೆದು ಹಿಂಸೆ ನೀಡುತ್ತಿದ್ದಾರೆ. ನಾವು ಏನೇ ವಿವರಣೆ ಕೇಳಿದರೆ ನೀವು ಹೈಡ್ರೋ ಪ್ರಾಜೆಕ್ಟ್‌ ಹೊಂದಿರುವುದರಿಂದ ಈ ಪ್ರಶ್ನೆ ಕೇಳುತ್ತಿದ್ದೀರಿ ಎಂಬ ಸಬೂಬು ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಡಾ.ಎಚ್‌.ಎಸ್. ಶೆಟ್ಟಿ.

ಇಲ್ಲಿ ಕೆಲವೊಂದು ಮನೆಗಳ ಅಡಿಭಾಗದಿಂದಲೇ ಪೈಪ್‌ ಗಳನ್ನು ಹಾಕಲಾಗಿದೆ. ಕೇಳಿದರೆ ಮನೆ ಬಿದ್ದರೆ ಕಟ್ಟಿ ಕೊಡುತ್ತೇವೆ ಎನ್ನುತ್ತಾರೆ. ಜಮೀನುಗಳಲ್ಲಿ ಪೈಪ್‌ಲೈನ್‌ ಹಾಕಿದ್ದಾರೆ ಪರಿಹಾರ ಕೊಟ್ಟಿಲ್ಲ. ಹಲವಾರು ಜನರು ನನ್ನ ಬಳಿ ಬಂದು ದೂರು ಹೇಳುತ್ತಾರೆ. ನಾನು ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದೆ. ಆದರೆ, ಆಗ ಎಂಎಂಸಿಎಲ್‌ ಒಂದು ಇಂಟ್ರೆಸ್ಟೆಡ್‌ ಪಾರ್ಟಿ, ಅವರು ನಮ್ಮ ಬಳಿ ದುಡ್ಡು ಕೇಳುತ್ತಿದ್ದಾರೆ ಎಂಬ ಸುಳ್ಳು ಹೇಳುತ್ತಾರೆ, ಅರ್ಜಿ ತಿರಸ್ಕಾರಗೊಳ್ಳುವಂತೆ ಮಾಡುತ್ತಾರೆ. ಎಲ್ಲರೂ ಪೂರ್ವಗ್ರಹಪೀಡಿತರಂತೆ ವರ್ತಿಸುತ್ತಾರೆ. ಜಿಲ್ಲಾಧಿಕಾರಿಗಳು, ಎಸ್ಪಿ ಎಲ್ಲರಿಗೂ ಒಂದು ಪೂರ್ವಗ್ರಹವಿದೆ, ಸಚಿವರಿಗೆ ಪೂರ್ವಗ್ರಹ ಎನ್ನುವುದು ಡಾ.ಎಚ್‌.ಎಸ್‌. ಶೆಟ್ಟಿ ಅವರ ಆರೋಪ. ಇದರ ಜತೆಗೆ ಈ ಕಳ್ಳಾಟದ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

Exit mobile version