ವಿಜಯನಗರ: ಹಂಪಿಯಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಡಗರದಿಂದ ಆಚರಿಸಲಾಯಿತು.
ಶ್ವಾಸ ಗುರು ವಚನಾನಂದ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ 8ನೇ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಐತಿಹಾಸಿಕ ಸ್ಮಾರಕ ಮಧ್ಯೆ ಯೋಗ ಕಾರ್ಯಕ್ರಮ ಜನಮನ ಸೆಳೆಯಿತು.
ಯೋಗಕ್ಕೆ ಆಗಮಿಸಿರುವ ಸುಮಾರು ಐದು ಸಾವಿರ ಜನರಿಗೆ ಯೋಗ ಮಾಡಲು ಹಂಪಿಯ ಬಸವಣ್ಣ ಮಂಟಪದಿಂದ ಬಿಷ್ಟಪ್ಪಯ್ಯ ಗೋಪುರದವರೆಗೆ ವ್ಯವಸ್ಥೆ ಮಾಡಲಾಗಿತ್ತು.
ಬಸ್ ಸೌಲಭ್ಯ
ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲೆಯಿಂದ ಆಗಮಿಸುವ ಜನರಿಗೆ ಹೊಸಪೇಟೆ ಸೇರಿದಂತೆ ಇತರ ಕಡೆಯಿಂದ 35 ಸರಕಾರಿ ಬಸ್ ಮತ್ತು 65 ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಉಪಾಹಾರದ ವ್ಯವಸ್ಥೆ
ಯೋಗಕ್ಕೆ ಆಗಮಿಸಿರುವ ಸಾವಿರಾರು ಜನರಿಗೆ ತರಹೇವಾರಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇಡ್ಲಿ, ಉಪ್ಪಿಟ್ಟು, ದೋಸೆ, ಕೇಸರಿಬಾತ್, ಕಟ್ ಫ್ರೂಟ್, ಜ್ಯೂಸ್ ವ್ಯವಸ್ಥೆ ಮಾಡಲಾಗಿದೆ..
ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಮೈಸೂರಿನಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿಯವರು ಯೋಗ ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಹಂಪಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ , ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಸಂಸದ ದೇವೇಂದ್ರಪ್ಪ, ಡಿಸಿ ಅನಿರುದ್ಧ ಶ್ರಾವಣ್ ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಭಾಗವಹಿಸಿದ್ದಾರೆ.
ಜಗತ್ತಿನಲ್ಲಿ ಯೋಗ ದಿನಾಚರಣೆ
ಯೋಗಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ವಿಶ್ವಸಂಸ್ಥೆ ಸೇರಿ ಇಡಿ ಜಗತ್ತಿನಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಯೋಗ ಬೇರೆ, ಆಸನ ಬೇರೆ ಅನ್ನೋದು ಕೆಲ ಜನಕ್ಕೆ ಗೊತ್ತಿರಲಿಲ್ಲ. ಅನೇಕ ವಿದೇಶಿ ಆಕ್ರಮಣದ ಆದರೂ ಭಾರತ ಇಷ್ಟು ಗಟ್ಟಿಯಾಗಿ ಉಳಿದೆ ಎಂದರೆ ಅದಕ್ಕೆ ಯೋಗ ಕಾರಣ ಎಂದು ಹೇಳಿದರು.
ಪ್ರಾಣಾಯಾಮ, ಯೋಗಾಸನದಿಂದ ದೇಹ, ಮನಸ್ಸಿನ ಆರೋಗ್ಯ ವೃದ್ಧಿ ಸಾಧ್ಯ. ಜಗತ್ತಿನ ಬಹುತೇಕ ಭಾಗದಲ್ಲಿ ಇಂದು ಹಗಲು ಹೆಚ್ಚಾಗಿರುತ್ತದೆ, ಹೀಗಾಗಿ ಯೋಗ ದಿನಾಚರಣೆ ಇಂದೇ ಮಾಡಬೇಕು ಅಂತ ಘೋಷಣೆ ಮಾಡಿದ್ದಾರೆ. ಯೋಗವನ್ನು ನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಳ್ಳೋಣ ಎಂದರು.