ಮಂಗಳೂರು: ಎತ್ತಿನಹೊಳೆ ಯೋಜನೆಯಿಂದ (Yettinahole project) ನೇತ್ರಾವತಿ ನದಿ (Netravati river) ಮೂಲ ಬತ್ತಿಹೋಗಿ ನದಿಯಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದ್ದ ಹೋರಾಟಗಾರರು ಇದೀಗ ತೊಟ್ಟು ನೀರಿಲ್ಲದೆ ಬರಿದಾಗಿರುವ ನದಿಯಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಿ ರಾಜಕಾರಣಿಗಳನ್ನು ಅಣಕಿಸಿದ್ದಾರೆ.
ನೀರಿಲ್ಲದೇ ಬತ್ತಿ ಹೋಗಿರುವ ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ವೀರಪ್ಪ-ಸದಾನಂದ ಕ್ರೀಡಾಂಗಣ ಎಂದು ಫಲಕ ಅಳವಡಿಸಿರುವ ನೇತ್ರಾವತಿ ಹೋರಾಟ ಸಮಿತಿಯವರು ಎತ್ತಿನ ಹೊಳೆ ಕಪ್ ಎಂಬ ಕ್ರಿಕೆಟ್ ಪಂದ್ಯಾಟದ ಅಣಕು ಪ್ರದರ್ಶನ ನಡೆಸಿದ್ದಾರೆ.
ಎತ್ತಿನ ಹೊಳೆ ಯೋಜನೆ ಜಾರಿ ಮಾಡಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹಾಗೂ ಸದಾನಂದ ಗೌಡರ ಹೆಸರಿನಲ್ಲಿ ಈ ಅಣಕು ಪ್ರದರ್ಶನ ಮಾಡಲಾಗಿದೆ.
ಯೋಜನೆ ಆರಂಭ ಆಗುವ ಮೊದಲೇ ಇಲ್ಲಿ 24 ನೀರು ನೀರು ಸಿಗಲಾರದು. ಮುಂದೆ ಯೋಜನೆಯಿಂದ ನೇತ್ರಾವತಿ ಬತ್ತಿ ಹೋಗಲಿದೆ ಎಂದು ಜಿಲ್ಲೆಯ ಹೋರಾಟಗಾರರು ಎಚ್ಚರಿಸಿದ್ದರು. ಯೋಜನೆ ಇನ್ನೂ ಪೂರ್ಣವಾಗದೇ ಇದ್ದರೂ ನೇತ್ರಾವತಿಯ ಜಲ ಮೂಲವಾಗಿದ್ದ ಹಲವು ಉಪನದಿಗಳನ್ನು ಈಗಾಗಲೇ ತಿರುಗಿಸಲಾಗಿದೆ. ಹೀಗಾಗಿ ನದಿಗೆ ಬೇಸಗೆಯಲ್ಲೂ ಅಲ್ಪ ಸ್ವಲ್ಪ ಹರಿದು ಬರುತ್ತಿದ್ದ ನೀರು ಸಂಪೂರ್ಣ ನಿಂತು ಹೋಗಿದೆ. ಈ ಕಾರಣದಿಂದ ಇಂದು ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನೇತ್ರಾವತಿ ಬತ್ತಿ ಹೋಗಲು ಕಾರಣ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಆಟಗಾರರು ಯಾರು?
ಈ ಯೋಜನೆಗೆ ಸಹಕರಿಸಿದ ಹಾಗೂ ವಿರೋಧ ವ್ಯಕ್ತಪಡಿಸದ ಜಿಲ್ಲೆಯ ಶಾಸಕರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರ ಮುಖವಾಡ ಧರಿಸಿ ಆಟಗಾರರನ್ನಾಗಿ ಬಿಂಬಿಸಲಾಗಿತ್ತು. ಗೆದ್ದವರಿಗೆ ಮೂರು ಬಕೆಟ್ ನೀರು, ರನ್ನರ್ ಅಪ್ ಆದವರಿಗೆ ಎರಡು ಬಕೆಟ್ ನೀರು ಹಾಗೂ ಮ್ಯಾನ್ ಆಫ್ ದ ಮ್ಯಾಚ್‌ಗೆ ಎರಡು ಲೀಟರ್ ನೀರಿನ ಬಹುಮಾನ ಕೂಡಾ ಘೋಷಿಸಲಾಯಿತು. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ ಜಿಲ್ಲೆಯ ಜೀವನದಿಯನ್ನು ಬಲಿ ಪಡೆದಿಕೊಂಡ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ: ಸರ್ಕಾರದ ಚಿಂತನೆ ಏನು?
ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಈ ಭಾಗದ ಪ್ರದೇಶಗಳಿಗೆ (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ) ಪೂರೈಸಲಾಗುವುದು ಎನ್ನುವುದು ಸರ್ಕಾರದ ಚಿಂತನೆಯಾಗಿದೆ.
ಪರಿಸರ ಪರದ ಹೋರಾಟಗಾರರ ನಿಲುವೇನು?
ಪಶ್ಚಿಮಾಭಿಮುಖವಾಗಿ ಸುಮಾರು 80 ಕಿ.ಮೀ. ಉದ್ದ, 18 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ಕಾಯ್ದಿರಿಸಿದ ದಟ್ಟ ಮಳೆಕಾಡುಗಳ ಗರ್ಭದಲ್ಲಿ ಎತ್ತಿನಹಳ್ಳ, ಮೂರು ಉಪ ಹೊಳೆಗಳು, ಕಾಡುಮನೆ ಹೊಳೆ, ಕೇರಿಹೊಳೆ, ಹೊಂಗಡಹಳ್ಳ ಹರಿಯುತ್ತವೆ. ಇವುಗಳ ನೀರನ್ನು ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ಮಳೆ ಭರಿಸುವ ಮಳೆಕಾಡುಗಳೆಂದೇ ಗುರುತಿಸಲಾಗುವ ಪಶ್ಚಿಮಘಟ್ಟ ನಾಶವಾದರೆ, ಮಳೆ ಕಡಿಮೆಯಾಗಿ ಎತ್ತಿನಹಳ್ಳ ಹಾಗೂ ಇತರ ಎಲ್ಲ ಹಳ್ಳಗಳಲ್ಲಿ ನೀರು ಇಲ್ಲವಾಗುತ್ತದೆ. ಆಗ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜು ಮಾಡುವುದಿರಲಿ, ಮಲೆನಾಡಿನಲ್ಲಿಯೇ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತದೆ ಎಂದು ಪ್ರತಿಪಾದಿಸಿರುವ ರೈತರು ಮತ್ತು ಪರಿಸರವಾದಿಗಳು, ಈ ಯೋಜನೆ ಅವೈಜ್ಞಾನಿಕವಾಗಿದ್ದು ಪಶ್ಚಿಮಘಟ್ಟವನ್ನು ಸರ್ವನಾಶ ಮಾಡುವುದರಿಂದ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : Yettinahole Project: ಎತ್ತಿನಹೊಳೆ ಯೋಜನೆಯಲ್ಲಿ 100 ಕೋಟಿ ರೂ. ದುರ್ಬಳಕೆ; ಶಾಸಕ ಶಿವಲಿಂಗೇಗೌಡ ಸೇರಿ 12 ಅಧಿಕಾರಿಗಳ ವಿರುದ್ಧ ದೂರು
yettinahole-project: Netravati activists chides politicians by arranging cricket match in empty netravati river