ಮೈಸೂರು: ಯೋಗವನ್ನು ಜೀವನದ ಒಂದು ಭಾಗವಾಗಿಯಷ್ಟೆ ಪರಿಗಣಿಸಿದರೆ ಸಾಲದು. ಯೋಗ ಎನ್ನುವುದು ಜೀವನದ ಮಾರ್ಗವಾಗಬೇಕು. ಈ ಮೂಲಕ ವಿಶ್ವಶಾಂತಿಗೆ ನಮ್ಮ ಕೊಡುಗೆ ನೀಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ೮ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ನೇರವಾಗಿ ಭಾಗವಹಿಸಿದ್ದ ಸುಮಾರು ೧೫ ಸಾವಿರ ಜನರು ಹಾಗೂ ವರ್ಚುವಲ್ ಆಗಿ ವಿಶ್ವದಾದ್ಯಂತ ಭಾಗಿಯಾಗಿರುವ ಕೋಟ್ಯಂತರ ಜನರನ್ನುದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ | Horoscope Today | ಅಂತಾರಾಷ್ಟ್ರೀಯ ಯೋಗದ ದಿನವಾದ ಇಂದು ಯಾರ ಯೋಗ ಹೇಗಿದೆ?
ಯತ್ಪಿಂಡೆ, ತತ್ ಬ್ರಹ್ಮಾಂಡೆ ಎಂಬ ಮಾತಿದೆ. ಅಂದರೆ, ಅಣುವಿನಲ್ಲಿರುವ ಅಂಶವೇ ಇಡೀ ಬ್ರಹ್ಮಾಂಡದಲ್ಲೂ ಇದೆ ಎಂದರ್ಥ. ಯೋಗದಿಂದ ನಮ್ಮನ್ನು ನಾವು ಅರಿಯುತ್ತೇವೆ. ನಮ್ಮ ಆತ್ಮದರ್ಶನವಾಗುತ್ತದೆ. ಇದರ ಮೂಲಕ ಇಡೀ ವಿಶ್ವದ ದರ್ಶನವಾಗುತ್ತದೆ. ಇಡೀ ವಿಶ್ವವೇ ಒಂದು ಅಂಶ ಎಂದು ಪರಿಗಣಿಸಿದಾಗ ವಿಶ್ವದ ಬೇರೆ ಭಾಗಗಳ ಸಮಸ್ಯೆಯ ಅರಿವಾಗುತ್ತದೆ. ವಿಶ್ವಕ್ಕೆ ತೊಂದರೆಯಾಗದಂತೆ ಜೀವಿಸುವ ಮಾರ್ಗ ಕಾಣುತ್ತದೆ. ಈ ಸಮಾನ ಆತ್ಮದರ್ಶನದಿಂದಾಗಿ ಜಾಗತಿಕ ಶಾಂತಿ ಮೂಡುತ್ತದೆ. ಈ ರೀತಿಯಾಗಿ ಯೋಗವು ದೇಶ ಹಾಗೂ ವಿಶ್ವವನ್ನು ಜೋಡಿಸುತ್ತದೆ. ಈ ಮೂಲಕ ಯೋಗವು ಸಮಸ್ಯೆ ಪರಿಹಾರಕವಾಗುತ್ತದೆ ಎಂದರು.
ದೇಶ ೭೫ನೇ ಸ್ವಾತಂತ್ರ್ಯ ವರ್ಷಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಯೋಗ ದಿನ ಆಚರಿಸುತ್ತಿದ್ದೇವೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ ನೀಡಿದ ಶಕ್ತಿಯೇ ನಮಗೆ ಇಂದೂ ಯೋಗ ದಿನ ಆಚರಣೆಗೆ ಸ್ಫೂರ್ತಿ ನೀಡುತ್ತಿದೆ. ಇಂದು ೭೫ ಐತಿಹಾಸಿಕ ಸ್ಥಾನಗಳಲ್ಲಿ ಯೋಗದಿನ ನಡೆಯುತ್ತಿದೆ. ಈ ಸ್ಥಾನಗಳು ಸಾಂಸ್ಕೃತಿಕ ಶಕ್ತಿಯ ಕೇಂದ್ರಗಳು. ಈ ಎಲ್ಲ ಕೇಂದ್ರಗಳೂ ಯೋಗ ದಿನದ ಕಾರಣಕ್ಕೆ ಒಂದಾಗುತ್ತಿವೆ. ಯೋಗವು ಇಡೀ ದೇಶವನ್ನು ಒಂದುಗೂಡಿಸುತ್ತಿದೆ ಎಂದು ಮೋದಿ ಹೇಳಿದರು.
ಗಾರ್ಡಿಯನ್ ರಿಂಗ್ ಆಫ್ ಯೋಗ ಪ್ರಯೋಗ ಇಡೀ ವಿಶ್ವದಲ್ಲಿ ಇಂದು ನಡೆಯುತ್ತಿದೆ. ಸೂರ್ಯೋದಯದ ಜತೆಗೆ, ಸೂರ್ಯನ ವೇಗದ ಜತೆಗೆ ಜನರು ಜೋಡಿಸಿಕೊಳ್ಳುತ್ತಿದ್ದಾರೆ. ಯೋಗ ಕೇವಲ ಜೀವನದ ಭಾಗವಲ್ಲ. ಇದು ಜೀವನ ಮಾರ್ಗ. ಹಾಗೆಂದರೆ, ನಮ್ಮ ದಿನ ಯೋಗದ ಜತೆಗೆ ಆರಂಭವಾಗಬೇಕು. ಇದಕ್ಕಿಂತ ಉತ್ತಮ ಆರಂಭ ಯಾವುದೂ ಬೇಕಿಲ್ಲ ಎಂದು ಬಣ್ಣಿಸಿದರು.
ಯೋಗವನ್ನು ದಿನದ ಯಾವುದಾದರೂ ಒಂದು ಸಮಯ ಹಾಗೂ ಸ್ಥಳಕ್ಕೆ ಮೀಸಲಿಡಬೇಕಿಲ್ಲ. ಕೆಲವು ಜನರು ಕಚೇರಿಯಲ್ಲೂ ಯೋಗ ಮಾಡುತ್ತಾರೆ. ಕೆಲಸದಲ್ಲಿ ಎಷ್ಟೇ ಒತ್ತಡವಿದ್ದರೂ ಕೆಲವು ನಿಮಿಷಗಳ ಯೋಗವು ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಯೋಗವನ್ನು ಹೆಚ್ಚುವರಿ ಕೆಲಸದಂತೆ ಭಾವಿಸದೆ, ನಮ್ಮ ಜೀವನ, ಆಹಾರ, ನಡವಳಿಕೆಯ ಭಾಗವಾಗಿಸಿಕೊಳ್ಳಬೇಕು. ಯೋಗವನ್ನು ಜೀವಿಸಲು ಆರಂಭಿಸಿದಾಗ, ಯೋಗ ಎಂಬುದು ಒಂದು ಕೆಲಸವಾಗುವುದಿಲ್ಲ. ಯೋಗ ಎನ್ನುವುದು ಜೀವನವನ್ನು ಸಂಭ್ರಮಿಸುವ ಮಾಧ್ಯಮವಾಗುತ್ತದೆ ಎಂದರು.
ಯೋಗದ ಕುರಿತು ಯುವಜನತೆ ನವೀನ ಆಲೋಚನೆಗಳನ್ನು ಹೊಂದಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಯುವಕರು ಇಂದು ಅನೇಕ ಹೊಸ ಯೋಜನೆಗಳೊಂದಿಗೆ ಬಂದಿದ್ದಾರೆ. ಅದಕ್ಕಾಗಿಯೇ ಸ್ಟಾರ್ಟಪ್ ಯೋಗ, ಇನೊವೇಟಿವ್ ಡಿಜಿಟಲ್ ಮಿಷನ್ ಪ್ರದರ್ಶನ ನಡೆಯುತ್ತಿದೆ. ಇಂತಹ ಪ್ರಯತ್ನಗಳು ಹೆಚ್ಚೆಚ್ಚು ನಡೆಯಬೇಕು. ಯೋಗದ ಈ ಯಾತ್ರೆ ಅನಂತ ಭವಿಷ್ಯದ ದೃಷ್ಟಿಯಿಂದ ನಿರಂತರ ನಡೆಯುತ್ತಿರಲಿ. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ ಎನ್ನುವಂತೆ, ಇಡೀ ವಿಶ್ವವನ್ನು ಸ್ವಸ್ಥ ಹಾಗೂ ಶಾಂತಗೊಳಿಸುವ ಸಲುವಾಗಿ ವಿಶ್ವ ಯೋಗ ದಿನವನ್ನು ಆಚರಿಸೋಣ. ಯೋಗದೊಂದಿಗಿನ ಅನಂತ ಸಂಭವನೀಯತೆಯನ್ನು ಸಾಕಾರಗೊಳಿಸೋಣ ಎಂದು ಪ್ರಧಾನಿ ಕರೆ ನೀಡಿದರು.
ಇದನ್ನೂ ಓದಿ | Yoga Day 2022 | ಜೀವನನ್ನು ಶಿವನನ್ನಾಗಿ ಮಾಡುವ ಮಹಾ ಮಾರ್ಗವೇ ಈ ಯೋಗ