ಮೈಸೂರು: ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ಯೋಗ ದಿನ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕಾರ್ಯಕ್ರಮ. ರಾಜ್ಯ ಸರ್ಕಾರದ್ದು ಪೋಷಕ ಪಾತ್ರ ಮಾತ್ರ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ನಗರದ ಅರಮನೆ ಆವರಣದಲ್ಲಿ ಜೂನ್ 21ರಂದು ಆಯೋಜಿಸಿರುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅರಮನೆ ಆಡಳಿತ ಮಂಡಳಿ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಇದನ್ನೂ ಓದಿ | ಕೋಡಿಮಠ ಸ್ವಾಮೀಜಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲ ಒಂದೆ: ಯಾರ ಮಾತೂ ಗಂಭೀರವಲ್ಲ ಎಂದ ಪ್ರತಾಪ್ ಸಿಂಹ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗಾಭ್ಯಾಸಕ್ಕೆ ಅರಮನೆ ಸ್ಥಳ ನಿಗದಿ ಮಾಡಲಾಗಿದೆ. ಗಿನ್ನಿಸ್ ರೆಕಾರ್ಡ್ ಮಾಡಲು ಯೋಗ ಮಾಡುತ್ತಿಲ್ಲ. ರೆಕಾರ್ಡ್ ಮುಂದಿನ ವರ್ಷ ಬೇಕಾದರೂ ಮಾಡಬಹುದು. ಹೀಗಾಗಿ ಅಚ್ಚುಕಟ್ಟಾಗಿ ಯೋಗ ದಿನಾಚರಣೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
ಇದು ಸಂಪೂರ್ಣ ಕೇಂದ್ರ ಸರ್ಕಾರದ ಕಾರ್ಯಕ್ರಮ. ಇದರಲ್ಲಿ ರಾಜ್ಯ ಸರ್ಕಾರದ್ದು ಪೋಷಕ ಪಾತ್ರ ಮಾತ್ರ. ಇಲ್ಲಿ ನಾವು ವಿಶ್ವ ಯೋಗ ದಿನ ಆಚರಣೆ ಮಾಡುತ್ತೇವೆ, ಅದಕ್ಕೆ ಬೇಕಾದ ಸಹಕಾರವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೊಡುತ್ತದೆ ಎಂದು ತಿಳಿಸಿದರು.
ಮೋದಿ ಅವರು ಯೋಗ ಕಾರ್ಯಕ್ರಮದ ಜತೆಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ಕೊಡಲಿದ್ದಾರೆ. ಸುತ್ತೂರು ಶ್ರೀಗಳು ಕೂಡ ಮಠಕ್ಕೆ ಭೇಟಿ ಕೊಡುವಂತೆ ಕೇಳಿದ್ದಾರೆ. ಹೀಗಾಗಿ ಪ್ರಧಾನಿ ಸಂಚಾರ ಮಾಡುವ ಸ್ಥಳಗಳ ಮಾರ್ಕಿಂಗ್, ಟ್ರಾಫಿಕ್ ನಿಯಂತ್ರಣ, ಬದಲಿ ಮಾರ್ಗಗಳು, ಸ್ಥಳಾಂತರ, ಹೋಟೆಲ್‌ಗಳ ಭದ್ರತೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಂಸದರು, ಅಂತಿಮವಾಗಿ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ನೀಡುವ ಮಾರ್ಗಸೂಚಿ ಪ್ರಕಾರ ಪ್ರಧಾನಿ ಕಾರ್ಯಕ್ರಮಗಳ ವೇಳಾಪಟ್ಟಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | International Yoga day : ಮೈಸೂರಿಗೆ ಆಗಮಿಸುತ್ತಾರೆ ಪ್ರಧಾನಿ ನರೇಂದ್ರ ಮೋದಿ