ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (Yoga Day 2023) ವಿಸ್ತಾರ ನ್ಯೂಸ್ ಕೈಜೋಡಿಸಿದ್ದು, ರಾಜ್ಯದ ಹಲವು ಕಡೆ ನಡೆಯುವ ಯೋಗ ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್ (Vistara News) ಸಹಭಾಗಿತ್ವ ವಹಿಸಿದೆ. ಈ ನಿಟ್ಟಿನಲ್ಲಿ ಜನತೆ ಈ ಯೋಗ ಅಭಿಯಾನಕ್ಕೆ ಉತ್ತಮ ಸ್ಪಂದನೆ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ಬಾಗಲಕೋಟೆಯಲ್ಲಿ ಉತ್ತಮ ಸ್ಪಂದನೆ
ವಿಸ್ತಾರ ನ್ಯೂಸ್‌ನ ಯೋಗ ಅಭಿಯಾನಕ್ಕೆ ಬಾಗಲಕೋಟೆ ಜಿಲ್ಲೆಯ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ವಿಸ್ತಾರ ನ್ಯೂಸ್ ಮತ್ತು ಸ್ವಾಮಿ ವಿವೇಕಾನಂದ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಸಹಭಾಗಿತ್ವದಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಬೀಳಗಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಯೋಗ ಶಿಕ್ಷಕ ಕಟ್ಟಿಮನಿ ಮಾರ್ಗದರ್ಶನ ನೀಡಿದರು.
ಇಳಕಲ್ಲನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಹ ಯೋಗ ದಿನಾಚರಣೆ ನಡೆದಿದ್ದು, 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಯೋಗ ಗುರು ಕೃಷ್ಣ ಲದ್ವಾ ಮಾರ್ಗದರ್ಶನ ನೀಡಿದರು.
ಕಲಬುರಗಿಯಲ್ಲಿ ಯೋಗ ದಿನಾಚರಣೆ
ಅಫಜಲಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ವಿಸ್ತಾರ ನ್ಯೂಸ್ ಹಾಗೂ ಆಯುಷ್ ಆರೋಗ್ಯ ಕ್ಷೇಮ ಕೇಂದ್ರ ಮತ್ತು ಆಯುರ್ವೇದ ಚಿಕಿತ್ಸಾಲಯ ಬಳೂರ್ಗಿರವರ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಅವರಿಂದ ಯೋಗಾಭ್ಯಾಸಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: Yoga Day 2023: ಸುತ್ತೂರು ಮಠದಲ್ಲಿ ಯೋಗ ದಿನಾಚರಣೆ; 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಗದಗಿನ ಲಕ್ಷ್ಮೇಶ್ವರದಲ್ಲಿ ಯೋಗಾಯೋಗ
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿನ ತಾಯಿ ಪಾರ್ವತಿ ಮಕ್ಕಳ ಬಳಗ ಶಾಲಾ ಆವರಣದಲ್ಲಿ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಯೋಗ ಸಾಧಕರ ಸಮಿತಿ, ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ವಿವಿಧೋದ್ದೇಶಗಳ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆ, ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪಟ್ಟಣದ ಶಾಲಾ, ಕಾಲೇಜು ಮಕ್ಕಳು ದಿನಾಚರಣೆಯಲ್ಲಿ ಭಾಗಿಯಾಗಿದ್ದರು.